ವಾಷಿಂಗ್ಟನ್: ಹೆಚ್ಚುತ್ತಿರುವ ಭಿನ್ನಾಭಿಪ್ರಾಯಗಳು ಹಾಗೂ ಸುಂಕ ಸಮರದ ನಡುವೆಯೇ ಭಾರತಕ್ಕೆ ಅಮೆರಿಕದ ಮುಂದಿನ ರಾಯಭಾರಿಯಾಗಿ ಡೊನಾಲ್ಡ್ ಟ್ರಂಪ್ ಅತ್ಯಂತ ಆಪ್ತ, ಸದ್ಯ ಶ್ವೇತ ಭವನದಲ್ಲಿ ಟ್ರಂಪ್ ಸಲಹೆಗಾರರಾಗಿರುವ ಸೆರ್ಗಿಯೊ ಗೋರ್ಅವರನ್ನು ಆಯ್ಕೆ ಮಾಡಲಾಗಿದೆ. ಈ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಹಿತಿ ನೀಡಿದ್ದು, ಸೆರ್ಗಿಯೊ ಗೋರ್ ಅವರು ಭಾರತಕ್ಕೆ ಮುಂದಿನ ಅಮೆರಿಕದ ರಾಯಭಾರಿ ಹಾಗೂ ದಕ್ಷಿಣ ಮತ್ತು ಮಧ್ಯ ಏಷ್ಯಾ ವ್ಯವಹಾರಗಳ ವಿಶೇಷ ರಾಯಭಾರಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರ ಅತ್ಯಂತ ಆಪ್ತರಲ್ಲೊಬ್ಬರು ಸೆರ್ಗಿಯೊ ಗೋರ್ ಪ್ರಸ್ತುತ ಶ್ವೇತಭವನದಲ್ಲಿ ಅಧ್ಯಕ್ಷೀಯ ಕಚೇರಿಯ ಮುಖ್ಯಸ್ಥರಾಗಿದ್ದು, ಟ್ರಂಪ್ ಆಪ್ತ ಸಲಹೆಗಾರರೂ ಆಗಿದ್ದಾರೆ. ಖುದ್ದು ಡೊನಾಲ್ಡ್ ಟ್ರಂಪ್ ಅವರೇ, ಸೆರ್ಗಿಯೊ ಗೋರ್ ತಮ್ಮ ಅತ್ಯುತ್ತಮ ಸ್ನೇಹಿತ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ, ಸೆರ್ಗಿಯೊ ಗೋರ್ ಗುಣಗಾನ ಮಾಡಿದ್ದಾರೆ.
ಡೊನಾಲ್ಡ್ ಟ್ರಂಪ್ ಹೇಳಿದ್ದೇನು?
ಸೆರ್ಗಿಯೊ ಗೋರ್ ಅವರನ್ನು ಭಾರತಕ್ಕೆ ನಮ್ಮ ಮುಂದಿನ ಅಮೆರಿಕದ ರಾಯಭಾರಿಯಾಗಿ, ದಕ್ಷಿಣ ಮತ್ತು ಮಧ್ಯ ಏಷ್ಯಾ ವ್ಯವಹಾರಗಳ ವಿಶೇಷ ರಾಯಭಾರಿಯಾಗಿ ಬಡ್ತಿ ನೀಡಿ ಘೋಷಣೆ ಮಾಡುವುದಕ್ಕೆ ಸಂತೋಷವಾಗಿದೆ ಎಂದು ಡೊನಾಲ್ಡ್ ಟ್ರಂಪ್ ಸಾಮಾಜಿಕ ಮಾಧ್ಯಮ ಸಂದೇಶದಲ್ಲಿ ತಿಳಿಸಿದ್ದಾರೆ. ಪ್ರಸ್ತುತ ಭಾರತದಲ್ಲಿ ಅಮೆರಿಕದ ರಾಯಭಾರಿಯಾಗಿ ಎರಿಕ್ ಗಾರ್ಸೆಟ್ಟಿ ಇದ್ದು, ಅವರ ಬದಲಿಗೆ ಸೆರ್ಗಿಯೊ ಗೋರ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಅಮೆರಿಕ ಸರ್ಕಾರದ ಅಧ್ಯಕ್ಷೀಯ ಸಿಬ್ಬಂದಿ ನಿರ್ದೇಶಕರಾಗಿ ಸೆರ್ಗಿಯೊ ಮತ್ತು ಅವರ ತಂಡವು ಸರ್ಕಾರದ ಪ್ರತಿಯೊಂದು ಇಲಾಖೆಯಲ್ಲಿ ದಾಖಲೆಯ ಸಮಯದಲ್ಲಿ ಸುಮಾರು 4000 ದೇಶಪ್ರೇಮಿಗಳನ್ನು ನೇಮಿಸಿದೆ ಎಂದು ಟ್ರಂಪ್ ಬಣ್ಣಿಸಿದ್ದಾರೆ. ಅಲ್ಲದೆ, ಶ್ವೇತಭವನಕ್ಕೆ ಸೆರ್ಗಿಯೊ ಗೋರ್ ನೀಡಿದ ಕೊಡುಗೆಗಳನ್ನು ಸ್ಮರಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಅಚ್ಚರಿಯ ಆಯ್ಕೆ
ಸದ್ಯ ಒಂದೆಡೆ ಭಾರತ ಮತ್ತು ಅಮೆರಿಕ ನಡುವಣ ಬಾಂಧವ್ಯ ಹಳಸುವತ್ತ ಸಾಗಿದೆ. ಆಪರೇಷನ್ ಸಿಂದೂರ್ ನಂತರ, ‘ಭಾರತ-ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ’ ಎಂದು ಟ್ರಂಪ್ ಪದೇಪದೆ ಹೇಳಿಕೆ ನೀಡಿದ್ದರಿಂದ ತೊಡಗಿ ಸುಂಕ ಸಮರದ ವರೆಗೆ ಭಿನ್ನಾಭಿಪ್ರಾಯಗಳು ಹೆಚ್ಚಾಗಿವೆ. ಇಂಥ ಸಂದರ್ಭದಲ್ಲೇ ಟ್ರಂಪ್ ಅತ್ಯಾಪ್ತನನ್ನೇ ಭಾರತದ ರಾಯಭಾರಿಯಾಗಿ ನೇಮಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಭಾರತ ಮತ್ತು ಏಷ್ಯಾ ಪ್ರದೇಶದಲ್ಲಿ ಅಮೆರಿಕದ ಕಾರ್ಯಸೂಚಿಯನ್ನು ಅನುಷ್ಠಾನಗೊಳಿಸುವಲ್ಲಿ ಸೆರ್ಗಿಯೊ ಗೋರ್ ಸಹಾಯ ಮಾಡುತ್ತಾರೆ ಎಂಬ ವಿಶ್ವಾಸ ಟ್ರಂಪ್ಗಿದೆ ಎನ್ನಲಾಗಿದೆ.ಸದ್ಯದ ಮಟ್ಟಿಗೆ ಸೆರ್ಗಿಯೊ ಗೋರ್ ಅವರ ಹೆಸರನ್ನು ಟ್ರಂಪ್ ಘೋಷಿಸಿದ್ದರೂ ಸಹ, ಸೆನೆಟ್ ಅನುಮೋದನೆ ಇನ್ನಷ್ಟೇ ದೊರೆಯಬೇಕಿದೆ. ಸೆನೆಟ್ ಅನುಮೋದನೆ ಪಡೆಯುವವರೆಗೆ, ಗೋರ್ ಅವರ ಪ್ರಸ್ತುತ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







