ಸರ್ಕಾರದ ಒಳಮೀಸಲಾತಿ ನೀತಿ, ಆಯೋಗಗಳ ವರದಿ ಹಾಗೂ ರೋಸ್ಟರ್ ವ್ಯವಸ್ಥೆಗಳ ವಿರುದ್ಧವಾಗಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟವು ಮಾ.24ರಂದು ನಗರದ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಂಡಿದೆ ಎಂದು ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ತಿಳಿಸಿದ್ದಾರೆ.
ವಸಂತನಗರದ ಜಸ್ಮಾಭವನದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೋವಿ, ಬಂಜಾರ, ಕೊರಮ, ಕೊರಚ ಸೇರಿದಂತೆ ಸೂಕ್ಷ್ಮ, ಅತಿಸೂಕ್ಷ್ಮ ಮತ್ತು ಅಲೆಮಾರಿ ಸಮುದಾಯಗಳ 59 ಜಾತಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು. ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವಿಚಾರದಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳು ಅವೈಜ್ಞಾನಿಕವಾಗಿದ್ದು, ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಏಕಸದಸ್ಯ ಆಯೋಗದ ವರದಿ ಅಪೂರ್ಣವಾಗಿದೆ ಎಂದು ಟೀಕಿಸಿದರು.
ಆಯೋಗದ ವರದಿಯಲ್ಲಿ ಸಮುದಾಯಗಳ ನಿಜವಾದ ಜನಸಂಖ್ಯೆ ಸರಿಯಾಗಿ ಪ್ರತಿಬಿಂಬಿತವಾಗಿಲ್ಲ. 2011ರ ಜನಗಣತಿಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿದ್ದ ಭೋವಿ ಸಮುದಾಯವನ್ನು ಕಡಿಮೆ ಪ್ರಮಾಣದಲ್ಲಿ ತೋರಿಸಲಾಗಿದೆ. ಇದೇ ವೇಳೆ ವರದಿಯಲ್ಲೇ ಈ ಸಮುದಾಯಗಳು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಹಿಂದುಳಿದಿವೆ ಎಂಬುದು ಸ್ಪಷ್ಟವಾಗಿದ್ದರೂ, ಸರ್ಕಾರ ಒಳಮೀಸಲಾತಿ ರೂಪಿಸುವಾಗ ಇದನ್ನು ಪರಿಗಣಿಸಿಲ್ಲ ಎಂದು ಹೇಳಿದರು.
ಪ್ರವರ್ಗ A, B, C ವಿಭಾಗೀಕರಣವೂ ಜನಸಂಖ್ಯಾ ಅನುಪಾತಕ್ಕೆ ಹೊಂದಿಕೆಯಾಗಿಲ್ಲ. ಹಿಂದಿನ ನೇಮಕಾತಿಗಳಲ್ಲಿ ಕೆಲ ಪ್ರವರ್ಗಗಳಿಗೆ ಹೆಚ್ಚಿನ ಹುದ್ದೆಗಳು ಲಭಿಸಿದರೆ, ಪ್ರವರ್ಗ Cಗೆ ಅವಕಾಶವೇ ಸಿಗದ ಸ್ಥಿತಿ ಉಂಟಾಗಿದೆ. ಹೊಸ ರೋಸ್ಟರ್ ವ್ಯವಸ್ಥೆಯಲ್ಲೂ ಇದೇ ಅನ್ಯಾಯ ಮುಂದುವರಿದಿದ್ದು, ಇದರಿಂದ ಸಮುದಾಯಗಳ ಅಭಿವೃದ್ಧಿಗೆ ತೊಂದರೆಯಾಗುತ್ತದೆ ಎಂದು ಅವರು ಆಕ್ಷೇಪಿಸಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿಯನ್ನು ಶೇ.7ರಷ್ಟು ಹೆಚ್ಚಿಸಿರುವುದನ್ನು ಸಂವಿಧಾನದ ಶೆಡ್ಯೂಲ್ 9ರಲ್ಲಿ ಸೇರಿಸಿ ಸಂರಕ್ಷಿಸಬೇಕು. SCP-TSP ಅನುದಾನವನ್ನು ನೇರವಾಗಿ ಸಮುದಾಯಗಳ ಅಭಿವೃದ್ಧಿಗೆ ಬಳಸಬೇಕು ಹಾಗೂ ಜನಸಂಖ್ಯಾ ಆಧಾರಿತ ಅನುದಾನವನ್ನು ನಿಗಮಗಳಿಗೆ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಮಾ.27ರಂದು ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ಸಮಗ್ರ ಚರ್ಚೆ ನಡೆಸಿ ನ್ಯಾಯಸಮ್ಮತ ನಿರ್ಧಾರ ಕೈಗೊಳ್ಳಬೇಕು. 56 ಸಾವಿರ ಹುದ್ದೆಗಳ ಭರ್ತಿಯನ್ನು ಒಳಮೀಸಲಾತಿ ಅಂತಿಮಗೊಳ್ಳುವವರೆಗೆ ಮುಂದೂಡಬೇಕು ಎಂದು ಆಗ್ರಹಿಸಿದರು.
ಲಕ್ಷಾಂತರ ಜನರ ಭಾಗವಹಿಸುವ ನಿರೀಕ್ಷೆ:
ಒಕ್ಕೂಟದ ಅಧ್ಯಕ್ಷ ಡಾ. ಹೆಚ್. ರವಿ ಮಾಕಳಿ ಮಾತನಾಡಿ, ಮಾ.24ರ ಪ್ರತಿಭಟನೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ 2 ರಿಂದ 3 ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.
ಕಾರ್ಯಧ್ಯಕ್ಷ ರಾಘವೇಂದ್ರ ನಾಯಕ್ ಅವರು, ಒಳಮೀಸಲಾತಿ ಜಾರಿಗೆ ಮುನ್ನ ವೈಜ್ಞಾನಿಕ ಅಧ್ಯಯನ ಅಗತ್ಯವಿದ್ದು, ಸರ್ಕಾರ ತ್ವರಿತ ನಿರ್ಧಾರ ಕೈಗೊಂಡಿದೆ ಎಂದು ಟೀಕಿಸಿದರು. ಸುಪ್ರೀಂ ಕೋರ್ಟ್ ಸೂಚನೆಗಳನ್ನೂ ಪರಿಗಣಿಸದೇ ವರ್ಗೀಕರಣ ಮಾಡಿರುವುದು ಅನ್ಯಾಯ ಎಂದರು.
ಕಾರ್ಯಾಧ್ಯಕ್ಷ ಅನಂತನಾಯಕ ಹಳೆಯ ಮೀಸಲಾತಿ ನಿಯಮದಂತೆ ನೇಮಕಾತಿ ಮಾಡುವ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿ, ಪ್ರಸ್ತುತ ರೋಸ್ಟರ್ ಆದೇಶ ಹಿಂಪಡೆಯಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಆದರ್ಶ ಯಲ್ಲಪ್ಪ, ಪ್ರಧಾನ ಕಾರ್ಯದರ್ಶಿ ಹಾವೇರಿ ರವಿ ಪೂಜಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
