ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ನಡೆದ ಮಾತುಕತೆ ವಿಫಲವಾದ ಕಾರಣ, ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ಇಂದಿನಿಂದ ಅನಿರ್ದಿಷ್ಟ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.ಸಾರಿಗೆ ನೌಕರರ ಮುಷ್ಕರವು ಕರ್ನಾಟಕ ಮತ್ತು ಹೊರಗಿನ ಬಸ್‌ಗಳ ಕಾರ್ಯಾಚರಣೆಯ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌ಆರ್‌ಟಿಸಿ) ಮತ್ತು ಬೆಂಗಳೂರು ಮಹಾನಗರ ಸಾರಿಗೆ ನಿಗಮ(ಬಿಎಂಟಿಸಿ)ಯನ್ನು ತಮ್ಮ ಪ್ರಯಾಣಕ್ಕಾಗಿ ಅವಲಂಬಿಸಿರುವ ಲಕ್ಷಾಂತರ ಪ್ರಯಾಣಿಕರಿಗೆ ಅನಾನುಕೂಲತೆ ಉಂಟು ಮಾಡುವ ಸಾಧ್ಯತೆಯಿದೆ.ಏತನ್ಮಧ್ಯೆ, ಕರ್ನಾಟಕ ಹೈಕೋರ್ಟ್ ಸೋಮವಾರ, ನೌಕರರ ಮುಷ್ಕರವನ್ನು ಒಂದು ದಿನ ಮುಂದೂಡುವಂತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಗೆ ಸೂಚನೆ ನೀಡಿದೆ.
ಹೈಕೋರ್ಟ್ ನಿರ್ದೇಶನಕ್ಕೆ ಪ್ರತಿಕ್ರಿಯಿಸಿದ ಜೆಎಸಿ ಅಧ್ಯಕ್ಷ ಅನಂತ ಸುಬ್ಬರಾವ್ ಅವರು, ಹೈಕೋರ್ಟ್ ಆದೇಶದ ಪ್ರತಿ ಇನ್ನೂ ನಮ್ಮ ಕೈಗೆ ತಲುಪಿಲ್ಲ. ಆದೇಶ ಪ್ರತಿ ಕೈತಲುಪಿದ ಬಳಿಕ ಬಂದ್ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಹೇಳಿದ್ದಾರೆ.ಹೈಕೋರ್ಟ್ ಯಾವ ದೃಷ್ಟಿಯಲ್ಲಿ ಈ ರೀತಿಯಾಗಿ ಆದೇಶ ಕೊಟ್ಟಿದೆ ಗೊತ್ತಿಲ್ಲ. ಆದರೆ ಹೈಕೋರ್ಟ್ ಒಂದು ದಿನ ಮುಂದೂಡುವ ಆದೇಶದ ಬದಲು, ನಮ್ಮ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಸೂಚಿಸಿದ್ದರೆ ಒಳ್ಳೆಯದಿತ್ತು. ಒಂದು ದಿನ ಮುಂದೂಡಿ ಮತ್ತೊಂದು ದಿನ ಪ್ರತಿಭಟನೆ ನಡೆಸಿದರೆ. ಆದರಿಂದ ಏನು ಬದಲಾವಣೆ ಆಗುತ್ತದೆ ಎಂದು ಅನಂತ ಸುಬ್ಬರಾವ್ ಹೇಳಿದ್ದಾರೆ.
ಜನವರಿ 1, 2024 ರಿಂದ ಜಾರಿಗೆ ಬರುವಂತೆ ಶೇ. 25 ರಷ್ಟು ವೇತನ ಹೆಚ್ಚಳ ಸೇರಿದೆತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದಾರೆ.ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಫೆಡರೇಶನ್ ಅಧ್ಯಕ್ಷ H. V. ಅನಂತ ಸುಬ್ಬರಾವ್ ಮತ್ತು JAC ಪ್ರತಿನಿಧಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದರು. ಸಂಧಾನ ಸಭೆ ಸುಮಾರು ಮೂರು ಗಂಟೆಗಳ ಕಾಲ ನಡೆಯಿತು.ಸಭೆಯ ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅನಂತ ಸುಬ್ಬರಾವ್, ಮುಷ್ಕರ ಮುಂದುವರಿಸುವುದಾಗಿ ಹೇಳಿದರು. “ಜನವರಿ 1, 2024 ರಿಂದ ಶೇ. 25 ರಷ್ಟು ವೇತನ ಹೆಚ್ಚಳ ಪರಿಷ್ಕರಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬದ್ಧವಾಗಿಲ್ಲ. 38 ತಿಂಗಳ ವೇತನ ಬಾಕಿಯನ್ನು ತೆರವುಗೊಳಿಸುವ ಬದಲು ಕೇವಲ 14 ತಿಂಗಳ ವೇತನ ಮಾತ್ರ ಪಾವತಿಸಲು ಒಪ್ಪಿಕೊಂಡಿದ್ದಾರೆ ಎಂದರು.
ಮುಷ್ಕರವನ್ನು ಎದುರಿಸಲು ಖಾಸಗಿ ಬಸ್‌ಗಳ ಕಾರ್ಯಾಚರಣೆಯ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸಿದ ಸುಬ್ಬರಾವ್, ಸರ್ಕಾರವು ಏನು ಬೇಕಾದರೂ ಮಾಡಲು ಸ್ವತಂತ್ರವಾಗಿದೆ ಎಂದು ಹೇಳಿದರು. “ಸರ್ಕಾರ ಜನರನ್ನು ಸಾಗಿಸಲು ಖಾಸಗಿ ಬಸ್‌ಗಳು ಅಥವಾ ಟೆಂಪೋಗಳನ್ನು ಓಡಿಸಲಿ. ನಮ್ಮ ಆರ್‌ಟಿಸಿ ನೌಕರರು ಮನೆಯಲ್ಲಿಯೇ ಇರುತ್ತಾರೆ ಮತ್ತು ಕೆಲಸಕ್ಕೆ ವರದಿ ಮಾಡುವುದಿಲ್ಲ” ಎಂದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



