ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವಾರ್ಡ್ ಗಳ ಮರುವಿಂಗಡಣಾ ಆಯೋಗವು ವಾರ್ಡ್ ಗಳ ಮರುರಚನೆ, ಗಡಿ ಗುರುತಿಸುವಿಕೆ ಕೆಲಸ ಆರಂಭಿಸಲಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿಸಿಎಂ ಅವರು ವಿಧಾನಸೌಧದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಬಿಬಿಎಂಪಿ) ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.”ಈ ಆಯೋಗವು ತಾತ್ಕಾಲಿಕ ವಾರ್ಡ್ ಗಳು, ಗಡಿ ಗುರುತಿಸುವಿಕೆ, ತಕರಾರು ಅರ್ಜಿಗಳ ಸ್ವೀಕಾರ ಮತ್ತಿತರ ಕೆಲಸಗಳ ಅಂತಿಮ ನಿರ್ಣಯಗಳನ್ನು ಒಂದು ತಿಂಗಳ ಕಾಲ ಅಂದರೆ ಸೆಪ್ಟೆಂಬರ್ 1 ರವರೆಗೆ ನಿರ್ವಹಿಸಲಿದೆ. ಆನಂತರ ಮೀಸಲಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ತದನಂತರ ಈ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು” ಎಂದು ಹೇಳಿದರು.
“ಈ ಎಲ್ಲಾ ಪ್ರಕ್ರಿಯೆ ಮುಗಿದ ತಕ್ಷಣ ನಾವು ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತೇವೆ. ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಂಡು, ವೇಳಾಪಟ್ಟಿ ನಿಗದಿ ಮಾಡಿ ಸಾರ್ವಜನಿಕರಿಗೆ ಮಾಹಿತಿ ನೀಡುತ್ತೇವೆ” ಎಂದರು.
ಅಕ್ಟೋಬರ್ 22 ರಿಂದ ಬೃಹತ್ ಇ ಖಾತಾ ಜಾಗೃತಿ ಅಭಿಯಾನ
“ಬೆಂಗಳೂರಲ್ಲಿ 24 ಲಕ್ಷ ‘ಎ’ ಮತ್ತು ‘ಬಿ’ ಖಾತೆಗಳಿವೆ. ಈಗಾಗಲೇ 6.5 ಲಕ್ಷ ಇ- ಖಾತೆಗಳನ್ನು ಜನರು ತೆಗೆದುಕೊಂಡಿದ್ದಾರೆ. ಜನರಿಗೆ ಆನ್ ಲೈನ್ ನಲ್ಲಿ ಆಸ್ತಿ ವಿವರಗಳು ನಿಖರವಾಗಿ ದೊರೆಯಬೇಕು. ಮುಂದಿನ ದಿನಗಳಲ್ಲಿ ತೊಂದರೆಯಾಗಬಾರದು ಎಂಬುದು ನಮ್ಮ ಆಲೋಚನೆ. ಈ ಕಾರಣಕ್ಕೆ ಅಕ್ಟೋಬರ್ 22 ರಿಂದ ನವೆಂಬರ್ 1 ರವರೆಗೆ ಬೃಹತ್ ಜಾಗೃತಿ ಅಭಿಯಾನದ ಆಲೋಚನೆ ಮಾಡಲಾಗಿದೆ” ಎಂದರು.
“ಈ ಅಭಿಯಾನ ಯಶಸ್ವಿಗೊಳಿಸಲು ಶಿಕ್ಷಕರು, ಬೆಸ್ಕಾಂ ಬಿಲ್ ಕಲೆಕ್ಟರ್ ಗಳು, ಪಾಲಿಕೆಯ ನೌಕರರ ಭಾಗವಹಿಸುವಿಕೆ ಬಗ್ಗೆ ಚರ್ಚಿಸಲು ಸೂಚನೆ ನೀಡಿದ್ದೇನೆ. ಈ ಬಗ್ಗೆ ಮನೆ ಮನೆಗೆ ತೆರಳಿ ತಿಳುವಳಿಕೆ ನೀಡಲಾಗುವುದು. ಸಾರ್ವಜನಿಕರು, ರಾಜಕೀಯ ಪಕ್ಷಗಳ ಕಾರ್ಯಕರ್ತರು ಈ ಅಭಿಯಾನದ ಪ್ರಚಾರದಲ್ಲಿ ಭಾಗವಹಿಸಬಹುದು. ಆದರೆ ಇವರಿಗೆ ಜವಾಬ್ದಾರಿ ನೀಡುವುದಿಲ್ಲ” ಎಂದರು.
“ಆಗಸ್ಟ್ 15 ರಿಂದ ಬಿ ಖಾತೆಯಿಂದ ಎ ಖಾತೆ ಪಡೆಯಲು ಅನುಸರಿಸಬೇಕಾದ ಮಾನದಂಡಗಳನ್ನು ಬಿಡುಗಡೆ ಮಾಡಲಾಗುವುದು. ಯಾರಿಗೆ ಅರ್ಜಿ ಹಾಕಲು ಅರ್ಹತೆಯಿದೆ, ಯಾವ ರೀತಿ ಅರ್ಜಿ ಹಾಕಬೇಕು ಎನ್ನುವ ವಿವರಗಳನ್ನು ಬಿಡುಗಡೆ ಮಾಡಲಾಗುವುದು” ಎಂದು ತಿಳಿಸಿದರು.
ಆಗಸ್ಟ್ 15 ರೊಳಗೆ ಹೆಬ್ಬಾಳ ಜಂಕ್ಷನ್ ಉದ್ಘಾಟನೆ
“ಹೆಬ್ಬಾಳ ಮೇಲ್ಸೆತುವೆ ಜಂಕ್ಷನ್, ಶಿವಾನಂದ ಸರ್ಕಲ್ ಜಂಕ್ಷನ್ ಅಭಿವೃದ್ಧಿ ಹಾಗೂ ಗಾಂಧಿ ಬಜಾರ್ ಬಳಿಯ ಬಹುಮಹಡಿ ಪಾರ್ಕಿಂಗ್ ಕಟ್ಟಡವನ್ನು ಆಗಸ್ಟ್ 15 ರ ಒಳಗಾಗಿ ಉದ್ಘಾಟನೆ ಮಾಡಬೇಕು ಎಂಬುದು ನಮ್ಮ ಆಲೋಚನೆ. ಕೆ.ಆರ್.ಪುರಂ ಕಡೆಯಿಂದ ಬರುವ ಹೆಬ್ಬಾಳ ಮೇಲ್ಸೆತುವೆ ಕಾಮಗಾರಿಯನ್ನು ಶೀಘ್ರದಲ್ಲೇ ಮುಗಿಸಿ ಸಾರ್ವಜನಿಕರ ಉಪಯೋಗಕ್ಕೆ ನೀಡಬೇಕು ಎಂಬುದು ನಮ್ಮ ಆಲೋಚನೆ” ಎಂದರು.
3,700 ಬೀದಿ ಬದಿ ವ್ಯಾಪಾರಿಗಳಿಗೆ ತಳ್ಳುವ ಗಾಡಿ ವಿತರಣೆ
“ವಿವಿಧ ಯೋಜನೆಗಳ ಅಡಿ ಫಲಾನುಭವಿಗಳಾಗಿ ಆಯ್ಕೆಯಾದ 10-15 ಸಾವಿರ ಜನರಿಗೆ ಸೌಲಭ್ಯಗಳ ಹಂಚಿಕೆ ಮಾಡಲಾಗುವುದು. 3,700 ಬೀದಿಬದಿ ವ್ಯಾಪಾರಿಗಳು ತಳ್ಳುವ ಗಾಡಿಗಳಿಗೆ ಅರ್ಜಿ ಸಲ್ಲಿಸಿದ್ದರು. ಅವರಿಗೆ ಸೌಲಭ್ಯ ನೀಡಲಾಗುತ್ತಿದೆ” ಎಂದು ತಿಳಿಸಿದರು.ಜಿಬಿಎ ಗೆ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಕೇಳಿದಾಗ, “ವಿಧಾನ ಪರಿಷತ್ತಿನಲ್ಲಿ ಒಪ್ಪಿಕೊಂಡಿದ್ದಾರೆ. ಸದನದಿಂದ ಹೊರನಡೆದರು ಎಂದರೆ ಒಪ್ಪಿದಂತೆ ಅಲ್ಲವೇ? ರಾಜಕೀಯವಾಗಿ ದನಿ ಎತ್ತಲಿಲ್ಲ ಎಂದರೆ ತಪ್ಪಾಗುತ್ತದೆ ಎಂದು ಅವರು ಹೀಗೆ ಮಾಡುತ್ತಿದ್ದಾರೆ” ಎಂದರು.ಸಿಎಂ, ಡಿಸಿಎಂ ವಾರಕ್ಕೊಮ್ಮೆ ದೆಹಲಿಗೆ ಹೋದರೆ ಆಡಳಿತ ನಡೆಸುವವರು ಯಾರು ಎನ್ನುವ ವಿಜಯೇಂದ್ರ ಅವರ ಟೀಕೆಯ ಬಗ್ಗೆ ಕೇಳಿದಾಗ, “ರಾಯಭಾರಿಗಳನ್ನು ಭೇಟಿ ಮಾಡಲು ನಾವು ಮತ್ತೆ ಜುಲೈ 31 ರಂದು ದಿಲ್ಲಿಗೆ ತೆರಳುತ್ತಿದ್ದೇವೆ. ಆಗಸ್ಟ್ 2 ರಂದು ಅಲ್ಲಿನ ವಿಜ್ಞಾನ ಭವನದಲ್ಲಿ ಸಂವಿಧಾನ ರಕ್ಷಣೆ ಸವಾಲುಗಳು ಕುರಿತ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇವೆ. ನಾವು ಬೇರೆ ಯಾವುದೋ ವಿಚಾರಕ್ಕೆ ಹೋಗುತ್ತಿಲ್ಲ” ಎಂದರು.ದೆಹಲಿಗೆ ವಿಧಾನಸೌದ ವರ್ಗಾಹಿಸೋಣ ಎನ್ನುವ ವಿಜಯೇಂದ್ರ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅಯ್ಯೋ ಪಾಪ” ಎಂದು ಕುಟುಕಿದರು.
ಮುಖ್ಯಮಂತ್ರಿಗಳು ಡಿಸಿಎಂ ಅವರನ್ನು ಬಿಟ್ಟು ಶಾಸಕರ ಸಭೆ ನಡೆಸುತ್ತಿರುವ ಬಗ್ಗೆ ಕೇಳಿದಾಗ, “ವಿರೋಧ ಪಕ್ಷಗಳು ನನ್ನ ಬಗ್ಗೆ ಇಷ್ಟಾದರೂ ಕಾಳಜಿ ಇಟ್ಟುಕೊಂಡಿದ್ದಾರಲ್ಲ, ಬಹಳ ಸಂತೋಷ” ಎಂದು ತಿವಿದರು.ರಾಹುಲ್ ಗಾಂಧಿಯವರು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆಯೇ ಎಂದು ಕೇಳಿದಾಗ, “ಈ ಬಗ್ಗೆ ಚರ್ಚೆಯಿದೆ. ಅಧಿಕಾರಿಗಳ ಬಳಿ ಚರ್ಚೆ ನಡೆಸಿದ್ದೇನೆ. ಮುಖ್ಯಮಂತ್ರಿಗಳ ಬಳಿ ಚರ್ಚೆ ನಡೆಸಿದ ನಂತರ ತಿಳಿಸುತ್ತೇನೆ” ಎಂದರು.ನಟಿ ರಮ್ಯ ಅವರ ವಿರುದ್ಧ ಅವಹೇಳನ ಮಾಡಲಾಗುತ್ತಿದೆ. ರಮ್ಯ ಅವರ ಬೆಂಬಲಕ್ಕೆ ನಟ ಶಿವರಾಜ್ ಕುಮಾರ್, ಮಹಿಳಾ ಕಾಂಗ್ರೆಸ್ ಬೆಂಬಲ ನೀಡಿರುವ ಬಗ್ಗೆ ಕೇಳಿದಾಗ, “ನಮ್ಮ ಪಕ್ಷದವರು ಯಾರಿಗೆ ಬೆಂಬಲ ಕೊಡುತ್ತಾ ಇರುತ್ತಾರೋ ಅವರಿಗೆ ನಾವು ಕೂಡ ಬೆಂಬಲ ನೀಡುತ್ತೇವೆ. ಗೃಹಮಂತ್ರಿಯವರು ಇದರ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತಾರೆ” ಎಂದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



