ಮತ್ತೊಂದು ದಾಖಲೆ ಬರೆದ ಪ್ರಧಾನಿ ಮೋದಿ; ಯಾವುದು ಗೊತ್ತಾ ?
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಂದು ಅಭೂತಪೂರ್ವ ಮೈಲಿಗಲ್ಲು ಸಾಧಿಸಿದ್ದಾರೆ. ಅವರು ಚುನಾಯಿತ ಸರ್ಕಾರದ ಮುಖ್ಯಸ್ಥರಾಗಿ ಅತಿ ಹೆಚ್ಚು ದಿನ ಅಧಿಕಾರ ನಡೆಸಿದ ಮೊದಲ ನಾಯಕ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಮೋದಿ ಅವರು ಮುಖ್ಯಮಂತ್ರಿ, ಪ್ರಧಾನಿಯಾಗಿ ಸರ್ಕಾರದ ಚುಕ್ಕಾಣಿಯನ್ನು ಹಿಡಿದು ಇಂದಿಗೆ 8931 ದಿನಗಳಾಗಿವೆ. ಈ ಮೂಲಕ ಸಿಕ್ಕೀಂನ ಮುಖ್ಯಮಂತ್ರಿ ಪವನ್ ಕುಮಾರ್ ಚಾಮ್ಲಿಂಗ್ ಅವರ ದಾಖಲೆಯನ್ನು ಮುರಿದರು. ಚಾಮ್ಲಿಂಗ್ ಅವರು 8930 ದಿನಗಳು ಅಧಿಕಾರ ನಡೆಸಿ ದೇಶದಲ್ಲಿಯೇ ಅತಿಹೆಚ್ಚು ದಿನ ಆಡಳಿತ ನಡೆಸಿದ ಮೊದಲಿಗರಾಗಿದ್ದರು.
ಮೋದಿ ಅವರ ಅಧಿಕಾರಾವಧಿಯನ್ನು ಎರಡು ಹಂತದಲ್ಲಿ ವಿಂಗಡಿಸಲಾಗಿದೆ. ಗುಜರಾತ್ ರಾಜ್ಯದ ಮುಖ್ಯಮಂತ್ರಿ, ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ದಿನಗಳನ್ನು ಒಟ್ಟುಗೂಡಿಸಲಾಗಿದೆ. ಸರ್ಕಾರದ ಮುಖ್ಯಸ್ಥರಾಗಿ 25ನೇ ವರ್ಷಕ್ಕೂ ಅವರು ಕಾಲಿಟ್ಟಿರುವುದು ವಿಶೇಷ. ಈ ಮೈಲಿಗಲ್ಲನ್ನು ಅಪರೂಪದ ಮತ್ತು ಮಹತ್ವದ ಸಾಧನೆ ಎಂದು ಪರಿಗಣಿಸಲಾಗಿದೆ.
ಮೋದಿ ಅವರು ತಮ್ಮ ರಾಜಕೀಯ ಜೀವನದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಗುಜರಾತ್‌ನ ಸಿಎಂ ಆಗಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಮೊದಲ ರಾಜಕಾರಣಿಯೂ ಹೌದು. ಅಲ್ಲದೆ, ಸ್ವಾತಂತ್ರ್ಯದ ನಂತರ ಜನಿಸಿ ಅತಿ ದೀರ್ಘ ಕಾಲ ದೇಶದ ಪ್ರಧಾನಿ ಹುದ್ದೆ ಅಲಂಕರಿಸಿದ ಮೊದಲಿಗ ಎಂಬ ದಾಖಲೆಯನ್ನೂ ಹೊಂದಿದ್ದಾರೆ. 2014, 2019 ಮತ್ತು 2024 ರಲ್ಲಿ ಸತತ ಮೂರು ಲೋಕಸಭಾ ಚುನಾವಣೆಗಳಲ್ಲಿ ಅವರು ಗೆಲುವು ಸಾಧಿಸಿದ್ದಾರೆ.
2001ರ ಅಕ್ಟೋಬರ್ 7 ರಂದು ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಅಂದಿನಿಂದ 2014ರ ಮೇ 21ರವರೆಗೆ ಆ ಹುದ್ದೆಯಲ್ಲಿದ್ದರು. 13 ವರ್ಷಗಳಿಗೂ ಹೆಚ್ಚು ಕಾಲ ರಾಜ್ಯವನ್ನು ಮುನ್ನಡೆಸಿ, ನಂತರ ರಾಷ್ಟ್ರ ರಾಜಕಾರಣಕ್ಕೆ ಅಡಿಇಟ್ಟರು. 2014ರ ಮೇ 26 ರಂದು ಅವರು ಭಾರತದ 14ನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಈ ಮೈಲಿಗಲ್ಲಿನ ಜೊತೆಗೆ ಅವರು ಜನಪ್ರಿಯತೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ವಿಶ್ವದ ಮೊದಲ ನಾಯಕ ಎಂಬ ದಾಖಲೆಯನ್ನೂ ಹೊಂದಿದ್ದಾರೆ.
ಈ ತಿಂಗಳ ಆರಂಭದಲ್ಲಿ, ಮೋದಿ ಅವರು ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ 30 ಮಿಲಿಯನ್ಗೂ ಅಧಿಕ ಚಂದಾದಾರರನ್ನು ಪಡೆದರು. ಹೆಚ್ಚು ಫಾಲೋವರ್ಸ್ ಹೊಂದುವ ಮೂಲಕ ವಿಶ್ವ ನಾಯಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡರು. ಅಲ್ಲದೆ, ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಮತ್ತು ಸರ್ಕಾರದ ಮಾಜಿ ಮುಖ್ಯಸ್ಥರ ಪೈಕಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ರಾಜಕೀಯ ನಾಯಕ ಎಂದೆನಿಸಿಕೊಂಡಿದ್ದಾರೆ.
ಈ ವರ್ಷದ ಫೆಬ್ರವರಿಯಲ್ಲಿ, ಪ್ರಧಾನಿ ಮೋದಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ 100 ಮಿಲಿಯನ್ಗೂ ಅಧಿಕ ಅನುಯಾಯಿಗಳನ್ನು ದಾಟಿದರು. ಇಷ್ಟು ಫಾಲೋವರ್ಸ್ ಹೊಂದಿದ ಮೊದಲ ವಿಶ್ವ ನಾಯಕ ಮತ್ತು ರಾಜಕಾರಣಿಯಾಗಿದ್ದಾರೆ.
