ಮದ್ದೂರು: ನನಗೆ ಕನಕಪುರ ಎಷ್ಟು ಮುಖ್ಯವೋ, ಮಂಡ್ಯದ ಏಳು ಕ್ಷೇತ್ರಗಳು ಅಷ್ಟೇ ಮುಖ್ಯ. ಮದ್ದೂರಿನ ಶಾಸಕ ಉದಯ್ ಅವರ ಬೆನ್ನಿಗೆ ಇಡೀ ಸರ್ಕಾರ ನಿಂತಿದೆ. ಕ್ಷೇತ್ರದ ಜನರ ಋಣ ತೀರಿಸಲು 1146 ಕೋಟಿ ಮೊತ್ತದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.ಮದ್ದೂರಿನಲ್ಲಿ ನಡೆದ ಮೊತ್ತದ ವಿವಿಧ ಇಲಾಖೆಗಳ ಹಲವು ಯೋಜನೆಗಳ ಕಾಮಗಾರಿ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.“ನಾವು ಇಂದು ನಿಮ್ಮಿಂದ ಜೈಕಾರ ಹಾಕಿಸಿಕೊಳ್ಳಲು ಬಂದಿಲ್ಲ. ಈ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಉದಯ್ ಅವರನ್ನು ಗೆಲ್ಲಿಸಿ ಜಿಲ್ಲೆಯ 7 ಸ್ಥಾನಗಳ ಪೈಕಿ 6ರಲ್ಲಿ ಕಾಂಗ್ರೆಸ್ ನ್ನು ಬೆಂಬಲಿಸಿದ್ದೀರಿ. ಆಮೂಲಕ ರಾಜ್ಯದಲ್ಲಿ 136 ಸಂಖ್ಯಾಬಲದ ಬಲಿಷ್ಠ ಸರ್ಕಾರ ರಚನೆಗೆ ಸಹಕಾರ ನೀಡಿರುವ ನಿಮ್ಮ ಋಣ ತೀರಿಸಲು ನಾವಿಲ್ಲಿಗೆ ಬಂದಿದ್ದೇವೆ” ಎಂದು ತಿಳಿಸಿದರು.
“ನೀರಾವರಿ ಇಲಾಖೆಯ ಕಚೇರಿಯನ್ನು ನಾನು ಆರಂಭಿಸುತ್ತಿದ್ದೇನೆ. ಮಳವಳ್ಳಿವರೆಗೂ ನೀರು ಹರಿಸಿ, ಮದ್ದೂರಿನ ಕಾಲುವೆಗಳ ಅಭಿವೃದ್ಧಿ ದೃಷ್ಟಿಯಿಂದ ಸುಮಾರು 500 ಕೋಟಿಗೂ ಹೆಚ್ಚು ಮೊತ್ತದ ಹಣವನ್ನು ನೀಡಿದ್ದೇವೆ. ಚೆಲುವರಾಯಸ್ವಾಮಿ ಅವರು ಕೂಡ ಸಾಕ್ಷಿಗುಡ್ಡೆ ಬಿಟ್ಟು ಹೋಗಲು, ರೈತರ ಮಕ್ಕಳಿಗಾಗಿ ಕೃಷಿ ವಿವಿ ತರಲು ಮುಂದಾಗಿದ್ದಾರೆ. ಜಿಲ್ಲೆಯ ಏಳೂ ಕ್ಷೇತ್ರಗಳಲ್ಲಿ ವಿವಿಧ ಯೋಜನೆ ಹಮ್ಮಿಕೊಳ್ಳಲಾಗಿದೆ. ಈ ಜಿಲ್ಲೆಯಲ್ಲಿ ಅತಿಹೆಚ್ಚು ಶಾಸಕರು ಗೆದ್ದಾಗ ಕಾಂಗ್ರೆಸ್ ಸರ್ಕಾರ ರಚನೆಯಾಗಿದೆ” ಎಂದರು.ಜನರ ಬದುಕಿಗಾಗಿ 1 ಲಕ್ಷ ಕೋಟಿ ಅನುದಾನ“ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ಈ ಕೈ ಅಧಿಕಾರದಲ್ಲಿದ್ದ ಕಾರಣಕ್ಕೆ ನಿಮಗೆ ಪಂಚ ಗ್ಯಾರಂಟಿ ಯೋಜನೆ ನೀಡಲಾಗಿದೆ. ಮಹಿಳೆಯರು ರಾಜ್ಯದಲ್ಲಿ ಉಚಿತ ಬಸ್ ಪ್ರಯಾಣ ಮಾಡುತ್ತಿದ್ದಾರೆ, ಮನೆಗಳಿಗೆ 200 ಯೂನಿಟ್ ವರೆಗೂ ಉಚಿತ ವಿದ್ಯುತ್ ಬರುತ್ತಿದೆ. ಮಹಿಳೆಯರಿಗೆ ತಿಂಗಳಿಗೆ 2 ಸಾವಿರ ಹಣ, 10 ಕೆ.ಜಿ ಅಕ್ಕಿ, ನಿರುದ್ಯೋಗಿ ಯುವಕರಿಗೆ ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ. ಇಡೀ ದೇಶದಲ್ಲಿ ಯಾವುದೇ ಸರ್ಕಾರ ಈ ರೀತಿ ಯೋಜನೆ ನೀಡಿಲ್ಲ” ಎಂದು ಸರ್ಕಾರದ ಕಾರ್ಯವನ್ನು ಬಣ್ಣಿಸಿದರು.
“ಸಿಎಂ ಸಿದ್ದರಾಮಯ್ಯ ಅವರು 4.08 ಲಕ್ಷ ಕೋಟಿ ಮೊತ್ತದ ಬಜೆಟ್ ಮಂಡಿಸಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ, ನಮ್ಮ ಸರ್ಕಾರ ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡಲು ವರ್ಷಕ್ಕೆ 19 ಸಾವಿರ ಕೋಟಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಇತರೆ ಇಲಾಖೆಗಳಿಂದ 25 ಸಾವಿರ ಕೋಟಿಯಷ್ಟು ಹಣವನ್ನು ಜನರಿಗೆ ನೀಡುತ್ತಿದ್ದೇವೆ. 10,900 ಕೋಟಿಯಷ್ಟು ಹಣವನ್ನು ಪಿಂಚಣಿಗಾಗಿ ನೀಡುತ್ತಿದ್ದೇವೆ. ಆಮೂಲಕ ಬಜೆಟ್ಟಿನ 1 ಲಕ್ಷ ಕೋಟಿಯಷ್ಟು ಹಣವನ್ನು ಜನರಿಗಾಗಿ ನೀಡುತ್ತಿದ್ದೇವೆ” ಎಂದು ವಿವರಿಸಿದರು.“ನೀವು ಅಧಿಕಾರದಲ್ಲಿದ್ದಾಗ ಇಂತಹ ಯಾವುದಾದರೂ ಒಂದು ಯೋಜನೆಯನ್ನು ಜಾರಿಗೆ ತಂದಿದ್ದೀರಾ ಎಂದು ನೀವೆಲ್ಲರೂ ಬಿಜೆಪಿಯವರನ್ನು ಕೇಳಬೇಕು. ಕಷ್ಟದಲ್ಲಿದ್ದ ಜನರಿಗೆ ಸಹಾಯ ಮಾಡಿದ್ದಾರಾ? ಮಾಡಿಲ್ಲ. ಹೀಗಾಗಿ ಅವರು ನಮ್ಮ ಬಗ್ಗೆ ಮಾತನಾಡಲು ನೈತಿಕತೆ ಕಳೆದುಕೊಂಡಿದ್ದಾರೆ. ಸಾಧನೆ ಎಂಬುದು ಸುಮ್ಮನೆ ಬರುವುದಿಲ್ಲ. ಅದು ಕಾಲ ಬುಡದಲ್ಲಿ ಇರುವುದಿಲ್ಲ, ಶ್ರಮದ ಪರ್ವತದ ತುದಿಯಲ್ಲಿ ಸಾಧನೆ ಇರುತ್ತದೆ. ನಮ್ಮ ಕಾಂಗ್ರೆಸ್ ಸರ್ಕಾರ ಅನೇಕ ಕಾರ್ಯಕ್ರಮದ ಮೂಲಕ ಜನರ ಬದುಕು ಬದಲಿಸುತ್ತಿದೆ” ಎಂದು ಹೇಳಿದರು.
ಪಕ್ಷದ ಕಚೇರಿಗಾಗಿ ಸ್ವಂತ ಆಸ್ತಿ ಬಿಟ್ಟುಕೊಟ್ಟ ಉದಯ್ ಅವರಿಗೆ ಅಭಿನಂದನೆ
“ನಾವು ಯೋಗಿ ಎಂದು ಕರೆಸಿಕೊಳ್ಳುವುದಕ್ಕಿಂತ ಉಪಯೋಗಿ ಎಂದು ಕರೆಸಿಕೊಳ್ಳುವುದು ಬಹಳ ಮುಖ್ಯ. ಸ್ಥಳೀಯ ಶಾಸಕ ಉದಯ್ ಅವರು ಕ್ಷೇತ್ರದಲ್ಲಿ ಎಲ್ಲಾ ಇಲಾಖೆ ಕೆಲಸಗಳನ್ನು ಮಾಡುವ ಮೂಲಕ ನಿಮ್ಮ ಸೇವೆ ಮಾಡುತ್ತಿದ್ದಾರೆ. ಹದಿನೈದು ದಿನಗಳ ಹಿಂದೆ ನಾನು ಇಲ್ಲಿನ ತಾಲೂಕು ಕಚೇರಿಗೆ ಬಂದಿದ್ದೆ. ನಮ್ಮ ಶಾಸಕ ಉದಯ್ ಅವರು 2 ಕೋಟಿ ಮೊತ್ತದ ನಿವೇಷನವನ್ನು ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ನೀಡಿದ್ದಾರೆ. ಚಿಕ್ಕಮಗಳೂರಿನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಂಶು, ಇಲ್ಲಿನ ಶಾಸಕರಾದ ಉದಯ್, ಶಿರಗುಪ್ಪ ಶಾಸಕರಾದ ನಾಗರಾಜ್, ಸಚಿವ ಸಂತೋಷ್ ಲಾಡ್, ಗದಗ ಶಾಸಕ ಜಿ.ಎಸ್ ಪಾಟೀಲ್, ಸಚಿವರಾದ ಶರಣಪ್ರಕಾಶ್ ಪಾಟೀಲ್ ಸೇರಿದಂತೆ ರಾಜ್ಯದಲ್ಲಿ ಆರು ಜನ ತಮ್ಮ ಆಸ್ತಿಯನ್ನು ಕಾಂಗ್ರೆಸ್ ಕಚೇರಿಗಾಗಿ ದಾನ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ನಿಮ್ಮ ಶಾಸಕ ಉದಯ್ ಅವರಿಗೆ ನಮನ ಅರ್ಪಿಸುತ್ತೇನೆ” ಎಂದರು.ದೇವರು ವರ ಹಾಗೂ ಶಾಪ ನೀಡುವುದಿಲ್ಲ. ಕೇವಲ ಅವಕಾಶ ಮಾತ್ರ ನೀಡುತ್ತಾನೆ. ನಮಗೆ ಸಿಕ್ಕ ಅವಕಾಶದಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಮೋದಿ ಅವರು ಅಧಿಕಾರಕ್ಕೆ ಬರುವ ಮುನ್ನ ಅಚ್ಛೇದಿನ ಬರುತ್ತದೆ ಎಂದಿದ್ದರು. ಅವರು ಹೇಳಿದ್ದ ಅಚ್ಛೇದಿನ, ಖಾತೆಗೆ 15 ಲಕ್ಷದ ವಿಚಾರ ಏನಾಯ್ತು ಎಂದು ನೀವೆಲ್ಲರೂ ಬಿಜೆಪಿ ಹಾಗೂ ಕುಮಾರಸ್ವಾಮಿ ಅವರನ್ನು ಕೇಳಬೇಕು” ಎಂದರು
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



