ಭವಿಷ್ಯ ನಿರ್ಧಾರಕ್ಕೆ ಕೌಂಟ್ ಡೌನ್; ಶುರುವಾಯ್ತು ಢವಢವ…
ಬೆಂಗಳೂರು: ಇಡೀ ರಾಜ್ಯದ ಕುತೂಹಲ ಕೆರಳಿಸಿರುವ ಧಾರವಾಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದ ಸುದೀರ್ಘ 8 ವರ್ಷಗಳ ಕಾನೂನು ಹೋರಾಟ ಇಂದು ಅಂತ್ಯಗೊಳ್ಳಲಿದೆ.
ಮಾಜಿ ಸಚಿವ ಹಾಗೂ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 21 ಆರೋಪಿಗಳ ಭವಿಷ್ಯವನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು (ಗುರುವಾರ) ಪ್ರಕಟಿಸಲಿದೆ.
2016ರಲ್ಲಿ ಧಾರವಾಡದಲ್ಲಿ ಯೋಗೇಶ್ ಗೌಡ ಅವರನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಆರಂಭದಲ್ಲಿ ಪ್ರಕರಣದ ತನಿಖೆ ನಡೆಸಿದ್ದ ಸ್ಥಳೀಯ ಪೊಲೀಸರು, ಇದು ಆಸ್ತಿ ವಿವಾದಕ್ಕಾಗಿ ನಡೆದ ಕೊಲೆ ಎಂದು ಹೇಳಿ ಆರು ಮಂದಿಯನ್ನು ಬಂಧಿಸಿದ್ದರು. ಆದರೆ, ಮೃತರ ಕುಟುಂಬದವರು ಇದೊಂದು ರಾಜಕೀಯ ಪ್ರೇರಿತ ಕೊಲೆ ಎಂದು ಆರೋಪಿಸಿ ಸಿಬಿಐ ತನಿಖೆಗೆ ಒತ್ತಾಯಿಸಿದ್ದರು.
2019ರಲ್ಲಿ ಪ್ರಕರಣ ಸಿಬಿಐ ಕೈಗೆ ಹೋದ ನಂತರ ತನಿಖೆಯ ದಿಕ್ಕೇ ಬದಲಾಯಿತು. ಇದರಲ್ಲಿ ರಾಜಕೀಯ ಸಂಚು ಇರುವುದನ್ನು ಪತ್ತೆಹಚ್ಚಿದ ಸಿಬಿಐ, 2020ರ ನವೆಂಬರ್‌ನಲ್ಲಿ ವಿನಯ್ ಕುಲಕರ್ಣಿ ಅವರನ್ನು ಬಂಧಿಸಿತ್ತು. ಸದ್ಯ ವಿನಯ್ ಕುಲಕರ್ಣಿ ಜಾಮೀನಿನ ಮೇಲೆ ಹೊರಗಿದ್ದಾರೆ.
ಇಂದಿನ ತೀರ್ಪು ಏಕೆ ಮುಖ್ಯ?
ಈ ತೀರ್ಪು ಕೇವಲ 21 ಜನರ ಭವಿಷ್ಯವನ್ನಷ್ಟೇ ನಿರ್ಧರಿಸುವುದಿಲ್ಲ, ಬದಲಿಗೆ ಕರ್ನಾಟಕ ರಾಜಕಾರಣದ ಮೇಲೂ ದೊಡ್ಡ ಪರಿಣಾಮ ಬೀರಲಿದೆ. ಒಂದು ವೇಳೆ ಶಿಕ್ಷೆ ಪ್ರಕಟವಾದರೆ, ಪ್ರಭಾವಿ ನಾಯಕರ ರಾಜಕೀಯ ಜೀವನಕ್ಕೆ ದೊಡ್ಡ ಹಿನ್ನಡೆಯಾಗುವ ಸಾಧ್ಯತೆಯಿದೆ.
ಸುಮಾರು 8 ವರ್ಷಗಳ ಕಾಲ ಸಾಕ್ಷಿ ವಿಚಾರಣೆ, ವಾದ-ಪ್ರತಿವಾದಗಳನ್ನು ಆಲಿಸಿರುವ ನ್ಯಾಯಾಲಯವು ಇಂದು ಮಧ್ಯಾಹ್ನದ ವೇಳೆಗೆ ತನ್ನ ಅಂತಿಮ ಆದೇಶವನ್ನು ಹೊರಹಾಕುವ ಸಾಧ್ಯತೆಯಿದೆ.
ಪ್ರಕರಣದ ಹೈಲೈಟ್ಸ್: ಕೊಲೆ ನಡೆದ ದಿನ: ಜೂನ್ 15, 2016 (ಧಾರವಾಡದ ಸಪ್ತಾಪುರ ಜಿಮ್‌ನಲ್ಲಿ ಹತ್ಯೆ).
ಪ್ರಮುಖ ಆರೋಪಿ: ಮಾಜಿ ಸಚಿವ, ಹಾಲಿ ಶಾಸಕ ವಿನಯ್ ಕುಲಕರ್ಣಿ.
ತನಿಖಾ ಸಂಸ್ಥೆ: ಸಿಬಿಐ.
ಒಟ್ಟು ಆರೋಪಿಗಳು: 21 ಮಂದಿ.
