ಎಲ್ಲರ ವಿಶ್ವಾಸದಿಂದ ಬಿಜೆಪಿಯನ್ನು ಎತ್ತರಕ್ಕೆ ಕೊಂಡಯ್ಯಲಾಗುವುದು: ಎಸ್. ಲಿಂಗಮೂರ್ತಿ
ಹೊಸದುರ್ಗ, ಮಾ.31: ತಾಲೂಕಿನ ಬಿಜೆಪಿ ಪಕ್ಷದ ಎಲ್ಲಾ ಕಾರ್ಯಕರ್ತರು ಹಾಗೂ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಮಂಡಲ ಅಧ್ಯಕ್ಷ ಅಣ್ಣಪ್ಪಸ್ವಾಮಿ ಹೊತ್ತುಕೊಳ್ಳಬೇಕು. ಎಲ್ಲರ ಸಹಕಾರ ಮತ್ತು ವಿಶ್ವಾಸದಿಂದ ಬಿಜೆಪಿಯನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಎತ್ತರಕ್ಕೆ ಕೊಂಡಯ್ಯಬಹುದು ಎಂದು ರಾಜ್ಯ ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್. ಲಿಂಗಮೂರ್ತಿ ಹೇಳಿದರು.
ಪಟ್ಟಣದ ಹೊಳಲ್ಕೆರೆ ರಸ್ತೆಯಲ್ಲಿ ತಾಲೂಕು ಬಿಜೆಪಿ ಮಂಡಲದ ಕಾರ್ಯಾಲಯ ಉದ್ಘಾಟನೆ ಮತ್ತು ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ತತ್ವ-ಸಿದ್ಧಾಂತದಲ್ಲಿ ನಂಬಿಕೆಯಿಟ್ಟಿರುವ ಪಕ್ಷವಾಗಿದ್ದು, ದೇಶ ಮತ್ತು ಧರ್ಮದ ವಿಷಯದಲ್ಲಿ ಎಂದಿಗೂ ರಾಜಿಯಾಗದೆ ಮುನ್ನಡೆಯುತ್ತಿದೆ ಎಂದರು.
ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಪಕ್ಷವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದು, ಮುಂದಿನ ಬಿಎಲ್‌ಎ-೨ ಕಾರ್ಯಗಾರ ಹಾಗೂ ಜಿ ರಾಮ್ ಜಿ ಕಾರ್ಯಕ್ರಮಗಳನ್ನು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಯಶಸ್ವಿಯಾಗಿ ನಡೆಸುವಂತೆ ಸಲಹೆ ನೀಡಿದರು.
ತಾಲೂಕು ಮಂಡಲ ನೂತನ ಅಧ್ಯಕ್ಷ ಅಣ್ಣಪ್ಪಸ್ವಾಮಿ ಮಾತನಾಡಿ, ನಿಕಟಪೂರ್ವ ಅಧ್ಯಕ್ಷ ಗೂಳಿಹಟ್ಟಿ ಜಗದೀಶ್ ಅವರು ಪಕ್ಷದ ಬಲವರ್ಧನೆಗೆ ಶ್ರಮವಹಿಸಿದ್ದು, ಅವರ ಮಾರ್ಗದರ್ಶನದಲ್ಲಿ ಪಕ್ಷವನ್ನು ಮತ್ತಷ್ಟು ಸಂಘಟಿಸಲಾಗುವುದು ಎಂದರು. ಹೊಸ ಕಚೇರಿ ಪ್ರತಿದಿನ ಕಾರ್ಯನಿರ್ವಹಿಸಲಿದ್ದು, ಕಾರ್ಯಕರ್ತರು ತಮ್ಮ ಸಮಸ್ಯೆಗಳನ್ನು ಇಲ್ಲಿ ತಿಳಿಸಬಹುದು. ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಪಕ್ಷ ಸದಾ ಸಿದ್ಧವಿರುತ್ತದೆ ಎಂದು ಹೇಳಿದರು.
ಇದೇ ವೇಳೆ ಹಿರಿಯ ಕಾರ್ಯಕರ್ತ ಪಲ್ಲವಿ ವೆಂಕಟೇಶ್ ಅವರಿಂದ ನೂತನ ಬಿಜೆಪಿ ಕಾರ್ಯಾಲಯ ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಾಧುರಿ ಗಿರೀಶ್, ಮಾಜಿ ಅಧ್ಯಕ್ಷ ಗೂಳಿಹಟ್ಟಿ ಜಗದೀಶ್, ಡಿ.ಎಸ್. ಪ್ರದೀಪ್, ಹೆಚ್.ಬಿ. ರವಿಕುಮಾರ್, ಕೊಂಡಾಪುರ ಮಂಜುನಾಥ್, ಎನ್.ಆರ್. ಜಗದೀಶ್ ರಾಮಯ್ಯ, ಪರಮೇಶ್, ಲಿಂಗರಾಜ್, ಶಶಿಧರ್, ರಾಮಣ್ಣ, ಚಿತ್ತಪ್ಪ, ನಾಗರಾಜ್, ಪನ್ನಗ ರಾಯ್ಕರ್ ಸೇರಿದಂತೆ ಹಲವಾರು ಮುಖಂಡರು, ಮಹಿಳಾ ಮೋರ್ಚಾ ಸದಸ್ಯರು ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
