ಹೈ-ಪ್ರೊಫೈಲ್ ಗೋಲ್ಡ್ ಸ್ಕ್ಯಾಮ್; ಸ್ಯಾಂಡಲ್ ವುಡ್ ನಟನಿಗೆ ಬಂಧನ ಭೀತಿ
ರಾಜ್ಯದ ಗಮನ ಸೆಳೆದಿರುವ ಹೈ-ಪ್ರೊಫೈಲ್ ‘ಗೋಲ್ಡ್ ವಂಚನೆ’ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಐಶ್ವರ್ಯಾ ಗೌಡಗೆ ಸಂಕಷ್ಟ ಮತ್ತಷ್ಟು ಗಂಭೀರವಾಗಿದೆ. ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದು, ಬಂಧನ ಭೀತಿ ಹೆಚ್ಚಾಗಿದೆ.
ಸಿಐಡಿ ತನಿಖೆಯಲ್ಲಿ ಐಶ್ವರ್ಯಾ ಗೌಡ ಹಾಗೂ ಪತಿ ಕೆ.ಎನ್. ಹರೀಶ್ ವಿರುದ್ಧ ಹಲವು ಸ್ಫೋಟಕ ಮಾಹಿತಿಗಳು ಬಹಿರಂಗವಾಗಿವೆ. ‘ಐಶ್ವರ್ಯಾ ಗೌಡ’ ಹಾಗೂ ‘ನವ್ಯಾಶ್ರೀ’ ಎಂಬ ಎರಡು ಹೆಸರಿನಲ್ಲಿ ಪ್ರತ್ಯೇಕ ಆಧಾರ್, ಪ್ಯಾನ್ ಕಾರ್ಡ್ ಬಳಸಿದ ಆರೋಪವೂ ಬೆಳಕಿಗೆ ಬಂದಿದೆ.
2017ರಿಂದಲೇ ಚಿನ್ನ ಹೂಡಿಕೆ ಮತ್ತು ಲಾಭದಾಯಕ ಯೋಜನೆಗಳ ಹೆಸರಿನಲ್ಲಿ ಹಲವರನ್ನು ಮೋಸ ಮಾಡಿ, ₹100 ಕೋಟಿಗೂ ಅಧಿಕ ಹಣ ವಂಚಿಸಿರುವ ಆರೋಪ ಎದುರಾಗಿದೆ.
ತಮ್ಮನ್ನು ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಸೋದರಿ ಎಂದು ಹೇಳಿಕೊಂಡು ಜನರಲ್ಲಿ ನಂಬಿಕೆ ಮೂಡಿಸಿದ್ದಳು ಎನ್ನಲಾಗಿದೆ.
ವಂಚನೆಯ ಹಣದಿಂದ ಮರ್ಸಿಡಿಸ್, ಜಾಗ್ವಾರ್, ಆಡಿ ಕಾರುಗಳಲ್ಲಿ ಐಶಾರಾಮಿ ಜೀವನ ನಡೆಸುತ್ತಿದ್ದಳು. ಖಾಸಗಿ ಗನ್‌ಮ್ಯಾನ್, ಬಾಡಿಗಾರ್ಡ್‌ಗಳೊಂದಿಗೆ ಓಡಾಟ ನಡೆಸುತ್ತಿದ್ದಳು ಎಂಬ ಮಾಹಿತಿ ಹೊರಬಂದಿದೆ.
ನಟ ಧರ್ಮ ಮೇಲೂ ಅನುಮಾನ ವ್ಯಕ್ತವಾಗಿದ್ದು, ಮಿಮಿಕ್ರಿ ಮೂಲಕ ಡಿ.ಕೆ.ಸುರೇಶ್ ಅವರ ಧ್ವನಿ ಬಳಕೆ ಆರೋಪ ಹಿನ್ನೆಲೆ ವಾಯ್ಸ್ ಸ್ಯಾಂಪಲ್ ಎಫ್ ಎಸ್ ಎಲ್ ಗೆ ಕಳುಹಿಸಲಾಗಿದೆ.
ರಾಜ್ಯದ ದೊಡ್ಡ ಆರ್ಥಿಕ ಅಪರಾಧಗಳಲ್ಲಿ ಒಂದಾಗಿ ಬೆಳೆಯುತ್ತಿರುವ ಈ ಪ್ರಕರಣದಲ್ಲಿ ಸಿಐಡಿ ತನಿಖೆ ಇನ್ನಷ್ಟು ವಿಸ್ತಾರಗೊಳ್ಳುವ ಸಾಧ್ಯತೆ ಇದ್ದು, ಇನ್ನಷ್ಟು ದೊಡ್ಡ ಹೆಸರುಗಳು ಹೊರಬರುವ ಸೂಚನೆಗಳಿವೆ
