ಅಧಿಕಾರ ಇದ್ದಾಗ ನವರಂಗಿ ಆಟ,ವಿರೋಧ ಪಕ್ಷದಲ್ಲಿದ್ದಾಗಗೋಸುಂಬೆ ನಾಟಕ..!ಅಧಿಕಾರ ಇದ್ದಾಗ ಹಗಲುವೇಷ,ವಿರೋಧಪಕ್ಷದಲ್ಲಿದ್ದಾಗ ರೋಷಾವೇಶ ಎಂದು ವಿಪಕ್ಷ ನಾಯಕರ ವಿರುದ್ಧ ಸಿಎಂ ಸಿದ್ದರಾಮಯ್ಯ ಮಾಧ್ಯಮ ಪ್ರಕಟಣೆ ಮೂಲಕ ಕಟು ನುಡಿಗಳಿಂದ ಕಿಡಿ ಕಾರಿದ್ದಾರೆ.
ಸನ್ಮಾನ್ಯ ಆರ್ ಅಶೋಕ್ ಅವರೇ,
ಈ ಬಣ್ಣನೆ ನಿಮ್ಮ ಆತ್ಮವಂಚಕ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ.ಸಾರಿಗೆ ನೌಕರರು ಮೊದಲ ಬಾರಿ ವೇತನ ಪರಿಷ್ಕರಣೆಗಾಗಿ ಮುಷ್ಕರ ನಡೆಸಿದಾಗ ಸಾರಿಗೆ ಸಚಿವರಾಗಿದ್ದವರು ನೀವೇ ಅಲ್ಲವೇ..? ಸಾರಿಗೆ ಸಂಸ್ಥೆಗಳ ಇತಿಹಾಸದಲ್ಲಿಯೇ ಮೊದಲ ಬಾರಿಗೆ 15 ದಿವಸಗಳ ಸುದೀರ್ಘ ಮುಷ್ಕರ ನಡೆದಾಗಲೂ ಸಾರಿಗೆ ಸಚಿವರಾಗಿ ಕೈಕಟ್ಟಿ ಕೂತು ತಮ್ಮ ಅಸಾಮರ್ಥ್ಯ ಪ್ರದರ್ಶಿಸಿದ್ದೂ ನೀವೇ ಅಲ್ಲವೇ..?ತಮ್ಮ ಪಕ್ಷದ ಅಧಿಕಾರದ ಅವಧಿಯಲ್ಲಿ ಸಾರಿಗೆ ನೌಕರರ ತಿಂಗಳ ವೇತನ ಹೇಗೆ ಪಾವತಿಯಾಗುತ್ತಿತ್ತು ಎಂದು ಮಾಹಿತಿ ಪಡೆದು ತಿಳಿಸುವಿರಾ? ಸಾರಿಗೆ ಸಂಸ್ಥೆಗಳ ಇತಿಹಾಸದಲ್ಲಿಯೇ ಮೊದಲ ಬಾರಿ ಸಾರಿಗೆ ನೌಕರರಿಗೆ ಅರ್ಧ ಸಂಬಳ, ಈ ತಿಂಗಳ ಸಂಬಳ ಮುಂದಿನ ತಿಂಗಳು ನೀಡುತ್ತಿದ್ದಾಗ ಅಧಿಕಾರದಲ್ಲಿದ್ದದ್ದು ನಿಮ್ಮದೇ ಪಕ್ಷ ಅಲ್ಲವೇ..?ನಮ್ಮ ಸರ್ಕಾರದ ಅವಧಿಯಲ್ಲಿ 2012-2016 ರವರೆಗೆ ವೇತನ ಹೆಚ್ಚಳ ಮಾಡಿ ಅದನ್ನು 2012 ರಿಂದಲೇ ಪೂರ್ವಾನ್ವಯ ಆಗುವಂತೆ ಜಾರಿಗೊಳಿಸಿದ್ದೆವು. 2016-2020 ರವರೆಗೆ ವೇತನ ಹೆಚ್ಚಳ ಮಾಡಿದಾಗ 2016 ರಿಂದ ಜಾರಿ ಮಾಡಿದ್ದೆವು.ಆದರೆ ತಮ್ಮ ಪಕ್ಷದ ಆಡಳಿತದ ಅವಧಿಯಲ್ಲಿ ಸಾರಿಗೆ ನೌಕರರು 2020ರಿಂದಲೇ ವೇತನ ಹೆಚ್ಚಳ ಮಾಡಬೇಕೆಂದು ಬೇಡಿಕೆ ಸಲ್ಲಿಸಿದ್ದರೂ 01-03-2023ರಿಂದ ಜಾರಿಗೊಳಿಸಿ ಟಿಡಿ 12 ಟಿಸಿಬಿ 2023, ಬೆಂಗಳೂರು ನೌಕರರಿಗೆ ಅನ್ಯಾಯ ಮಾಡಿದ್ದು ನೀವೇ ಅಲ್ಲವೇ..?
ತಮ್ಮ ಪಕ್ಷದ ಅವಧಿಯಲ್ಲಿ ನೇಮಕಾತಿ ಮತ್ತು ಹೊಸ ಬಸ್ ಸೇರ್ಪಡೆ ಸ್ಥಗಿತಗೊಂಡಿತ್ತು, ನೌಕರರ ಭವಿಷ್ಯ ನಿಧಿ ಮತ್ತು ಡೀಸೆಲ್ ಹಣ ಪಾವತಿ, ಇತರೆ ಹೊಣೆಗಾರಿಕೆ ಹೀಗೆ ರೂ.5,900 ಕೋಟಿ ಬಾಕಿ ಇತ್ತು ಎಂಬುದರ ಬಗ್ಗೆ ನಿಮಗೆ ಮಾಹಿತಿಯಿದೆಯೇ..?ನಿಮ್ಮ ಪಕ್ಷದ ಅಧಿಕಾರವಾಧಿಯಲ್ಲಿ ಸಂಪೂರ್ಣ ಸ್ಥಗಿತಗೊಂಡಿದ್ದ ನೇಮಕಾತಿಗೆ ಚಾಲನೆ ನೀಡಿದವರು ನಾವು. 10,000 ಹೊಸ ನೇಮಕಾತಿ ಮಾಡಿದ್ದೆವು. ಇದರಲ್ಲಿ 8 ವರ್ಷಗಳಿಂದ ಅನುಕಂಪದ ಆಧಾರದ ನೌಕರಿ ನೀಡದಿರುವ 1,000 ಮೃತರ ಅವಲಂಬಿತರು ಇದ್ದಾರೆ. 5,200 ಹೊಸ ಬಸ್ಸುಗಳ ಸೇರ್ಪಡೆ ಮಾಡಿದ್ದೇವೆ. ಕನಿಷ್ಠ ಈ ಮಾಹಿತಿಯಾದರೂ ನಿಮಗೆ ತಿಳಿದಿಯೇ…?
ನೌಕರರ ಭವಿಷ್ಯ ನಿಧಿ ಮತ್ತು ಡೀಸೆಲ್ ಮೊತ್ತ ಪಾವತಿ ಬಾಕಿ ಪಾವತಿಗಾಗಿ ರೂ.2,000 ಕೋಟಿ ಹಣವನ್ನು ಬ್ಯಾಂಕ್ ಗಳಿಂದ ಸಾಲ ಪಡೆದವರು ನೀವು. ಅದರ ಅಸಲು ಮತ್ತು ಬಡ್ಡಿಯನ್ನು ಮರುಪಾವತಿ ಮಾಡುತ್ತಿರುವವರು ನಾವು. ಇದೇನಾ ನಿಮ್ಮ ಕಾಲದ ಸರ್ಕಾರದ ಸಾಧನೆ..?ನಾನು ಖುದ್ದಾಗಿ ಕರ್ನಾಟಕ ರಾಜ್ಯ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜೊತೆ ಮಾತುಕತೆ ನಡೆಸಿದ್ದೆ. ಇದಕ್ಕಿಂತ ಮೊದಲು ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿಯವರೂ ಸಂಧಾನದ ಪ್ರಯತ್ನ ಮಾಡಿದ್ದಾರೆ.ಆರ್ .ಅಶೋಕರ್ ಅವರೇ, ನಿಮ್ಮ ಪಕ್ಷದ ಅಧಿಕಾರಾವಧಿಯಲ್ಲಿ ರಚಿಸಿದ್ದ ಏಕಸದಸ್ಯ ಸಮಿತಿ ರೂ.718 ಕೋಟಿ ವೇತನಪರಿಷ್ಕರಣೆ ಬಾಕಿ ನೀಡಲು ಶಿಫಾರಸು ಮಾಡಿತ್ತು. ಆದರೆ ನಿಮ್ಮ ಸರ್ಕಾರ ವೇತನ ಪರಿಷ್ಕರಣೆ ಬಾಕಿಯನ್ನು ಪಾವತಿ ಮಾಡಿರಲಿಲ್ಲ. ಆ ವೇತನ ಪರಿಷ್ಕರಣೆ ಬಾಕಿಯನ್ನು ಪಾವತಿ ಮಾಡಲು ನಮ್ಮ ಸರ್ಕಾರ ಬದ್ದವಾಗಿದೆ. ನಮ್ಮ ಸರ್ಕಾರದ ಈ ನಿಲುವನ್ನು ಸಾರಿಗೆ ನೌಕರರಿಗೆ ತಿಳಿಸಿ ಮುಷ್ಕರ ಕೈಬಿಟ್ಟು ಮುಂದಿನ ದಿನಗಳಲ್ಲಿ ಮಾತುಕತೆ ಮುಂದುವರಿಸಬಹುದು ಎಂದು ಮನವಿ ಮಾಡಿದ್ದರೂ ನೌಕರರ ಸಂಘಟನೆಗಳು ಮುಷ್ಕರ ಹೂಡಿದ್ದಾರೆ.
ನಮ್ಮದು ಕಾರ್ಮಿಕರ ಪರ ಸರ್ಕಾರ, ಅವರ ಹಿತಾಸಕ್ತಿ ಕಾಪಾಡಲು ನಾವು ಬದ್ಧರಾಗಿದ್ದೇವೆ. ಭಾರತೀಯ ಜನತಾ ಪಕ್ಷ ರೈತರು ಮತ್ತು ಕಾರ್ಮಿಕರ ವಿರೋಧಿ ಎನ್ನುವುದಕ್ಕೆ ಇತಿಹಾಸವೇ ಸಾಕ್ಷಿ. ನಿಮ್ಮ ಮರೆಗುಳಿತನಕ್ಕೆ ನನ್ನ ಅನುಕಂಪ ಇದೆ. ನನ್ನ ಮತ್ತು ನಮ್ಮ ಸರ್ಕಾರದ ವಿರುದ್ಧ ಆರೋಪ ಮಾಡುವ ಮೊದಲು, ಸಾರಿಗೆ ಸಚಿವರಾಗಿ ನೀವು ಮತ್ತು ನಿಮ್ಮ ಸರ್ಕಾರ ರಾಜ್ಯ ರಸ್ತೆ ಸಾರಿಗೆ ನೌಕರರಿಗೆ ಮಾಡಿರುವ ಮೋಸ ಮತ್ತು ದ್ರೋಹದ ಇತಿಹಾಸವನ್ನು ನೆನಪು ಮಾಡಿಕೊಳ್ಳಿ ಎಂದು ಪ್ರಶ್ನೆವಳಿಗಳ ಮೂಲಕ ವಿಪಕ್ಷ ನಾಯಕರ ಹೇಳಿಕೆಗೆ ಟಾಂಗ್ ಕೊಟ್ಟಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



