ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ನಟ ಸುದೀಪ್ ಸಿನಿಮಾಗಳ ಮೂಲಕ ಒಂದಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ಕನ್ನಡ ಕಿರುತೆರೆ ಶೋ ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ಮತ್ತೊಂದಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ.ಕಿಚ್ಚ ಸುದೀಪ್ ಅವರ ಸಿನಿಮಾಗಳು ಒಂದು ತೂಕವಾದರೆ ಬಿಗ್ ಬಾಸ್ ಕಾರ್ಯಕ್ರಮ ಮತ್ತೊಂದು ತೂಕ. ಯಾಕಂದ್ರೆ ಇತ್ತೀಚೆಗೆ ಸಿನಿಮಾಗಳಿಗಿಂತ ಸುದೀಪ್ ಅವರು ಬಿಗ್ ಬಾಸ್ ಕಾರ್ಯಕ್ರಮದ ಮೂಲಕವೇ ಅತಿ ಹೆಚ್ಚು, ಹಾಗೂ ಪ್ರತಿ ಮನೆಗಳು ಮೆಚ್ಚಿದ ನಟನಾದವರು.ಒಂದು ಕಾಲದಲ್ಲಿ ಸಿನಿಮಾ ಪ್ರೇಮಿಗಳಿಗೆ ಮಾತ್ರ ಸುದೀಪ ಅವರ ಪರಿಚಯವಿತ್ತೇನೋ, ಆದರೆ ಈಗ ಪ್ರತಿ ಮನೆಯ ಮಕ್ಕಳಿಂದ ಹಿಡಿದು ಮಹಿಳೆಯರು, ಹಿರಿಯ ಸದಸ್ಯರಿಗೂ ಸುದೀಪ್ ಅವರು ಗೊತ್ತು.ಓದಿದ್ದು ಮೆಕಾನಿಕಲ್ ಇಂಜಿನಿಯರಿಂಗ್, ಆದರೆ ಅಭಿನಯವೆಂದರೆ ಅಚ್ಚುಮೆಚ್ಚು. ಹಾಗಾಗಿ ಮುಂಬೈನ ರೋಷನ್ ತನೇಜಾ ಸ್ಕೂಲ್ ಆಫ್ ಆಕ್ಟಿಂಗ್ ಸಂಸ್ಥೆಯಲ್ಲಿ ನಟನಾ ತರಬೇತಿ ಪಡೆದರು. ಆರಂಭದಲ್ಲಿ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಸುದೀಪ್ ಅವರು ಮೊದಲು ನಟಿಸಿದ್ದು ಕನ್ನಡ ಧಾರವಾಹಿಯಲ್ಲಿ. ಸುಧಾಕರ್ ಭಂಡಾರಿ ನಿರ್ದೇಶನದ ಪ್ರೇಮದ ಕಾದಂಬರಿ ಧಾರಾವಾಹಿಯಲ್ಲಿ ಅಭಿನಯಿಸಿದ್ದರು.ಅದಾದ ಬಳಿಕ ಬೆಳ್ಳಿತೆರೆಗೆ ಕಾಲಿಟ್ಟ ಸುದೀಪ್ ಅವರು ಮೊದಲು ಕಾಣಿಸಿಕೊಂಡದ್ದು ಪೋಷಕ ಪಾತ್ರಗಳಲ್ಲಿ. ಇವರು ಅಭಿನಯಿಸಿದ ಮೊದಲ ಸಿನಿಮಾ ಬ್ರಹ್ಮ ಬಿಡುಗಡೆಯಾಗಲಿಲ್ಲ. ಹಾಗಾಗಿ 1997 ರಲ್ಲಿ ತೆರೆಕಂಡ ತಾಯವ್ವ ಇವರು ಅಭಿನಯಿಸಿದ ಮೊದಲ ಚಿತ್ರ.ನಂತರ ಪ್ರತ್ಯಾರ್ಥ ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ಅಭಿನಯ. ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದ ಹೆಸರಾಂತ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಅವರು ನಿರ್ದೇಶಿಸಿದ ಸ್ಪರ್ಶ ಸಿನಿಮಾದ ಮೂಲಕ ಮೊದಲ ಬಾರಿಗೆ ನಾಯಕನಟನಾಗಿ ಅಭಿನಯ. ಈ ಸಿನಿಮಾ ಚಿತ್ರಮಂದಿರಗಳಲ್ಲಿ 100 ದಿನ ಓಡಿತ್ತು. ಸುದೀಪ ಅವರ ಸಿನಿಮಾ ಕಿರಿಯರಿಗೆ ಬೇಕಾಗಿದ್ದ ಗೆಲುವನ್ನು ಸ್ಪರ್ಶ ಸಿನಿಮಾ ನೀಡಿತ್ತು.ಆದರೆ ಸುದೀಪ್ ಅವರಿಗೆ ದೊಡ್ಡ ಬ್ರೇಕ್ ನೀಡಿದ್ದು ಮಾತ್ರ ನಂತರ ಅಭಿನಯಿಸಿದ, ಓಂ ಪ್ರಕಾಶ್ ರಾವ್ ನಿರ್ದೇಶನದ ಹುಚ್ಚ ಸಿನಿಮಾ. ಈ ಸಿನಿಮಾದಲ್ಲಿ ಅವರ ಪಾತ್ರದ ಹೆಸರು ಕಿಚ್ಚ. ಸಿನಿಮಾ ಎಷ್ಟು ಹಿಟ್ ಆಗಿತ್ತು ಎಂದರೆ, ಅಲ್ಲಿಂದ ಸುದೀಪ್ ಅವರನ್ನು ಅಭಿಮಾನಿಗಳು ಕಿಚ್ಚ ಎಂದೇ ಕರೆಯಲಾರಂಭಿಸಿದರು. ಅಂದಿನಿಂದ ಸುದೀಪ್ ಹೆಸರಿನ ಜೊತೆಗೆ ಕಿಚ್ಚ ಎಂಬ ಪದವು ಸೇರಿಕೊಂಡಿತು.ನಂದಿ, ಕಿಚ್ಚ, ಸ್ವಾತಿಮುತ್ತು, ಮೈ ಆಟೋಗ್ರಾಫ್, ಶಾಂತಿನಿವಾಸ, ಮುಸ್ಸಂಜೆ ಮಾತು, ವೀರಮದಕರಿ, ಜಸ್ಟ್ ಮಾತ್ ಮಾತಲ್ಲಿ, ವಿಷ್ಣುವರ್ಧನ, ಕೆಂಪೇಗೌಡ, ಮಾಣಿಕ್ಯ, ರನ್ನ, ಕೋಟಿಗೊಬ್ಬ 2, ಹೆಬ್ಬುಲಿ, ದಿ ವಿಲನ್, ಪೈಲ್ವಾನ್, ಕಬ್ಜ ಮುಂತಾದವು ಸುದೀಪ್ ಅವರ ಬಾಕ್ಸ್ ಆಫೀಸ್ ಹಿಟ್ ಸಿನಿಮಾಗಳು. ಹುಚ್ಚ ನಂದಿ ಸ್ವಾತಿಮುತ್ತು ಸಿನಿಮಾಗಳ ಅಭಿನಯಕ್ಕಾಗಿ ಫಿಲ್ಮೆ ಅವಾರ್ಡ್ ಸೌತ್ ಅತ್ಯುತ್ತಮ ನಟ ಪ್ರಶಸ್ತಿಗಳು ಬಂದಿವೆ.1971ರ ಸೆಪ್ಟಂಬರ್ 2ರಂದು ಸಂಜೀವ್ ಮಂಜಪ್ಪ ಹಾಗೂ ಸರೋಜ ದಂಪತಿಯ ಮಗನಾಗಿ ಶಿವಮೊಗ್ಗದಲ್ಲಿ ಜನಿಸಿದವರು ಸುದೀಪ್.ಸುದೀಪ್ ಅವರು ಕನ್ನಡ ಚಿತ್ರರಂಗದಲ್ಲಿ ಒಬ್ಬ ನಟನಾಗಿ ಮಾತ್ರವಲ್ಲದೆ, ನಿರ್ದೇಶಕ, ನಿರ್ಮಾಪಕ, ಹಾಡುಗಾರ, ಚಿತ್ರಕಥೆಗಾರ, ಕಿರುತೆರೆ ನಿರೂಪಕರು ಹೌದು. ಸುದೀಪ್ ಅವರು ಮೊದಮೊದಲು ಆಕ್ಷನ್ ಕಟ್ ಹೇಳಿದ ಸಿನಿಮಾ ಮೈ ಆಟೋಗ್ರಾಫ್. ಶೂಟಿಂಗ್ ಮುಗಿಯಲು ಸುಮಾರು 175 ದಿವಸಗಳನ್ನು ತೆಗೆದುಕೊಂಡ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸಕ್ಸಸ್ ಆಗಿತ್ತು. ಉಳಿದಂತೆ ನಂಬರ್ 73 ಶಾಂತಿ ನಿವಾಸ ವೀರಮದಕರಿ ಜಸ್ಟ್ ಮಾತ್ ಮಾತಲ್ಲಿ ಕೆಂಪೇಗೌಡ ಮಾಣಿಕ್ಯ ಸಿನಿಮಾಗಳನ್ನು ನಿರ್ದೇಶಿಸಿದ್ದರು. ಇವುಗಳಲ್ಲಿ ಜಸ್ಟ್ ಮಾತ್ ಮಾತಲ್ಲಿ ಸಿನಿಮಾಗೆ ಚಿತ್ರಕಥೆಯನ್ನು ಇವರೇ ಬರೆದಿದ್ದರು.
ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿರುವ ಸುದೀಪ್ ಅವರದು, ಒಂದು ನಿರ್ಮಾಣ ಸಂಸ್ಥೆಯು ಇದೆ. ಇವರ ಕಿಚ್ಚ ಕ್ರಿಯೇಶನ್ಸ್ ನಿರ್ಮಾಣ ಸಂಸ್ಥೆ ಅಡಿಯಲ್ಲೇ ಮೈ ಆಟೋಗ್ರಾಫ್, ನಂ 73 ಶಾಂತಿನಿವಾಸ, ಜಿಗರ್ ತಂಡ, ಮಾಣಿಕ್ಯ, ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು.ಕಿರುತೆರೆಯಲ್ಲಿ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ರಿಯಾಲಿಟಿ ಶೋ ಹೋಸ್ಟ್ ಮಾಡಿದ್ದ ಸುದೀಪ್ ಅವರು ಮುಂದೆ ಬಿಗ್ ಬಾಸ್ ರಿಯಾಲಿಟಿ ಶೋಧ ಹೋಸ್ಟ್ ಆಗಿ ಆಯ್ಕೆಯಾಗಿದ್ದರು. ಅಲ್ಲಿಂದ ಇಲ್ಲಿಯವರೆಗೆ ಬಿಗ್ ಬಾಸ್ ಕಾರ್ಯಕ್ರಮ ಹೋಸ್ಟ್ ಮಾಡುತ್ತಿರುವ ಸುದೀಪ್. ಬೇರೆಲ್ಲ ಭಾಷೆಗಳ ಬಿಗ್ ಬಾಸ್ ಆವೃತ್ತಿಗಳಲ್ಲಿ ಹೋಸ್ಟ್ ಗಳು ಬದಲಾಗಿದ್ದಾರೆ. ಆದರೆ ಕಳೆದ 12 ಆವೃತ್ತಿಗಳಿಂದ ಒಬ್ಬರೇ ಹೋಸ್ಟ್ ಮಾಡುತ್ತಿರುವುದು ನಮ್ಮ ಸುದೀಪ್ ಅವರು ಒಬ್ಬರೇ.ಹಾಡುಗಾರನಾಗಿ ಓ ಸೋನಾ, ವಸಂತ ಮಾಸದಲ್ಲಿ, ಸೊಂಟದ ವಿಷ್ಯ, ಡವ್ ಡವ್ ದುನಿಯಾ, ಮಚ್ಚ ಡವ್ ಹೊಡಿಯೋದು, ಜಿಂತಾ ತಾ, ಹಳೆ ರೇಡಿಯೋ, ಮುಂತಾದ ಹಾಡುಗಳು ಧ್ವನಿಯಾಗಿದ್ದಾರೆ.ಬಹುಭಾಷಣಘನಾಗಿರುವ ಸುದೀಪ್ ಅವರು ಕನ್ನಡ ಮಾತ್ರವಲ್ಲದೆ ಹಿಂದಿ ತಮಿಳು ತೆಲುಗು ಸಿನಿಮಾಗಳಲ್ಲೂ ತಮ್ಮ ಛಾಪು ಮಾಡಿಸಿದ್ದಾರೆ. ಹಿಂದಿಯ ಫೂಂಕ್, ರನ್, ಫೂಂಕ್ 2, ರಕ್ತ ಚರಿತ್ರ, ರಕ್ತ ಚರಿತ್ರ 2, ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ನಿರ್ದೇಶಕ ರಾಜ ಮೌಳಿ ನಿರ್ದೇಶನದ ಈಗ ತೆಲುಗು ಸಿನಿಮಾದ ನೆಗೆಟಿವ್ ಪಾತ್ರಕ್ಕಾಗಿ ಸೈಮ ಅತ್ಯುತ್ತಮ ಖಳನಟ ಪ್ರಶಸ್ತಿ, ಮತ್ತು ಅತ್ಯುತ್ತಮ ಪೋಷಕ ನಟ ಫಿಲಂ ಫೇರ್ ಅವಾರ್ಡ್ ಸಿಕ್ಕಿದೆ. ಉಳಿದಂತೆ ತೆಲುಗಿನ ಆಕ್ಷನ್ 3ಡಿ, ಬಾಹುಬಲಿ ದ ಬಿಗಿನಿಂಗ್, ಸೈರಾ ನರಸಿಂಹ ರೆಡ್ಡಿ, ಸಿನಿಮಾಗಳಲ್ಲೂ ಸುದೀಪ್ ಬಣ್ಣ ಹಚ್ಚಿದ್ದಾರೆ. ತಮಿಳಿನ ಪುಲಿ ಸಿನಿಮಾದಲ್ಲೂ ಸುದೀಪ್ ಅವರು ಕಾಣಿಸಿಕೊಂಡಿದ್ದಾರೆ.ಸುದೀಪ್ ಅವರ ಅಭಿನಯ ಪ್ರತಿಭೆಗೆ ಹಲವಾರು ಪ್ರಶಸ್ತಿಗಳು ಗೌರವಗಳು ಸಂದಿವೆ. ಅವುಗಳಿಗಿಂತ ಹೆಚ್ಚಾಗಿ ಅಭಿಮಾನಿಗಳ ಅಭಿಮಾನವೇ ದೊಡ್ಡದು ಎನ್ನುವ ಸುದೀಪ್ ಅವರಿಗೆ ಅಭಿಮಾನಿಗಳು ಅಭಿನಯ ಚಕ್ರವರ್ತಿ ಎನ್ನುವ ಬಿರುದನ್ನು ಕೊಟ್ಟಿದ್ದಾರೆ.
ಇಂದು ಕಿಚ್ಚನ ಬರ್ತಡೇಗೆ ಅಭಿಮಾನಿಗಳು ಕೇಕ್ ಕಟ್ ಮಾಡಿ, ಕಟೌಟ್ ಹಾಕಿ ನೆಚ್ಚಿನ ನಟನ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ನಮ್ಮ ಟೈಮ್ಸ್ ಆಫ್ ಬಯಲುಸೀಮೆ ಕಡೆಯಿಂದ ಕಿಚ್ಚ ಸುದೀಪ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







