ಚನ್ನಗಾನಹಳ್ಳಿ: ಕೃಷಿಹೊಂಡದಲ್ಲಿ ಮುಳುಗಿ 6ನೇ ತರಗತಿ ವಿದ್ಯಾರ್ಥಿ ಸಾವು
ಚಳ್ಳಕೆರೆ, ಮಾ.30: ತಾಲ್ಲೂಕಿನ ತಳಕು ಠಾಣಾ ವ್ಯಾಪ್ತಿಯ ಚನ್ನಗಾನಹಳ್ಳಿ ಗ್ರಾಮದಲ್ಲಿ ಸ್ನೇಹಿತರೊಂದಿಗೆ ಈಜಾಡಲು ತೆರಳಿದ್ದ 6ನೇ ತರಗತಿ ವಿದ್ಯಾರ್ಥಿಯೊಬ್ಬ ಕೃಷಿಹೊಂಡದಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಟಿ. ಕೀರ್ತನ (12) ಎಂದು ಗುರುತಿಸಲಾಗಿದೆ. ಇವರು ಗ್ರಾಮದ ಅಂಗನವಾಡಿ ಕೇಂದ್ರದ ಸಹಾಯಕಿ ಅಂಬಿಕಾ ಅವರ ಪುತ್ರನಾಗಿದ್ದಾರೆ. ಶಾಲೆಗೆ ರಜೆ ಇದ್ದ ಹಿನ್ನೆಲೆಯಲ್ಲಿ ಬೆಳಗ್ಗೆ ಸುಮಾರು 11.30ರ ವೇಳೆಗೆ ಸ್ನೇಹಿತರೊಂದಿಗೆ ಕೃಷಿಹೊಂಡಕ್ಕೆ ಈಜಾಡಲು ತೆರಳಿದ್ದ ವೇಳೆ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಮಗನ ಸಾವಿನಲ್ಲಿ ಯಾವುದೇ ಅನುಮಾನವಿಲ್ಲವೆಂದು ಪೋಷಕರು ದೂರು ನೀಡಿದ್ದು, ಪ್ರಕರಣವನ್ನು ಎಎಸ್‌ಐ ಟಿ.ಎನ್. ಮಂಜಣ್ಣ ದಾಖಲಿಸಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚಿತ್ರ ವಿವರಣೆ:
ಚಳ್ಳಕೆರೆ ತಾಲ್ಲೂಕಿನ ಚನ್ನಗಾನಹಳ್ಳಿ ಗ್ರಾಮದಲ್ಲಿ ಕೃಷಿಹೊಂಡದಲ್ಲಿ ಮುಳುಗಿ ಮೃತಪಟ್ಟ ವಿದ್ಯಾರ್ಥಿಯ ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ ದೃಶ್ಯ.
