ದ್ವಿತೀಯ ಪಿಯುಸಿ ದಾಖಲೆ ಫಲಿತಾಂಶ; ಶೇ. 86 ವಿದ್ಯಾರ್ಥಿಗಳು ಪಾಸ್
ಬೆಂಗಳೂರು: 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಇಂದು ಅಧಿಕೃತವಾಗಿ ಪ್ರಕಟವಾಗಿದ್ದು, ರಾಜ್ಯದಾದ್ಯಂತ ಶೇ. 86 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿ ಒಟ್ಟು 7,10,363 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 6.10 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.
ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್ karresults.nic.in ನಲ್ಲಿ ಫಲಿತಾಂಶ ಪರಿಶೀಲಿಸಬಹುದು. ಜೊತೆಗೆ, ಮೊಬೈಲ್‌ಗೆ ಎಸ್‌ಎಂಎಸ್ ಮೂಲಕವೂ ಫಲಿತಾಂಶ ರವಾನೆಯಾಗುತ್ತಿದೆ.
ಈ ಬಾರಿ ಸರ್ಕಾರ ಜಾರಿಗೆ ತಂದಿರುವ ಪಾಸಿಂಗ್ ನಿಯಮ ಸಡಿಲಿಕೆ ವಿದ್ಯಾರ್ಥಿಗಳಿಗೆ ದೊಡ್ಡ ನೆರವಾಗಿದ್ದು, ಪ್ರತಿ ವಿಷಯದಲ್ಲಿ 30 ಅಂಕಗಳ ಥಿಯರಿ + 20 ಅಂಕಗಳ ಆಂತರಿಕ ಅಂಕಗಳನ್ನು ಸೇರಿಸಿ ಪಾಸ್ ಪರಿಗಣನೆ ಮಾಡಲಾಗಿದೆ. ಹೀಗಾಗಿ ಒಟ್ಟು 600 ಅಂಕಗಳಲ್ಲಿ 198 ಅಂಕಗಳು (33%) ಗಳಿಸಿದರೆ ಉತ್ತೀರ್ಣರಾಗಬಹುದು.
ಶಿಕ್ಷಣ ಇಲಾಖೆಯ ಈ ಕ್ರಮವು ಕೇವಲ ಪಾಸ್‌ಗಾಗಿ ಅಲ್ಲ, ಬದಲಾಗಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಸೇರ್ಪಡೆಯಾಗಲಿ ಎಂಬ ಉದ್ದೇಶದಿಂದ ಜಾರಿಗೆ ತಂದಿರುವ ಮಹತ್ವದ ನಿರ್ಧಾರವಾಗಿದೆ.
ಕಳೆದ ವರ್ಷದೊಂದಿಗೆ ಹೋಲಿಸಿದರೆ ಈ ಬಾರಿ ಫಲಿತಾಂಶದಲ್ಲಿ ಭಾರೀ ಏರಿಕೆ ಕಂಡುಬಂದಿದೆ. 2025ರಲ್ಲಿ ಶೇ. 73.45 ಇದ್ದ ಫಲಿತಾಂಶ ಈ ಬಾರಿ ಶೇ. 86ಕ್ಕೆ ಏರಿಕೆಯಾಗಿದೆ, ಇದರಿಂದ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಣ ವಲಯದಲ್ಲಿ ಸಂತಸ ಮೂಡಿದೆ.
