ಕಲ್ಲೇಶ್ವರ ಸ್ವಾಮಿ ದೊಡ್ಡ ರಥೋತ್ಸವಕ್ಕೆ ಕ್ಷಣಗಣನೆ; ಕಲ್ಲೇದೇವರಪುರದಲ್ಲಿ ಭಕ್ತ ಸಮೂಹ
ಜಗಳೂರು: ತಾಲೂಕಿನ ಕಲ್ಲೇದೇವರಪುರ ಗ್ರಾಮದಲ್ಲಿ ಆರಾಧ್ಯ ದೈವವಾದ ಶ್ರೀ ಕಲ್ಲೇಶ್ವರ ಸ್ವಾಮಿ ದೊಡ್ಡ ರಥೋತ್ಸವಕ್ಕೆ ಕ್ಷಣಗಣನೆ ಪ್ರಾರಂಭವಾಗಿದ್ದು, ಶ್ರೀ ಕ್ಷೇತ್ರದತ್ತ ಭಕ್ತ ಸಮೂಹ ಹರಿದು ಬರುತ್ತಿದೆ. ಸಂಜೆ 4.30 ಕ್ಕೆ ರಥೋತ್ಸವ ನೆರವೇರಲಿದೆ.
ಗ್ರಾಮಕ್ಕೆ ಕಲ್ಲೇಶ್ವರ ದೇವರು ನೆಲೆಸಿದ ಕಾರಣವೇ ಕಲ್ಲೇದೇವರಪುರ ಎಂಬ ಹೆಸರು ಬಂದಿದ್ದು, ಪ್ರತಿವರ್ಷ ಮಾರ್ಚ್–ಏಪ್ರಿಲ್ ತಿಂಗಳಲ್ಲಿ ನಡೆಯುವ ಈ ಜಾತ್ರೆ ಭಕ್ತರ ಮನ ಸೆಳೆಯುತ್ತದೆ.
ಆರು ದಿನಗಳ ಕಾಲ ನಡೆಯುವ ಈ ಮಹೋತ್ಸವದಲ್ಲಿ ಅಡ್ಡಪಲ್ಲಕ್ಕಿ ಉತ್ಸವ, ಕೋಲಾಟ, ಓಕುಳಿ ಸೇವೆಗಳು ವಿಜೃಂಭಣೆಯಿಂದ ನಡೆಯುತ್ತಿದ್ದು, ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.
ಉತ್ಸವದ ಅಂಗವಾಗಿ ಏಪ್ರಿಲ್ 4ರಂದು ಕಂಕಣಧಾರಣೆ, ಏಪ್ರಿಲ್ 5ರಂದು ಮದಲಿಂಗ ಶಾಸ್ತ್ರ, ಏಪ್ರಿಲ್ 6ರಂದು ಅಶ್ವವಾಹನೋತ್ಸವ ನೆರವೇರಿತ್ತು.
ಏಪ್ರಿಲ್ 9ರಂದು ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಕೋಲಾಟ, ಏಪ್ರಿಲ್ 10ರಂದು ಓಕುಳಿ ಉತ್ಸವ ನಡೆಯಲಿದೆ.
ಪ್ರತಿ ವರ್ಷ ವೈಶಾಖ ಮಾಸದ ಹುಣ್ಣಿಮೆಯಲ್ಲಿ ನಡೆಯುವ ಕಲ್ಲೇಶ್ವರ ಜಾತ್ರೆ ಹಾಗೂ ನಂತರದ ದನಗಳ ಜಾತ್ರೆ ವಿಶೇಷ ಆಕರ್ಷಣೆಯಾಗಿದ್ದು, 5ನೇ ದಿನ ನಡೆಯುವ ಮಹಾರಥೋತ್ಸವ ಅತ್ಯಂತ ವೈಭವದಿಂದ ಕಂಗೊಳಿಸುತ್ತದೆ.
ಗ್ರಾಮದ ಸಮೀಪದ ಬಸಪ್ಪನಹಳ್ಳಿ ಬಸವಣ್ಣನ ಗುಡಿಯ ಅಂಗಳದಲ್ಲಿ ಕಲ್ಲೇಶ್ವರ ಸ್ವಾಮಿಯ ಪರೇವು ಆಚರಣೆ ಕೂಡ ಭಕ್ತಿಭಾವದಿಂದ ನಡೆಯುತ್ತದೆ.
ಶಿಲ್ಪಕಲೆಯ ವೈಭವದ ದೇವಾಲಯ
ಗ್ರಾಮದ ಮಧ್ಯಭಾಗದಲ್ಲಿರುವ ಈ ಪೂರ್ವಾಭಿಮುಖ ದೇವಾಲಯವು ಕಲ್ಯಾಣ ಚಾಲುಕ್ಯ ಮತ್ತು ಹೊಯ್ಸಳ ಶೈಲಿಯ ಸಮ್ಮಿಶ್ರಣ ಎಂಬಂತೆ ಕಾಣಿಸುತ್ತದೆ. ಗರ್ಭಗೃಹದಲ್ಲಿ ಕಪ್ಪು ಶಿಲೆಯಿಂದ ನಿರ್ಮಿತವಾದ ಸುಂದರ ಶಿವಲಿಂಗವಿದ್ದು, ನವರಂಗದಲ್ಲಿ ಹೊಯ್ಸಳ ಶೈಲಿಯ ಕೆತ್ತನೆಯ ನಾಲ್ಕು ಕಂಬಗಳು ಗಮನ ಸೆಳೆಯುತ್ತವೆ.
ಮುಖಮಂಟಪದ ಮುಂದೆ ಇರುವ ನಂದಿಯನ್ನು ಅಂಕಲಿ ಬಸವಣ್ಣ, ಮಹಾಮಂಟಪದ ಮುಂದಿರುವ ನಂದಿಯನ್ನು ತೊಟ್ಟಿಬೆಳೆ ಬಸವಣ್ಣ ಎಂದು ಕರೆಯಲಾಗುತ್ತದೆ. ದೇವಾಲಯದ ಹಿಂಭಾಗದಲ್ಲಿರುವ ವಿಶಾಲ ಮಾನದ ಮಂಟಪವೂ ವಿಶೇಷ ಆಕರ್ಷಣೆಯಾಗಿದೆ.
ಸ್ವಾಮಿಯ ಬೇಡಿಕೆ ಈಡೇರಿದ ಬಳಿಕ ಸಾವಿರಾರು ಭಕ್ತರು ಹರಕೆ ಸಲ್ಲಿಸಲು ಇಲ್ಲಿ ಬರುತ್ತಾರೆ ಎಂದು ಪ್ರಧಾನ ಅರ್ಚಕ ರುದ್ರಮುನಿ ತಿಳಿಸಿದ್ದಾರೆ.
