ಪ್ಲೆಕ್ಸ್ ಬೇಡ, ಸೇವೆ ಮಾಡಿ; ಯದುವೀರ್ ಮಾದರಿ ನಡೆ
ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಮ್ಮ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಬಾರದು ಎಂದು ಅಭಿಮಾನಿಗಳು ಹಾಗೂ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.
ಮಾರ್ಚ್ 24ರಂದು ನಡೆಯುವ ತಮ್ಮ ಜನ್ಮದಿನದ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರಕಟಣೆ ಹೊರಡಿಸಿರುವ ಅವರು, ಯಾವುದೇ ರೀತಿಯ ಆಡಂಬರ, ದುಬಾರಿ ವೆಚ್ಚ ಹಾಗೂ ಭರ್ಜರಿ ಸಂಭ್ರಮಗಳಿಂದ ದೂರವಿರಲು ಕರೆ ನೀಡಿದ್ದಾರೆ. ಬದಲಾಗಿ, ಸಮಾಜಮುಖಿ ಕಾರ್ಯಗಳ ಮೂಲಕ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವಂತೆ ತಿಳಿಸಿದ್ದಾರೆ.
ರಕ್ತದಾನ ಶಿಬಿರ, ಅನ್ನದಾನ, ಸಸಿ ನೆಡುವುದು ಹಾಗೂ ಜನೋಪಕಾರಿ ಸೇವೆಗಳಲ್ಲಿ ತೊಡಗಿಕೊಳ್ಳುವುದೇ ನಿಜವಾದ ಸಂಭ್ರಮ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ, ಮೈಸೂರು ನಗರದ ಸೌಂದರ್ಯ ಕಾಪಾಡುವ ನಿಟ್ಟಿನಲ್ಲಿ ಜನ್ಮದಿನದ ನೆಪದಲ್ಲಿ ಎಲ್ಲೆಡೆ ಪ್ಲೆಕ್ಸ್ ಹಾಗೂ ಬ್ಯಾನರ್‌ಗಳನ್ನು ಅಳವಡಿಸಬಾರದು ಎಂದು ಸ್ಪಷ್ಟವಾಗಿ ಸೂಚಿಸಿದ್ದಾರೆ.
ಪ್ಲೆಕ್ಸ್‌ಗಳಿಂದ ಪರಿಸರ ಹಾನಿಯಾಗುವುದಲ್ಲದೆ ನಗರದ ಅಂದವೂ ಹಾಳಾಗುತ್ತದೆ ಎಂದು ಹೇಳಿದ್ದಾರೆ.
ಪ್ಲೆಕ್ಸ್ ಮುಕ್ತ ಮೈಸೂರು ಎಂಬುದು ತನ್ನ ಕನಸು ಎಂದು ತಿಳಿಸಿರುವ ಅವರು, ಈ ಕನಸನ್ನು ಸಾಕಾರಗೊಳಿಸಲು ಜನರ ಸಹಕಾರವೇ ದೊಡ್ಡ ಉಡುಗೊರೆ ಎಂದು ಹೇಳಿದ್ದಾರೆ.
ನಾಡದೇವತೆ ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಎಲ್ಲರ ಮೇಲೂ ಇರಲಿ ಎಂದು ಅವರು ಪ್ರಾರ್ಥಿಸಿದ್ದಾರೆ.
