ಡಿಕೆಶಿ, ಸಿದ್ದರಾಮಯ್ಯ ಜೋಡೆತ್ತುಗಳಲ್ಲ, ಕುಂಟೆತ್ತುಗಳು; ಆರ್. ಅಶೋಕ್ ವಾಗ್ದಾಳಿ
ಚಿತ್ರದುರ್ಗ:
ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದು, ಸರ್ಕಾರದ ಆಡಳಿತವನ್ನು ದುರಾಡಳಿತ ಮತ್ತು ಭ್ರಷ್ಟಾಚಾರದ ಕೇಂದ್ರ ಎಂದು ಆರೋಪಿಸಿದ್ದಾರೆ.
ಚಿತ್ರದುರ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಸರ್ಕಾರ 60 ಶೇಕಡಾ ಕಮೀಷನ್‌ನಲ್ಲಿ ಮುಳುಗಿದೆ. ಅಭಿವೃದ್ಧಿ ಎಂಬುದು ಸಂಪೂರ್ಣ ಮರೀಚಿಕೆಯಾಗಿದೆ ಎಂದು ಟೀಕಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಉಲ್ಲೇಖಿಸಿ, ಸಾಲದರಾಮಯ್ಯ ಆಗಿದ್ದಾರೆ ಎಂದು ವ್ಯಂಗ್ಯವಾಡಿದರು.
ರಾಜ್ಯದ ಆರ್ಥಿಕ ಸ್ಥಿತಿ ಕುರಿತು ಮಾತನಾಡಿದ ಅಶೋಕ್, ಸರ್ಕಾರ ₹1.32 ಲಕ್ಷ ಕೋಟಿ ಸಾಲದಲ್ಲಿ ಮುಳುಗಿದೆ. ಸಿದ್ದರಾಮಯ್ಯ ಆಡಳಿತದಲ್ಲಿ ಒಟ್ಟು ₹4 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಸಾಲ ಮಾಡಲಾಗಿದೆ. ಇದರಿಂದ ಪ್ರತಿಯೊಬ್ಬರ ತಲೆಯ ಮೇಲೆ ಸುಮಾರು ₹80 ಸಾವಿರ ಸಾಲದ ಹೊರೆ ಬಂದಿದೆ ಎಂದು ಆರೋಪಿಸಿದರು.
ಅನ್ನಭಾಗ್ಯ ಯೋಜನೆಗೆ ₹750 ಕೋಟಿ ರೂ. ನೀಡಿಲ್ಲ ಎಂದು ಹೇಳಿದ ಅವರು, ಈ ಸರ್ಕಾರವನ್ನು ನಂಬಿ ಕುಳಿತರೆ ರಾಜ್ಯದ ಸ್ಥಿತಿ ಮತ್ತಷ್ಟು ಹದಗೆಡಲಿದೆ ಎಂದು ಎಚ್ಚರಿಸಿದರು.
ಮುಂದಿನ ಚುನಾವಣೆಯಲ್ಲಿ ಈ ವಿಚಾರಗಳು ಪರಿಣಾಮ ಬೀರುವುದಾಗಿ ಹೇಳಿದ ಅವರು, ಈ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ. ಜನರು ತಕ್ಕ ಪಾಠ ಕಲಿಸುತ್ತಾರೆ ಎಂದರು.
ಸಿಎಂ ಸಿದ್ದರಾಮಯ್ಯ ಅವರ ಬಿಜೆಪಿ ಕಳ್ಳೆತ್ತುಗಳಿಗೆ ಮತ ಹಾಕಬೇಡಿಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅಶೋಕ್, ಡಿಕೆಶಿ ಮತ್ತು ಸಿದ್ದರಾಮಯ್ಯ ಜೋಡೆತ್ತುಗಳಲ್ಲ, ಕುಂಟೆತ್ತುಗಳು ಎಂದು ಟೀಕಿಸಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಉಲ್ಲೇಖಿಸಿ, ಅಧಿಕಾರಕ್ಕಾಗಿ ಕಾಯುತ್ತಿದ್ದಾರೆ ಎಂದರು.
ಬಿಜೆಪಿ ಆಡಳಿತಾವಧಿಯಲ್ಲಿ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿತ್ತು ಎಂದು ಹೇಳಿದ ಅವರು, ಇಂದಿನ ಸರ್ಕಾರ ಮೂರು ವರ್ಷಗಳಿಂದ ಯಾವುದೇ ಹೊಸ ಅಭಿವೃದ್ಧಿ ಕೆಲಸ ಮಾಡಿಲ್ಲ. ಈಗ ಉದ್ಘಾಟನೆ ಮಾಡುತ್ತಿರುವ ಯೋಜನೆಗಳೂ ಬಿಜೆಪಿ ಅವಧಿಯದ್ದೇ ಎಂದು ಆರೋಪಿಸಿದರು.
ಬೆಲೆ ಏರಿಕೆ ಮತ್ತು ತೆರಿಗೆ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ಉಪಚುನಾವಣೆಗಳ ಬಳಿಕ ಮತ್ತಷ್ಟು ತೆರಿಗೆ ವಿಧಿಸುವ ಸಾಧ್ಯತೆ ಇದೆ ಎಂದು ಆರೋಪಿಸಿದರು.
ಜನರು ಕಾಂಗ್ರೆಸ್ ಸರ್ಕಾರಕ್ಕೆ ಈಗಲೇ ಬುದ್ದಿ ಕಲಿಸಬೇಕು ಎಂದು ಕರೆ ನೀಡಿದರು.
