ಕೇಂದ್ರ ಸರ್ಕಾರದ ಯೋಜನೆ ಹೆಸರಲ್ಲಿ ಮನೆ ಕಳ್ಳತನ; ಖಾಕಿ ಬಲೆಗೆ ಅಂತರ ರಾಜ್ಯ ಕಳ್ಳರು
ಟಿಒಬಿ ನ್ಯೂಸ್ ಚಿತ್ರದುರ್ಗ
ಜಲಜೀವನ್ ಯೋಜನೆ ಸಿಬ್ಬಂದಿ ಎಂದು ನಂಬಿಸಿ ಮನೆಗಳಿಗೆ ಪ್ರವೇಶಿಸಿ ಕಳ್ಳತನ ಮಾಡುತ್ತಿದ್ದ ಅಂತರ್‌ರಾಜ್ಯ ಆರೋಪಿಗಳನ್ನು ಹೊಸದುರ್ಗ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ವಿವಿಧ ಠಾಣೆಗಳ ನಾಲ್ಕು ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು ₹13 ಲಕ್ಷ ಮೌಲ್ಯದ 94 ಗ್ರಾಂ ಚಿನ್ನಾಭರಣಗಳು ಹಾಗೂ ಎರಡು ಮೋಟಾರ್ ಸೈಕಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹೊಸದುರ್ಗ ಪಟ್ಟಣದ ನ್ಯೂ ಮಾರುತಿ ನಗರದಲ್ಲಿ 2025ರ ಆಗಸ್ಟ್ 23ರಂದು ನಡೆದ ಮನೆ ಕಳ್ಳತನ ಪ್ರಕರಣದ ತನಿಖೆ ವೇಳೆ ಈ ಮಹತ್ವದ ಸಾಧನೆ ನಡೆದಿದೆ.
ಪ್ರಕರಣದಲ್ಲಿ ಆರೋಪಿಗಳು ಮನೆಯ ಬಾಗಿಲು ತಟ್ಟಿ, ಮನೆಯಲ್ಲಿ ಗಂಡುಮಕ್ಕಳು ಇದ್ದಾರಾ? ಎಂದು ವಿಚಾರಿಸಿ, ಬಳಿಕ ಜಲಜೀವನ್ ಯೋಜನೆಯಡಿ ಮನೆಗೆ ಸಂಪರ್ಕ ಕಲ್ಪಿಸುವ ಕೆಲಸಕ್ಕಾಗಿ ಬಂದಿದ್ದೇವೆ ಎಂದು ನಂಬಿಸಿದ್ದರು.
ಮನೆಯ ಮಹಿಳೆಯನ್ನು ಮೇಲ್ಚಾವಣಿಗೆ ಕರೆದುಕೊಂಡು ಹೋಗಿ ಅಳತೆ ತೆಗೆದುಕೊಳ್ಳುವ ನೆಪದಲ್ಲಿ ತೊಡಗಿಸಿಕೊಂಡಿದ್ದ ವೇಳೆ, ಇನ್ನಿಬ್ಬರು ಆರೋಪಿಗಳು ಒಳನುಗ್ಗಿ ಗಾಡ್ರೆಜ್ ಬೀರುವಿನಲ್ಲಿದ್ದ ₹1.45 ಲಕ್ಷ ಮೌಲ್ಯದ ಬಂಗಾರದ ಮಾಂಗಲ್ಯ ಸರವನ್ನು ಕಳವು ಮಾಡಿದ್ದರು.
ಈ ಕುರಿತು ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಜಿಲ್ಲಾ ಪೊಲೀಸ್ ಅಧೀಕ್ಷಕ ರಂಜಿತ್ ಕುಮಾರ್ ಬಂಡಾರು, ಐಪಿಎಸ್ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಯಿತು.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ. ಶಿವಕುಮಾರ್ ಹಾಗೂ ಹಿರಿಯೂರು ಡಿವೈಎಸ್ಪಿ ಶಿವಕುಮಾರ್ ಟಿ.ಎಂ ಅವರ ಉಸ್ತುವಾರಿಯಲ್ಲಿ, ಪಿಐ ರಮೇಶ್ ಕೆ.ಟಿ ನೇತೃತ್ವದ ತಂಡವು ಸಿಸಿಟಿವಿ ದೃಶ್ಯಾವಳಿ, ಬಾತ್ಮಿದಾರರ ಮಾಹಿತಿ ಹಾಗೂ ತಾಂತ್ರಿಕ ಸಾಕ್ಷ್ಯಗಳ ಆಧಾರದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿತು.
ಬಂಧಿತರನ್ನು ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಸರವಣಭವ (42) ಮತ್ತು ಶ್ರೀನಿವಾಸ (42) ಎಂದು ಗುರುತಿಸಲಾಗಿದೆ. ಜೊತೆಗೆ ಕಾನೂನಿನ ಸಂಘರ್ಷಕ್ಕೊಳಗಾಗದ ಬಾಲಕನೊಬ್ಬನನ್ನು ವಶಕ್ಕೆ ಪಡೆಯಲಾಗಿದ್ದು, ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಬಂಧಿತರಿಂದ ಹೊಸದುರ್ಗ, ಚಿತ್ರದುರ್ಗ ಬಡಾವಣೆ ಹಾಗೂ ದಾವಣಗೆರೆ ವಿದ್ಯಾನಗರ ಠಾಣೆಗಳ ಪ್ರಕರಣಗಳಿಗೆ ಸಂಬಂಧಿಸಿದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೃತ್ಯಕ್ಕೆ ಬಳಸಿದ್ದ ಎರಡು ಬೈಕ್‌ಗಳು ಶಿರಾ ಠಾಣೆ ವ್ಯಾಪ್ತಿಯಲ್ಲಿ ಕಳವುಗೊಂಡಿದ್ದವು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.
ಈ ಯಶಸ್ವಿ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ತಂಡವನ್ನು ಶ್ಲಾಘಿಸಿದ್ದಾರೆ.
