ಚಿತ್ರದುರ್ಗ: ಬಡತನದಿಂದ ಚಿನ್ನದ ಪದಕದವರೆಗೆ – ಪೊಲೀಸ್ ಇಲಾಖೆಗೆ ಕೀರ್ತಿ ತಂದ ಷರೀಫ್ ಎಂ.
ಚಿತ್ರದುರ್ಗ: ಮೂಲತಃ ಚಳ್ಳಕೆರೆ ತಾಲ್ಲೂಕಿನ ಕಾಟಂದೇವರ ಕೋಟೆಯ ನಿವಾಸಿ ಷರೀಫ್ ಎಂ. ಅವರು ಮುಖ್ಯಮಂತ್ರಿಗಳ 2025ನೇ ಸಾಲಿನ ಚಿನ್ನದ ಪದಕಕ್ಕೆ ಭಾಜನರಾಗಿ ಪೊಲೀಸ್ ಇಲಾಖೆಗೆ ಕೀರ್ತಿ ತಂದಿದ್ದಾರೆ.
ಚಿತ್ರದುರ್ಗದ ಮಹಾರಾಣಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ 2008-10ನೇ ಸಾಲಿನಲ್ಲಿ ಪಿ.ಯು.ಸಿ. ವ್ಯಾಸಂಗ ಮಾಡಿದ್ದ ಷರೀಫ್ ಎಂ. ಕಡುಬಡತನದಲ್ಲಿ ಬೆಳೆದವರು. ನಂತರ ಕೂಡ್ಲಿಗಿ ತಾಲ್ಲೂಕಿನ ಸುಲ್ತಾನಿಪುರದಲ್ಲಿ ವಾಸವಾಗಿರುವ ತಮ್ಮ ಸಹೋದರಿಯ ನೆರವಿನಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿ, 2014ರಲ್ಲಿ ಕೆ.ಎಸ್.ಐ.ಎಸ್.ಎಫ್.ನಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಆಗಿ ಸೇವೆಗೆ ಸೇರ್ಪಡೆಗೊಂಡರು.
ಬುನಾದಿ ತರಬೇತಿ ಪೂರ್ಣಗೊಳಿಸಿದ ಬಳಿಕ ಆಂತರಿಕ ವಿಭಾಗದ ತಾಂತ್ರಿಕ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ ಅವರು, 2017ರಲ್ಲಿ ಸಿವಿಲ್ ಪೊಲೀಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಬೆಂಗಳೂರಿನಲ್ಲಿ ಕಾನ್ಸ್‌ಟೇಬಲ್ ಆಗಿ ಆಯ್ಕೆಯಾದರು. ತಾಂತ್ರಿಕ ಕ್ಷೇತ್ರದಲ್ಲಿ ನಿಪುಣತೆ ಹೊಂದಿದ್ದ ಇವರಲ್ಲಿ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದ ಕಾಲ್ ಡೀಟೆಲ್ ರೆಕಾರ್ಡ್ (CDR) ವಿಶ್ಲೇಷಣೆಯಲ್ಲಿ ವಿಶಿಷ್ಟ ಪರಿಣತಿ ಕಂಡುಬಂದಿತು.
ಈ ಸಾಮರ್ಥ್ಯವನ್ನು ಗುರುತಿಸಿದ ಮೇಲಾಧಿಕಾರಿಗಳು, ಇಲಾಖೆಗೆ ಸವಾಲಾಗಿದ್ದ ವಿವಿಧ ಪ್ರಕರಣಗಳ ಪತ್ತೆ ಕಾರ್ಯದ ಜವಾಬ್ದಾರಿಯನ್ನು ಇವರಿಗೆ ವಹಿಸಿದರು. 2017ರಿಂದ ಇಲ್ಲಿಯವರೆಗೆ ಕೊಲೆ, ಮಾರಣಾಂತಿಕ ಹಲ್ಲೆ, ದ್ವಿಚಕ್ರ ವಾಹನ ಕಳವು, ಮನೆಗಳ್ಳತನ ಹಾಗೂ ರಾಬರಿ ಪ್ರಕರಣಗಳಲ್ಲಿ ತಾಂತ್ರಿಕ ಮಾಹಿತಿಗಳ ಸಂಗ್ರಹ ಹಾಗೂ ಆರೋಪಿಗಳ ಪತ್ತೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ನಿಷ್ಠೆ, ಪ್ರಾಮಾಣಿಕತೆ ಹಾಗೂ ಕರ್ತವ್ಯನಿಷ್ಠೆಯಿಂದ ಸೇವೆ ಸಲ್ಲಿಸಿರುವ ಷರೀಫ್ ಎಂ. ಅವರ ಸಾಧನೆಯನ್ನು ಗುರುತಿಸಿ ಮುಖ್ಯಮಂತ್ರಿಗಳ ಚಿನ್ನದ ಪದಕ ನೀಡಲಾಗಿದೆ.
ಜಿಲ್ಲಾ ಮದಕರಿನಾಯಕ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಎಸ್. ಸಂದೀಪ್ ಅವರು ಷರೀಫ್ ಎಂ. ಅವರ ಸಾಧನೆಯನ್ನು ಅಭಿನಂದಿಸಿದ್ದಾರೆ.
