ಚಿತ್ರದುರ್ಗ : ಒಳ ಮೀಸಲಾತಿಗಾಗಿ ಪರಿಶಿಷ್ಟ ಜಾತಿಗಳ ಮನೆ ಮನೆ ಗಣತಿ ಆರಂಭಿಸಿರುವ ರಾಜ್ಯ ಸರ್ಕಾರ ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳನ್ನು ಗಮನದಲ್ಲಿಟ್ಟುಕೊಂಡು ಪೂರಕ ಪ್ರಶ್ನಾವಳಿಗಳನ್ನು ಸಿದ್ದಪಡಿಸಬೇಕೆಂದು ವೈಜ್ಞಾನಿಕ ಒಳ ಮೀಸಲಾತಿ ಅನುಷ್ಠಾನ ಹೋರಾಟ ಸಮಿತಿ ಅಖಿಲ ಕರ್ನಾಟಕ ಕುಳುವ ಮಹಾ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ವಿ.ಕಿರಣ್‍ಕುಮಾರ್ ಕೊತ್ತಗೆರೆ ಒತ್ತಾಯಿಸಿದರು.
ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೇ.5 ರಿಂದ ಆರಂಭಗೊಂಡಿರುವ ಗಣತಿ 17 ರವರೆಗೆ ನಡೆಯಲಿದೆ. ಗಣತಿಯಲ್ಲಿ ಕಡ್ಡಾಯವಾಗಿ ದತ್ತಾಂಶ ಕೊಡಬೇಕು. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದ್ದರೂ ಇನ್ನು ಅಲೆಮಾರಿ ಅರೆಅಲೆಮಾರಿಗಳಿಗೆ ಸೂರಿಲ್ಲ. ಸಾಮಾಜಿಕ, ಶೈಕ್ಷಣಿಕ
ಆರ್ಥಿಕ, ರಾಜಕೀಯ ಸ್ಥಿತಿಗತಿಗಳನ್ನು ಅರ್ಥಮಾಡಿಕೊಂಡು ಗಣತಿ ನಡೆಸಬೇಕು. ಯಾವುದೇ ಕಾರಣಕ್ಕು ಅಲೆಮಾರಿ, ಅರೆಅಲೆಮಾರಿಗಳ ನೈಜತೆಯನ್ನು ಮುಚ್ಚಿಡಬಾರದು. ಮೀಸಲಾತಿಯ ವಕ್ತಾರರಂತೆ ನಡೆದುಕೊಳ್ಳುತ್ತಿರುವ ಕೆಲವರು ಆಯೋಗ ಮತ್ತು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ತಳಸಮುದಾಯಗಳ ನಿಖರ ಸರ್ವೆಗೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
ಜಿಲ್ಲಾ ಕೊರಮ ಕ್ಷೇಮಾಭಿವೃದ್ದಿ ಸಂಘದ ಜಿಲ್ಲಾಧ್ಯಕ್ಷ ಕೆ.ಕೃಷ್ಣಪ್ಪ ಮಾತನಾಡಿ ಪರಿಶಿಷ್ಟ ಜಾತಿಯಲ್ಲಿನ 101 ಜಾತಿಗಳಿಗೆ ಯಾವುದೇ ವಂಚನೆಯಿಲ್ಲದಂತೆ ರಾಜ್ಯ ಸರ್ಕಾರ ನ್ಯಾಯಬದ್ದವಾಗಿ ಗಣತಿ ಮಾಡಬೇಕು. ರಾಜ್ಯದಲ್ಲಿ ಮೂರರಿಂದ ನಾಲ್ಕು ಲಕ್ಷದಷ್ಟು ಜನಸಂಖ್ಯೆಯಿದೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಅತ್ಯಂತ ಹಿಂದುಳಿದಿರುವ ಈ ಜನಾಂಗ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಜಾತಿ ಜನಸಂಖ್ಯೆಗನುಗುಣವಾಗಿ ಪಡೆದುಕೊಳ್ಳಬೇಕಾಗಿರುವುದರಿಂದ ಗಣತಿ ಸಮೀಕ್ಷೆ ಅತಿ ಮುಖ್ಯ ಎಂದು ತಿಳಿಸಿದರು.
ಜಯಶೀಲ ಮಾತನಾಡುತ್ತ ಗಣತಿದಾರರು ಪ್ರತಿ ಮನೆ ಮನೆಗೆ ಭೇಟಿ ಕೊಟ್ಟಾಗ ಕೊರಮ ಎಂದು ಬರೆಸಿ ಸ್ಪಷ್ಟವಾದ ಅಂಕಿ ಅಂಶಗಳನ್ನು ಕೊಡಬೇಕು. ಪುಟ್ಟಿ ಹೆಣೆಯುವುದು, ಕೊರವಂಜಿ ಕಣಿ ಹೇಳುವುದು ನಮ್ಮ ಕುಲಕಸುಬು. ಹಾಗಾಗಿ ಸಂಕೋಚವಿಲ್ಲದೆ ಸಮೀಕ್ಷೆಯಲ್ಲಿ ಕೊರಚ ಎಂದು ನಮೂದಿಸುವಂತೆ ವಿನಂತಿಸಿದರು.
ಕೊರಮ ಕ್ಷೇಮಾಭಿವೃದ್ದಿ ಸಂಘದ ಜಿಲ್ಲಾ ಕಾರ್ಯದರ್ಶಿ ದ್ವಾರಕನಾಥ್, ಪರಮೇಶ್, ಸಿದ್ದಾರ್ಥಕೃಷ್ಣ, ಮಂಜುನಾಥ, ರಾಮಪ್ಪ, ಪುಷ್ಪರಾಜ್, ಅಂಜನಮೂರ್ತಿ, ಬುಚ್ಚಣ್ಣ ಮೂರ್ತಪ್ಪ, ಮಂಜುನಾಥ ರಾಮಗಿರಿ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



