ಚಿತ್ರದುರ್ಗ : ಜಮ್ಮು-ಕಾಶ್ಮೀರದಲ್ಲಿ ಉಗ್ರಗಾಮಿಗಳು ಕಳೆದ ತಿಂಗಳು ಗುಂಡಿನ ದಾಳಿ ನಡೆಸಿ 26 ಅಮಾಯಕರುಗಳನ್ನು ಹತ್ಯೆಗೈದಿರುವುದು ಅತ್ಯಂತ ಖಂಡನಾರ್ಹ.
ಮಾನವ ಕುಲಕ್ಕೆ ಕಳಂಕ. ಭಯೋತ್ಪಾದಕರು ಎಲ್ಲಿಯೇ ಅಡಗಿ ಕುಳಿತಿರಲಿ ಪತ್ತೆ ಹಚ್ಚಿ ಬಗ್ಗು ಬಡಿಯುವಂತೆ ಎದ್ದೇಳು ಕರ್ನಾಟಕ ಸಂಘಟನೆಯ ಕೇಂದ್ರ ವರ್ಕಿಂಗ್ ಕಮಿಟಿ ಸದಸ್ಯ ಜೆ.ಯಾದವರೆಡ್ಡಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
ಪ್ರವಾಸಿ ಮಂದಿರದಲ್ಲಿ ಎದ್ದೇಳು ಕರ್ನಾಟಕ ಸಂಘಟನೆಯ ಪದಾಧಿಕಾರಿಗಳೊಂದಿಗೆ ಬುಧವಾರ ಸಭೆ ನಡೆಸಿ ಮಾತನಾಡಿದ ಅವರು ಕೇಂದ್ರ ಸರ್ಕಾರದ ಕ್ರಮಕ್ಕೆ ಎದ್ದೇಳು ಕರ್ನಾಟಕ ಸಂಪೂರ್ಣ ಬೆಂಬಲವಿದೆ. ಅಂತಹ ಅಮಾನವೀಯ ಘಟನೆ ಮತ್ತೆ ಮರುಕಳಿಸಬಾರದೆಂದರೆ ಉಗ್ರರ ತಂಗುದಾಣಗಳನ್ನು ಪತ್ತೆ ಹೆಚ್ಚಿ ಸರ್ವನಾಶ ಮಾಡಬೇಕು.
ಭಯೋತ್ಪಾದಕರಲ್ಲಿ ಕೊಲ್ಲುವ ಮನಸ್ಥಿತಿ ಬಿಟ್ಟರೆ ಮಾನವೀಯತೆ ಅಂತಃಕರಣವಿರುವುದಿಲ್ಲ. ಮನಷ್ಯತ್ವ ಕಳೆದುಕೊಂಡಿರುತ್ತಾರೆ. ಹಾಗಾಗಿ ಪಹಲ್ಗಾಮ್ನ ದಾಳಿಗೆ ಧರ್ಮದ ಲೇಪನ ಬೇಡ. ಜಮ್ಮು-ಕಾಶ್ಮೀರದ ಸ್ಥಳೀಯ ಮುಸಲ್ಮಾನರು ಜೀವದ ಹಂಗು ತೊರೆದು ಉಗ್ರರಿಂದ ಪ್ರವಾಸಿಗರನ್ನು ಕಾಪಾಡುವ ಪ್ರಯತ್ನ ನಡೆಸಿ ಕೆಲವರನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸಿ ಊಟ, ವಸತಿ ನೀಡಿ ಮಾನವೀಯತೆ ಮೆರೆದಿದ್ದನ್ನು ಹತ್ಯೆಗೊಳಗಾದ ಕುಟುಂಬದವರು ಸ್ವತಃ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ. ಉಗ್ರರು ಗುಂಡು ಹಾರಿಸುವುದನ್ನು ತಡೆಯಲು ಹೋಗಿ ಆದಿಲ್ಷಾ ಹುತಾತ್ಮನಾಗಿದ್ದಾನೆ. ಪರಿಸ್ಥಿತಿ ಹೀಗಿರುವಾಗ ಸ್ಥಳೀಯ ರಾಜಕಾರಣಿಗಳು
ಮುಸಲ್ಮಾನರ ಬಗ್ಗೆ ಅತ್ಯಂತ ಪೂರ್ವಾಗ್ರಹ ಪೀಡಿತರಾಗಿ ಮಾತನಾಡಿ ಕೋಮು ಭಾವನೆ ಕೆರಳಿಸುವುದು ಸರಿಯಲ್ಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಾವಿರಾರು ವರ್ಷಗಳಿಂದ ಹಿಂದೂ-ಮುಸಲ್ಮಾನರು ಸಹೋದರರಂತೆ ಐಕ್ಯತೆಯಿಂದಿದ್ದಾರೆ. ಕೆಲವು ಪಟ್ಟಭದ್ರ ಧಾರ್ಮಿಕ ಹಿತಾಸಕ್ತಿಗಳು ಏನಾದರೂ ಕಿತಾಪತಿ ಮಾಡಿ ಶಾಂತಿ ಕದಡುವ ಹೇಳಿಕೆ ನೀಡುತ್ತಿರುವುದನ್ನು ದೇಶದ ಭವಿಷ್ಯದ ದೃಷ್ಟಿಯಿಂದ ನಿಲ್ಲಿಸಬೇಕು. ನಮ್ಮ ದೇಶದಲ್ಲಿ ಎಲ್ಲಾ ಧರ್ಮದ ಸೈನಿಕರುಗಳಿದ್ದಾರೆ. ಸಮಗ್ರತೆ ಪ್ರಶ್ನೆ ಬಂದಾಗ ಧರ್ಮ ಜಾತಿ ಅಡ್ಡ ಬರಬಾರದು. ಕೋಮು ಸಾಮರಸ್ಯ ಕಾಪಾಡಿ ಸಂರಕ್ಷಿಸುವ ನಿಟ್ಟಿನಲ್ಲಿ ದ್ವೇಷ ಅಳಿಸಿ ಪ್ರೀತಿ ಅರಳಿಸಿ ಎಂಬುದು ಎದ್ದೇಳು ಕರ್ನಾಟಕದ ಧ್ಯೇಯ ವಾಕ್ಯ. ರಾಜ್ಯದ ಎರಡು ಜಿಲ್ಲೆಗಳು ಇಂತಹ ಪ್ರಯೋಗಕ್ಕೆ ಒಳಪಡುತ್ತಿವೆ. ಹತ್ಯೆಯಾಗಿರುವುದು ಕೇವಲ ಪ್ರವಾಸಿಗರಲ್ಲ. ಮನುಷ್ಯತ್ವ ಎನ್ನುವುದನ್ನು ಟೀಕಿಸುವವರು ಮೊದಲು ಅರ್ಥಮಾಡಿಕೊಳ್ಳಬೇಕೆಂದು ಜೆ.ಯಾದವರೆಡ್ಡಿ ಮನವಿ ಮಾಡಿದರು.
ಎದ್ದೇಳು ಕರ್ನಾಟಕದ ಶಿವಕುಮಾರ್, ಟಿ.ಶಫಿವುಲ್ಲಾ, ಪ್ರಜಾಶಕ್ತಿ ಬೋರಯ್ಯ, ಪುರುಷೋತ್ತಮ, ಬೀಬಿಜಾನ್, ತಿಪ್ಪೇಸ್ವಾಮಿ ಎಸ್.ಟಿ. ಅರಣ್ಯ ಇವರುಗಳು ಸಭೆಯಲ್ಲಿ ಹಾಜರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



