ಬರ್ರಿ ಬೀದರಿಗೆ…ಶರಣು ಶರಣಾರ್ಥಿ ನಿಮಗ
ಕೆಯುಡಬ್ಲ್ಯೂಜೆ ಬೀದರನಲ್ಲಿ ಆಯೋಜಿಸಿರುವ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ಹಿನ್ನೆಲೆಯಲ್ಲಿ ಪ್ರಜಾವಾಣಿ ಹಿರಿಯ ಪತ್ರಕರ್ತೆ ಎಸ್.ರಶ್ಮಿ ಅವರು ಪತ್ರಕರ್ತ ಸ್ಮರಣ ಸಂಚಿಕೆಗೆ ಕಳುಹಿಸಿರುವ ಲೇಖನದಲ್ಲಿ ಇಡೀ ಬೀದರ್ ನೆಲದ ಸಂಸ್ಕೃತಿ ಮತ್ತು ಮೆರಗನ್ನು ಹಿಡಿಯಾಗಿ ಕಟ್ಟಿಕೊಟ್ಟಿದ್ದಾರೆ. ಆ ಲೇಖನ ನಿಮ್ಮ ಓದಿಗಾಗಿ…
ಬರ್‍ರಿ ಬೀದರಿಗೆ…
ಓಹೊಹೊ.. ಬೀದರ್ ಕಡೆ ಬರ್ತೀರಿ
ಶರಣು ಶರಣಾರ್ಥಿ ನಿಮಗ
ಶರಣು ಅಂದ್ಕೂಡಲೆ ಇಂಥದ್ದೊಂದು ಪ್ರತಿಕ್ರಿಯೆ ನಿಮಗ ಸಿಕ್ಕೇ ಸಿಗ್ತದ. ಕೈ ಎದೆಗೊತ್ತಿ ಈ ಮಾತು ಹೇಳಿದ್ರಂದ್ರ ಮುಂದ ನೀವೂ ನಮ್ಮೋರೆ.
ಬೀದರಿಗೆ ಬರೂದಾದ್ರ ಒಂದೆರಡು ದಿನ ಹೆಚ್ಗಿ ಇಟ್ಕೊಂಡು ಬರ್ರಿ. ಬ್ಯಾಸಗಿಯೊಳಗ ಬರಾತೀರಿ. ತುಸು ಬಿಸಿಲನಿಸಬಹುದು. ಬಿಸಿಲೇರೂದ್ರೊಳಗ, ಚೌಬಾರಾ ನೋಡ್ಕೊಂಡು, ಗವಾನ್ ಮದರಸಾ ನೋಡಿ, ಅಲ್ಲಿಯ ಮಿನಾರ ಮುಂದ ಒಂದಷ್ಟು ಫೋಟೊ ತೊಗೊಂಡು ಕೋಟೆ ಕಡೆ ಬರ್‍ರಿ.
ಈ ಕೋಟೆಯ ಪ್ರವೇಶದ್ವಾರ ಬುಲಂದ್ ದರ್ವಾಜಾ. ಬುಲಂದ್ ಅಂದ್ರ ಪರ್ಷಿಯನ್ ಪದ ಇದು. ದಕ್ಖನಿ ಮತ್ತು ಉರ್ದು ಭಾಷೆಯೊಳಗೂ ಈ ಪದ ಬಳಸ್ತಾರ. ಬುಲಂದ್ ಅದ್ರ ಅಗ್ದಿ ಎತ್ತರವಾಗಿರೂದು. ಉನ್ನತ ಅಂತರ್ಥ ಬರುವಂಥದ್ದು. ಬುಲಂದ್ ಅಂದ್ರ ದೃಢವಾದುದು ಮತ್ತು ಎತ್ತರವಾದುದು ಎಂದೂ ಅರ್ಥೈಸಬಹುದು.
ಅಲ್ಲಿಂದ ಒಳಗ ಬಂದ್ರ ಉದ್ದನೆಯ ಪ್ಯಾಸೇಜ್ ಬರ್ತದ. 80ರ ದಶಕದೊಳಗ ಎನ್‌ಎಸ್‌ಡಿಯವರು ಇಲ್ಲಿ ತುಘಲಕ್ ನಾಟಕ ಮಾಡಿದ್ರು. ಇದನ್ನ ದಾಟಕೊಂಡು, ಇನ್ನೊಂದು ಕೋಟೆಯ ದೊಡ್ಡ ದ್ವಾರ ದಾಟಿದ್ರ ನಿಮ್ಮ ಎಡಕ್ಕ ರಂಗೀನ್ ಮಹಲ್ ಬರ್ತದ. ಪ್ರಾಚ್ಯಶಾಸ್ತ್ರದ ಕಚೇರಿಯವರಿಗೆ ಕೇಳಿದ್ರ ಅದನ್ನ ತೆರದು ತೋರಸ್ತಾರ. ಪರ್ಷಿಯನ್ ಬ್ಲು ಅಂತ ಯಾಕ ಹೇಳ್ತೀವಿ ಅನ್ನೂದು ಅಲ್ಲಿಯ ತಾರಸಿ ಮೇಲಿನ ಚಿತ್ತಾರ ಕಂಡಾಗ ಗೊತ್ತಾಗ್ತದ.
ರಂಗೀನ್ ಮಹಲ್ ಅಂದ್ರ ಕರಿ ಕಲ್ಲಿನ ಗೋಡೆಯೊಳಗ ಹೂಬಳ್ಳೀಯ ಚಿತ್ತಾರ ಮೂಡಿಸಿ, ಅದರೊಳಗ ಕಪ್ಪೆಚಿಪ್ಪು ಅಥವಾ ಸಿಂಪಿಯ ಚಿಪ್ಪನ್ನ ಇನ್‌ಲೇ ಮಾಡ್ಯಾರ. ಬೆಳಕಿನ ಸಂಯೋಜನೆಯೊಳಗ ಬಳ್ಳಿ ಹಸಿರಾಗಿಯೂ, ಹೂ ಕೆಂಪಾಗಿಯೂ, ಗುಲಾಬಿಯಾಗಿಯೂ ಕಾಣ್ತದ. ಇಂಥ ಚಂದನೆಯ ಚಿತ್ತಾರ ಮತ್ತು ಮಹಲ್ ಮತ್ತೆಲ್ಲಿಯೂ ಸಿಗೂದಿಲ್ಲ.
ತಖ್ತ್ ಮಹಲ್, ಹವಾ ಮಹಲ್ ಸೋಲಾ ಗುಂಬಜ್ ಮಸೀದಿ, ದೊಡ್ಡ ದೊಡ್ಡ ತೋಪುಗಳು ಮತ್ತು ಮ್ಯುಸಿಯಮ್ ನೋಡಾಕ ಒಂದರ್ಧ ದಿನ ಬೇಕಾಗ್ತದ.
ಕೋಟೆ ಕಡೆ ಹೋದರೆ ಚಾಂದನಿ ಚಬೂತರ್ (ಮೂನ್ ವ್ಯೂವ್ ಪಾಯಿಂಟ್) ಇಡೀ ದೇಶದಲ್ಲಿ ಬೀದರಿನಲ್ಲಿ ಮಾತ್ರ ಹೀಗೆ ಚಂದಿರನನ್ನು ನೋಡಲೆಂದೇ ಒಂದು ಗುಂಬಜ್ ಇದೆ. ನೋಡಲು ಮರೀ ಬ್ಯಾಡ್ರಿ.
ಗೋರಿಗಳ ಊರು ಅಷ್ಟೂರು, ಇಲ್ಲಿ ಬಹಮನಿ ರಾಜರ ಗೋರಿಗಳಿವೆ. ಹಿಂದೂ ಮುಸ್ಲಿಮರು ಒಟ್ಟಿಗೆ ಪೂಜಿಸುವ ಅಲ್ಲಮಪ್ರಭುಗಳೆಂದು ಭಾವಿಸುವ ಸೌಹಾರ್ದ ಜಾತ್ರೆಯೂ ನಡೆಯುವ ದರ್ಗಾ ಇದೆ. ಇದರ ಬಳಿ ಇರುವ ಚೌಕಂಡಿ ದರ್ಗಾ ಸಹ ಚಂದದ ಅನುಭವ ನೀಡುತ್ತದೆ. ಸೂರ್ಯಾಸ್ತದ ಸಮಯದಲ್ಲಿ ಭೇಟಿ ನೀಡಲು ಚಂದದ ಜಾಗ.
ಜಲಸಂಗಿ ಅಂತ ಇದೆ. ಹುಮನಾಬಾದ್ ರಸ್ತೆಯಲ್ಲಿ ಇಲ್ಲಿ ಮಹಿಳೆಯೊಬ್ಬಳು ಓದುವ ಶಿಲ್ಪಕಲಾಕೃತಿಯ ದೇಗುಲವಿದೆ.
ಬಸವಕಲ್ಯಾಣಕ್ಕೂ ಹೋಗಿಬರಬಹುದು. ಅನುಭವ ಮಂಟಪವನ್ನು ನೋಡಿಕೊಂಡು ಬರಬಹುದು.
ಕಲಬುರ್ಗಿ ಕಡೆಯಿಂದ ಬೀದರ್ ಪ್ರವೇಶಿಸುವುದಾದರ ನೀವು ಪಾಪನಾಶಿನಿ ದೇವಸ್ಥಾನ ದಾಟಿಕೊಂಡೇ ಬರ್ತೀರಿ. ಆ ದೇವಸ್ಥಾನದೊಳಗಿರುವ ಶಿವಲಿಂಗವನ್ನು ನೀವು ಅಪ್ಪಿ, ಹಣೆ ಹಚ್ಚಿ ನಮಸ್ಕರಿಸಬಹುದು. ದೇವರಿಲ್ಲಿ ದೂರವಿಲ್ಲ. ಗರ್ಭಗುಡಿಯಿಂದ ಮಾರು ದೂರು ನಿಲ್ಲುವಂತಿಲ್ಲ. ಇಷ್ಟು ಚಂದದ ಪರಿಸರ ಮತ್ತೆಲ್ಲಿಯೂ ಸಿಗುವುದಿಲ್ಲ.
ಈ ದೇವಸ್ಥಾನದ ನಂತರ ನಾನಿಕ್ ಝರಾ ಬರ್ತದ. ಅಲ್ಲಿಯ ಲಂಗರ್‌ನಾಗ ಒಮ್ಮೆ ಊಟ ಮಾಡಿದ್ರ ಕೊಟ್ಟಿದ್ದೆಲ್ಲವೂ ದೇವರ ಪ್ರಸಾದ ಅನ್ನುವ ಭಾವ ಬಂದೇ ಬಿಡ್ತದ. ಅಲ್ಲಿ ನೇರವಾಗಿ ತಟ್ಟೆಗೆ ರೊಟ್ಟಿ ನೀಡುವುದಿಲ್ಲ. ಎರಡು ಅಂಗೈ ಚಾಚಿ ಪಡೆಯಬೇಕು. ಪಡೆದಿದ್ದೆಲ್ಲವೂ ಪ್ರಸಾದ ಮತ್ತು ಋಣಿ ಎಂಬ ಭಾವ ಹುಟ್ಟುತ್ತದೆ. ಸೇವಾರ್ಥಿಗಳಾಗಿ ದುಡಿಯುವ ಹಿರಿಯರನ್ನು ನೋಡಿದಾಗ ಸೇವಾಭಾವ ತಾನೇ ತಾನಾಗಿ ಹುಟ್ಟುತ್ತದೆ. ಗುರುದ್ವಾರಾದಲ್ಲಿ ನೀಡುವ ಪ್ರಸಾದ ತಿಂದೇ ಅನುಭವಿಸಬೇಕು. ನಾಲಗೆಯ ಮೇಲಿಟ್ಟರೆ ಕರಗಿ, ಕಂಠಕ್ಕಿಳಿಯುವ ಹಿತೋಷ್ಣ ಸ್ವರ್ಗ ಸುಖವನ್ನು ದಯಪಾಲಿಸುತ್ತದೆ. ಸ್ವರ್ಗ ಸನ್ನಿಧಿ ಈ ಪ್ರಸಾದದ ರುಚಿಯಲ್ಲಿ ಸಿಗುತ್ತದೆ.
ಸಾಹಸಿ ಮನೋಭಾವ ಇದ್ರೆ ನರಸಿಂಹ ಝರಾ, ಇರದಿದ್ದರೂ ಬಂದು ಹೋಗ್ರಿ ಜರಾ ತುಸು ಅನ್ನಾಕ ಜರಾ ಅಂತಾರ. ನರಸಿಂಹ ಝರಣಿಯಲ್ಲಿ ಮೂರು ಫರ್ಲಾಂಗ್ ಉದ್ದ ಗುಹಾಂತರ ದೇವಾಲಯದೊಳಗ ನಡಕೊಂಡು ಹೋಗಬೇಕು. ಈಗ ನೀರದಾವೋ ಇಲ್ಲೋ ಗೊತ್ತಿಲ್ಲ. ಆದ್ರ ಸಾಮಾನ್ಯಗೆ ಎದೆಯುದ್ದ ನೀರು ಇದ್ದೇ ಇರ್ತಾವ. ಆ ನೀರಾಗ ಗರ್ಭಗುಡಿತನ ಹೋಗಬೇಕು. ಇಡೀ ಗುಹೆಯೊಳಗ ಮೊದಲು ಬಾವಲಿ ಇರ್ತಿದ್ವು. ಈಗ ಏಸಿ ಮತ್ತು ಆಮ್ಲಜನಕ ಪೂರೈಸುವ ಪೈಪುಗಳಿವೆ. ಅಲ್ಲಲ್ಲಿ ಜಿರಲೆಗಳು ಕಾಣಬಹುದು. ಆಗ ಕಣ್ಮುಚ್ಚಿ ಗೋವಿಂದಾ ಗೋವಿಂದಾ ಎನ್ನುತ್ತ ಮುಂದೆ ಹೋದರಾಯಿತು. ವಾಪಸ್ ಬರುವಾಗ ಎಲ್ಲ ಭಾರವನ್ನೂ ನರಸಿಂಹ ಹೊತ್ತು, ನಮ್ಮನ್ನು ನಿರಾಳವಾಗಿ ದಾಟಿಸುತ್ತಾನೆ. ಆ ದೈವ ದರ್ಶನವೇ ಚಂದ.
ಇನ್ನ ನನ್ನಂಥ ತಿಂಡಿಪೋತಿಗೆ ಬೀದರ್ ಯಾಕ ಸೆಳೀತದ ಗೊತ್ತೇನು? ಪಟ್ಟಿ ಉದ್ದದ. ಆದ್ರ ಅಲ್ಲಿ ಉಂಡಿದ್ದು, ಅಲ್ಲೇ ಅಡ್ಡಾಡುದ್ರೊಳಗ ಕರಗಿಯೂ ಬಿಡ್ತದ.
ಡೈಮಂಡ್ ಹೋಟೆಲ್ (ಗೂಡಂಗಡಿ ಥರ ಇದೆ) ರೈಲು ನಿಲ್ದಾಣದ ಬಳಿ. ಇಲ್ಲಿಯ ಜಾಮೂನು–ಬಾಸುಂದಿ ಕಾಂಬಿನೇಷನ್; ಆಲೂಭಾತ್, ಮಂಡಕ್ಕಿ ಸೂಸಲಾ
ಶಾಲಿಮಾರ್ ಬೀಡಾ ಅಂಗಡಿ, ಗ್ರಂಥಾಲಯದ ಪಕ್ಕ ಇದೆ. ಅಲ್ಲಿಯ ಡ್ರೈಫ್ರೂಟ್ ಪಾನ್, ಮೀನಾಕ್ಷಿ ಪಾನ್, ಬಗೆಬಗೆಯ ಪಾನುಗಳಿವೆ. ಆರಿಫ್ ಭಾಯ್ ಅಂತ ಇರ್ತಾರೆ. ಅವರ ನಂಬರ್ ಕಳುಹಿಸುವೆ. ವೈವಿಧ್ಯಮಯ ಪಾನುಗಳು ಸಿಗುತ್ತವೆ.
ಶರ್ಮಾ ಸ್ವೀಟ್ಸ್ ಅಂಗಡಿಯ ಕಲಾಕಂದ್ (ಬಗೆಬಗೆಯ ಕಲಾಕಂದ್‌ಗಳಿವೆ), ಪೇಠಾಪಾನ್, ಅಂಟಿನುಂಡೆ, ಗಾಠಿ ಮತ್ತು ಭಾಕರ್‌ವಾಡಿ, ಊರಿಗೆ ಕೊಂಡೊ್ಯ್ಯುವುದಾಗಿ ತಿಳಿಸಿದರೆ ನೀಟಾಗಿ ಪ್ಯಾಕ್ ಮಾಡಿಕೊಡ್ತಾರೆ. ಪೇಠಾಪಾನನ್ನು ಇಡಿಯಾಗಿ, ಪಾನಿಪುರಿ ತಿಂದಂತೆ ತಿನ್ನಬೇಕು. ಆಗಲೇ ಬೂದುಗುಂಬಳದ ತಿರುಳು ಮತ್ತು ಕಲಾಖಂದ್‌ನ ಸವಿ ಗಂಟಲಿನಿಂದಿಳಿಯುವುದನ್ನು ಸವಿಯುವುದೇ ಚಂದ.
ಉಸ್ಮಾನ್ ಗಂಜ್ (ಮಹ್ಮದ್ ಗವಾನ್ ಮದರಸಾದ ಹಿಂಬದಿಯಲ್ಲಿ ಬರುತ್ತದೆ. ಹಳೆ ಕಾಲದ ಅಕ್ಕಸಾಲಿಗರು ಮತ್ತು ದಿನಸಿ ಅಂಗಡಿ ಇರುತ್ತಿದ್ದ ಜಾಗ ಇದು. ಇಲ್ಲಿ ಈಗಲೂ ಕುದುರೆಗಾಡಿ, ಒಂಟೆ ಗಾಡಿ ಅಥವಾ ಒಂಟೆಗಳ ಮೇಲೆ ವ್ಯಾಪಾರಿಗಳು ಬರುತ್ತಿರುತ್ತಾರೆ. ಮಂಗಳವಾರ ಸಂತೆಗೆ. ಅಲ್ಲಿ ಒಂಟೆಗಳಿಗೆ ನೀರುಣಿಸಲೆಂದೇ ಒಂದು ತೊಟ್ಟಿ ಇದೆ. ಇಲ್ಲಿ ಡೈಮಂಡ್ ಲಸ್ಸಿ ಸವಿಯಿರಿ. ಎಮ್ಮೆಹಾಲು, ಮೊಸರಿನ ಲಸ್ಸಿ ಇಲ್ಲಿ ಸವಿಯಲೇಬೇಕು.
ಪಂಜಾಬಿ ಆಹಾರ ಸಂಸ್ಕೃತಿಯನ್ನು ಅರಿಯಲು ಇಲ್ಲಿಯ ಗುರುದ್ವಾರಾದಲ್ಲಿರುವ ಲಂಗರ್‌ನಲ್ಲಿ ಊಟ ಸೇವಿಸಬಹುದು. ಇಲ್ಲವೇ ಫರಮಾಯಿಷಿ ಊಟ ಮಾಡುವುದಾದರೆ ಅಲ್ಲಿಯ ರಿಂಕು ಮತ್ತು ಹನಿ ಧಾಬಾದಲ್ಲಿ ಊಟ ಮಾಡಬಹುದು. ಇಲ್ಲಿ ಕಟ್‌ಮಿರ್ಚಿ ಖಟ್ಟಿ ಚಟ್ನಿ ಜೊತೆಗೆ (ಖಟ್ಟಿ ಚಟ್ನಿ ಕೇಳಿದರೆ ಮಾತ್ರ ನೀಡುತ್ತಾರೆ) ಸವಿಯಿರಿ.
ಶರ್ಮಾ ಸ್ವೀಟ್ಸ್ ಬಳಿ ಇರುವ ಭವಾನಿ ಪಾನಿಪುರಿ ತಳ್ಳುಗಾಡಿಯಲ್ಲಿ ಭರಾ ಹುವಾ ಕಚೋರಿ ಸವಿದು ಬನ್ನಿ.
ಶಾಪಿಂಗು–ಕೀಪಿಂಗು: ಬಿದರಿ ಕುಸುರಿ ಕೆಲಸದ ಕಲಾಕೃತಿಗಳನ್ನು ಕೊಳ್ಳಬಹುದು. ಚಿದ್ರಿ ಕಲಾಕೃತಿಗಳನ್ನೂ ಕೊಳ್ಳಬಹುದು. ಇಲ್ಲಿ ವೈವಿಧ್ಯಮಯ ಬಳೆಗಳನ್ನು ಕೊಳ್ಳಬಹುದು.
