ಯುಗಾದಿ ವಿಶೇಷ: ಆರೋಗ್ಯದ ಗುಟ್ಟು ‘ಅಭ್ಯಂಗ’ದಲ್ಲಿದೆ – ಆಯುಷ್ ಅಧಿಕಾರಿ ಸಲಹೆ
‘ಬೇವು-ಬೆಲ್ಲ’ ಸವಿಯುವ ಯುಗಾದಿ ಹಬ್ಬವು ಕೇವಲ ಸಂಪ್ರದಾಯವಲ್ಲ, ಬದಲಾದ ವಾತಾವರಣಕ್ಕೆ ದೇಹವನ್ನು ಹೊಂದಿಸಿಕೊಳ್ಳುವ ವೈಜ್ಞಾನಿಕ ಆಚರಣೆ ಕೂಡ ಆಗಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ಚಂದ್ರಕಾಂತ್ ನಾಗಸಮುದ್ರ ತಿಳಿಸಿದ್ದಾರೆ.
ಯುಗಾದಿ ಸಂದರ್ಭದಲ್ಲಿ ‘ಅಭ್ಯಂಗ ಸ್ನಾನ’ಕ್ಕೆ ವಿಶೇಷ ಮಹತ್ವ ನೀಡಬೇಕು ಎಂದು ಸಲಹೆ ನೀಡಿರುವ ಅವರು, ಅಭ್ಯಂಗ ಎಂದರೆ ಮೈಗೆಲ್ಲಾ ತೈಲ ಹಚ್ಚಿಕೊಂಡು ಕನಿಷ್ಠ 45 ನಿಮಿಷಗಳ ಬಳಿಕ ಸ್ನಾನ ಮಾಡುವ ವಿಧಾನವಾಗಿದೆ ಎಂದು ವಿವರಿಸಿದ್ದಾರೆ.
ಇದು ಚರ್ಮದ ಆರೋಗ್ಯವನ್ನು ಕಾಪಾಡುವ ನೈಸರ್ಗಿಕ ಕವಚವಾಗಿದ್ದು, ತೈಲದಲ್ಲಿರುವ ಔಷಧೀಯ ಅಂಶಗಳು ಚರ್ಮದೊಳಗೆ ಸೇರಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಆಯುರ್ವೇದದ ಪ್ರಕಾರ ಎಳ್ಳೆಣ್ಣೆ ಅತ್ಯುತ್ತಮವಾಗಿದ್ದು, ಅಗತ್ಯಕ್ಕೆ ತಕ್ಕಂತೆ ವಿವಿಧ ತೈಲಗಳನ್ನು ಬಳಸಬಹುದು ಎಂದು ಹೇಳಿದ್ದಾರೆ.
ತೈಲ ಹಚ್ಚಿದ ನಂತರ ಬೆಳಗಿನ ಸೂರ್ಯನ ಬೆಳಕಿನಲ್ಲಿ ನಿಲ್ಲುವುದರಿಂದ ವಿಟಮಿನ್ ಡಿ ದೊರೆತು ಮೂಳೆಗಳು ಗಟ್ಟಿಯಾಗುತ್ತವೆ. ಜೊತೆಗೆ ಅಭ್ಯಂಗದಿಂದ ರಕ್ತಪರಿಚಲನೆ ಸುಧಾರಿಸಿ, ಸ್ನಾಯುಗಳು ಸಡಿಲಗೊಳ್ಳುತ್ತವೆ ಹಾಗೂ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಎಂದು ತಿಳಿಸಿದರು.
ಹೆಚ್ಚಿನ ತೂಕ ಹೊಂದಿರುವವರಿಗೆ ‘ಉದ್ವರ್ತನ’ ಎಂಬ ಶುಷ್ಕ ಅಭ್ಯಂಗ ವಿಧಾನವನ್ನು ಅನುಸರಿಸಲು ಸೂಚಿಸಿದ್ದು, ಇದು ತೂಕ ಇಳಿಕೆಗೆ ಸಹಕಾರಿಯಾಗಿದೆ. ನಿತ್ಯ ಆಹಾರದಲ್ಲಿ ಎಣ್ಣೆಕಾಳುಗಳು, ತುಪ್ಪ ಮತ್ತು ಪೌಷ್ಟಿಕ ಆಹಾರ ಪದಾರ್ಥಗಳನ್ನು ಬಳಸಬೇಕು ಎಂದು ಸಲಹೆ ನೀಡಿದ್ದಾರೆ.
ಅಭ್ಯಂಗವನ್ನು ಕೇವಲ ಹಬ್ಬಗಳಿಗೆ ಮಾತ್ರ ಸೀಮಿತಗೊಳಿಸದೆ, ವಾರಕ್ಕೊಮ್ಮೆಯಾದರೂ ಪಾಲಿಸುವುದು ಉತ್ತಮ ಆರೋಗ್ಯಕ್ಕಾಗಿ ಅಗತ್ಯ ಎಂದು ತಿಳಿಸಿರುವ ಅವರು, ಬೇಸಿಗೆ ಆರಂಭವಾಗುತ್ತಿರುವ ಈ ಸಮಯದಲ್ಲಿ ನಿಯಮಿತ ಅಭ್ಯಂಗವನ್ನು ಅನುಸರಿಸುವಂತೆ ಕರೆ ನೀಡಿದ್ದಾರೆ.
