ಚಿತ್ರದುರ್ಗದಲ್ಲಿ ಲೋಕಾಯುಕ್ತ ದಾಳಿ: ಭ್ರಷ್ಟಾಚಾರ ಆರೋಪದಡಿ ಮಾಜಿ ಅಕೌಂಟೆಂಟ್ ಮನೆಗಳ ಶೋಧ
ಚಿತ್ರದುರ್ಗ, ಏ.7:
ಜಿಲ್ಲೆಯಲ್ಲಿ ಭ್ರಷ್ಟಾಚಾರ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಭರ್ಜರಿ ದಾಳಿ ನಡೆಸಿದ್ದು, ನಿರ್ಮಿತಿ ಕೇಂದ್ರದ ಮಾಜಿ ಅಕೌಂಟೆಂಟ್ ಸುಶೀಲಮ್ಮ ಅವರ ಮನೆಗಳನ್ನು ಗುರಿಯಾಗಿಸಿಕೊಂಡಿದ್ದಾರೆ.
ಸುಶೀಲಮ್ಮ ಅವರು ವರ್ಷಕ್ಕಿಂತ ಹಿಂದೆ ಸ್ವಯಂ ನಿವೃತ್ತಿ (ವಿಆರ್‌ಎಸ್) ಪಡೆದಿದ್ದರೂ, ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸಿದ್ದ ಅವಧಿಯಲ್ಲಿ ಆದಾಯಕ್ಕೆ ಮೀರಿ ಆಸ್ತಿ ಮತ್ತು ಹಣ ಸಂಪಾದನೆ ಮಾಡಿದ್ದಾರೆ ಎಂಬ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ.
ಲೋಕಾಯುಕ್ತ ತಂಡವು ಚಿತ್ರದುರ್ಗ ನಗರದ ಮೆದೇಹಳ್ಳಿ ಬಡಾವಣೆಯಲ್ಲಿರುವ ನಿವಾಸದ ಜೊತೆಗೆ ಹಿರಿಯೂರು ತಾಲೂಕಿನ ಯರದಕಟ್ಟೆ ಗ್ರಾಮದಲ್ಲಿರುವ ತೋಟದ ಮನೆಯನ್ನು ಸಹ ಶೋಧಿಸಿದೆ. ದಾಳಿಯ ವೇಳೆ ಆಸ್ತಿ ದಾಖಲೆಗಳು, ನಗದು, ಆಭರಣ ಸೇರಿದಂತೆ ವಿವಿಧ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಲೋಕಾಯುಕ್ತ ಎಸ್ಪಿ ವಾಸುದೇವರಾಮ್ ಹಾಗೂ ಡಿವೈಎಸ್ಪಿ ಮೃತ್ಯುಂಜಯ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆ ಜಿಲ್ಲೆಯಲ್ಲೇ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ತನಿಖೆಯ ವರದಿ ಮೇಲೆ ಎಲ್ಲರ ಗಮನ ನೆಟ್ಟಿದೆ.
