ಪಿಯು ಆಡಳಿತ ಪ್ರಸ್ತಾವ ಹಿಂಪಡೆದು ಉಪನ್ಯಾಸಕರಿಗೆ ಭರವಸೆ: ಮೌಲ್ಯಮಾಪನ ಬಹಿಷ್ಕಾರ ಹಿಂಪಡೆದ ಸಂಘಟನೆ
ಪಿಯು ಆಡಳಿತ ನಿಯಂತ್ರಣವನ್ನು ಜಿಲ್ಲಾ ಪಂಚಾಯತ್ ಸಿಇಒಗಳಿಗೆ ವಹಿಸುವ ಪ್ರಸ್ತಾವನೆಯನ್ನು ಸದ್ಯಕ್ಕೆ ಕೈಬಿಟ್ಟಿರುವುದಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ನೀಡಿದ ಭರವಸೆಯನ್ನು ಚಿತ್ರದುರ್ಗ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಸ್ವಾಗತಿಸಿದೆ.
ಸಂಘದ ಜಿಲ್ಲಾಧ್ಯಕ್ಷ ಬಿ.ಆರ್. ಮಲ್ಲೇಶ್ ಅವರು ಸಚಿವರಿಗೆ ಅಭಿನಂದನೆ ಸಲ್ಲಿಸಿದ್ದು, ರಾಜ್ಯದ ಪದವಿ ಪೂರ್ವ ಶಿಕ್ಷಣ ಇಲಾಖೆ ಗುಣಮಟ್ಟದ ಶಿಕ್ಷಣದಲ್ಲಿ ತನ್ನದೇ ಆದ ಅಸ್ತಿತ್ವ ಹೊಂದಿದೆ ಎಂದು ತಿಳಿಸಿದ್ದಾರೆ.
ಪಿಯು ಇಲಾಖೆ ನಿಯಂತ್ರಣವನ್ನು ಜಿಲ್ಲಾ ಪಂಚಾಯತ್ ಸಿಇಒಗಳಿಗೆ ವರ್ಗಾಯಿಸುವ ಪ್ರಸ್ತಾವಕ್ಕೆ ವಿರೋಧವಾಗಿ ಸಂಘಟನೆಗಳು ಮೌಲ್ಯಮಾಪನ ಬಹಿಷ್ಕಾರಕ್ಕೆ ಕರೆ ನೀಡಿದ್ದವು. ಈ ಹಿನ್ನೆಲೆಯಲ್ಲಿ ಮಾರ್ಚ್ 12ರಂದು ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು.
ವಿಧಾನ ಪರಿಷತ್ತಿನ ಶೂನ್ಯ ವೇಳೆಯಲ್ಲಿ ಈ ವಿಚಾರ ಪ್ರಸ್ತಾಪವಾಗಿದ್ದು, ಸರ್ಕಾರವು ಈ ಪ್ರಸ್ತಾವ ಮುಂದಿಲ್ಲ ಎಂದು ಸ್ಪಷ್ಟಪಡಿಸಿದೆ. ಜೊತೆಗೆ ಉಪನ್ಯಾಸಕರ ಐದು ಬೇಡಿಕೆಗಳ ಬಗ್ಗೆ ಸಕಾರಾತ್ಮಕ ಸ್ಪಂದನೆ ದೊರೆತಿದ್ದು, ವಿದ್ಯಾರ್ಥಿ-ಉಪನ್ಯಾಸಕರ ಅನುಪಾತ ಇಳಿಕೆ ಹಾಗೂ ಅನುದಾನಿತ ಕಾಲೇಜು ಉಪನ್ಯಾಸಕರ ನಿಯೋಜನೆಗೆ ಆದ್ಯತೆ ನೀಡಲಾಗಿದೆ.
ಈ ಬೆಳವಣಿಗೆಯ ಹಿನ್ನೆಲೆ, ಮಾರ್ಚ್ 18ರಂದು ನಡೆದ ಗೂಗಲ್ ಮೀಟ್ ಸಭೆಯಲ್ಲಿ ಬಹುಮತ ಅಭಿಪ್ರಾಯದ ಆಧಾರದ ಮೇಲೆ ಮೌಲ್ಯಮಾಪನ ಬಹಿಷ್ಕಾರವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ ಎಂದು ಸಂಘಟನೆ ಪ್ರಕಟಿಸಿದೆ.
ಜಿಲ್ಲೆಯ ಎಲ್ಲಾ ಉಪನ್ಯಾಸಕರು ನಿಗದಿತ ವೇಳಾಪಟ್ಟಿಯಂತೆ ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸಿ, ಏಪ್ರಿಲ್ 7ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಲು ಸಹಕರಿಸುವಂತೆ ಮನವಿ ಮಾಡಲಾಗಿದೆ.
ಸಂಘಟನೆ ಪರವಾಗಿ ಈ ಹೋರಾಟಕ್ಕೆ ಬೆಂಬಲ ನೀಡಿದ ಮಾಧ್ಯಮ, ವಿದ್ಯಾರ್ಥಿಗಳು, ಪೋಷಕರು, ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ಧನ್ಯವಾದಗಳು ಸಲ್ಲಿಸಲಾಗಿದೆ
