ಬೆಂಗಳೂರು: ಬಿತ್ತನೆಬೀಜ, ರಸಗೊಬ್ಬರ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ರಾಜ್ಯ ಸರ್ಕಾರ ವಿಫಲವಗಿದ್ದು, ಇದರಿಂದ ರೈತರು ಸಂಕಷ್ಟ ಎದುರಿಸುವಂತಾಗಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.ಬೆಂಗಳೂರಿನ ಬಿಜೆಪಿ ಶಾಸಕರೊಂದಿಗೆ ಸಭೆ ನಡೆಸಿದ ನಂತರ ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈವಿಜಯೇಂದ್ರ ಅವರು, ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಹೇಳಿದರು.
ರಾಜ್ಯ ಸರ್ಕಾರ ಮತ್ತು ಕೃಷಿ ಸಚಿವರು ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದು, ತಮ್ಮ ತಪ್ಪನ್ನು ಮರೆ ಮಾಡಲು, ಕೇಂದ್ರ ಸರ್ಕಾರವನ್ನು ದೂಷಿಸುತ್ತಿದ್ದಾರೆಂದು ಕಿಡಿಕಾರಿದರು.ಕೊರತೆಯಿಂದಾಗಿ ದುಪ್ಪಟ್ಟು ದರದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಮಾರಾಟವಾಗುತ್ತಿದೆ. ಕಳ್ಳದಂಧೆಯೂ ನಡೆಯುತ್ತಿದೆ. ಕಾಂಗ್ರೆಸ್ ಸರಕಾರಗಳ ಆಡಳಿತದಲ್ಲಿ ದಲ್ಲಾಳಿಗಳ ಕಾಟವನ್ನು ಹಿಂದಿನಿಂದಲೂ ನೋಡುತ್ತ ಬಂದಿದ್ದೇವೆ. ರಸಗೊಬ್ಬರದ ವಿಷಯದಲ್ಲಿ ಕೃತಕ ಅಭಾವ ಸೃಷ್ಟಿ ಆಗಿದೆ ಎಂದು ದೂರಿದರು.
ರಾಜ್ಯ ಸರ್ಕಾರ ರೈತರಿಗೆ ಅನ್ಯಾಯ ಮಾಡುತ್ತಿದ್ದು, ಇದರ ಸಂಬಂಧ ಬಿಜೆಪಿ ಹೋರಾಟ ಮಾಡಲಿದೆ. ರಸಗೊಬ್ಬರ ದಾಸ್ತಾನಿದೆ ಕೊರತೆ ಇಲ್ಲ ಎಂದು ಕೃಷಿ ಸಚಿವರು ಹೇಳಿದ್ದಾರೆ. ಹಾಗಿದ್ದೂ ರೈತರ ಹೋರಾಟ ಮುಂದುವರೆದಿದ್ದರೆ, ಇದರ ಹಿಂದೆ ರಾಜ್ಯ ಸರಕಾರದ ವೈಫಲ್ಯ ಎದ್ದು ಕಾಣುತ್ತಿದೆ. ರೈತರಿಗೆ ತೊಂದರೆ ಆಗದ ರೀತಿಯಲ್ಲಿ ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.ಮುಖ್ಯಮಂತ್ರಿ ನಿನ್ನೆ ರಾಜ್ಯದ ರಸಗೊಬ್ಬರ ಸಂಬಂಧ ಕೇಂದ್ರ ಸಚಿವ ನಡ್ಡಾ ಅವರಿಗೆ ಪತ್ರ ಬರೆದಿದ್ದಾರೆ. ಈ ಬಾರಿ ಮುಂಗಾರು 20-25 ದಿನಗಳ ಮುಂಚಿತವಾಗಿ ಪ್ರಾರಂಭವಾಗಿದೆ. ಹವಾಮಾನ ಇಲಾಖೆ ಇದರ ಸ್ಪಷ್ಟ ಮುನ್ಸೂಚನೆ ನೀಡಿದ್ದರೂ ರಾಜ್ಯ ಸರಕಾರ, ಕೃಷಿ ಸಚಿವರು ಪೂರ್ವ ತಯಾರಿ ಮಾಡದ ಕಾರಣ ರೈತರು ಬೀದಿಗಿಳಿದು ಹೋರಾಟ ಪ್ರಾರಂಭಿಸುವಂತಾಗಿದೆ ಎಂದು ಟೀಕಿಸಿದ್ದಾರೆ.ಜುಲೈ ಅಂತ್ಯಕ್ಕೆ ಕೇಂದ್ರದಿಂದ 8.73 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ರಾಜ್ಯಕ್ಕೆ ಬಂದಿದೆ. ನಮ್ಮ ನಿರೀಕ್ಷೆ ಇದ್ದುದು 6.31 ಲಕ್ಷ ಮೆ.ಟನ್. ರಾಜ್ಯ ಸರಕಾರದ ಅಪೇಕ್ಷೆ ಮೀರಿ ರಸಗೊಬ್ಬರ ರಾಜ್ಯಕ್ಕೆ ಬಂದಿದೆ ಎಂದು ಹೇಳಿದರು.ರಾಜ್ಯ ಸರಕಾರ, ಮುಖ್ಯಮಂತ್ರಿ, ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ನಗರದ ಅಭಿವೃದ್ಧಿ ವಿಚಾರದಲ್ಲಿ ವೈಜ್ಞಾನಿಕವಾಗಿ ಆಲೋಚಿಸುತ್ತಿಲ್ಲ. ಭೂಗತ ಟನೆಲ್ ರಸ್ತೆ, ಬಿಬಿಎಂಪಿಯನ್ನು 5 ವಿಭಾಗವಾಗಿ ಮಾಡುವ ಅವೈಜ್ಞಾನಿಕ ತೀರ್ಮಾನವು ಬೆಂಗಳೂರು ಮಹಾನಗರದ ಅಭಿವೃದ್ಧಿಗೆ ಪೂರಕವಾಗಿಲ್ಲ ಎಂದು ಟೀಕಿಸಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



