ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶವವಾಗಿ ಪತ್ತೆ; ಆಳವಾದ ಕಂದಕದಲ್ಲಿ ಮೃತದೇಹ
ಚಿಕ್ಕಮಗಳೂರು: ದತ್ತಪೀಠದ ಮಾಣಿಕ್ಯಧಾರಾ ಜಲಪಾತದ ಬಳಿ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಕೇರಳದ 15 ವರ್ಷದ ಬಾಲಕಿ ಶ್ರೀನಂದಾ ಇಂದು ಶವವಾಗಿ ಪತ್ತೆಯಾಗಿರುವುದು ಹೃದಯವಿದ್ರಾವಕ ಘಟನೆಗೆ ಕಾರಣವಾಗಿದೆ. ನಿರಂತರ ಶೋಧ ಕಾರ್ಯಾಚರಣೆಯ ಬಳಿಕ ಚಂದ್ರದ್ರೋಣ ಪರ್ವತ ಶ್ರೇಣಿಯ ಆಳವಾದ ಕಂದಕದಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ.
ಕೇರಳದ ಪಾಲಕ್ಕಾಡ್ ಜಿಲ್ಲೆಯ ಶ್ರೀನಂದಾ ಏಪ್ರಿಲ್ 7ರಂದು ಕುಟುಂಬ ಸದಸ್ಯರೊಂದಿಗೆ ಪ್ರವಾಸಕ್ಕೆ ಬಂದಿದ್ದ ವೇಳೆ ಸಂಜೆ 5.15ರ ಸುಮಾರಿಗೆ ಕಾಣೆಯಾಗಿದ್ದಳು. ಮಾಣಿಕ್ಯಧಾರಾ ಜಲಪಾತದ ಸೌಂದರ್ಯ ವೀಕ್ಷಿಸುತ್ತಿದ್ದ ಕುಟುಂಬದವರೊಂದಿಗೆ ಕೆಲವೇ ಕ್ಷಣಗಳ ಹಿಂದೆ ಇದ್ದ ಬಾಲಕಿ ಏಕಾಏಕಿ ನಾಪತ್ತೆಯಾಗಿದ್ದಳು.
ಕುಟುಂಬದವರು ಜಲಪಾತದ ಕೆಳಭಾಗಕ್ಕೆ ಇಳಿದಾಗ ಶ್ರೀನಂದಾ ಬೆಟ್ಟದ ಮೇಲ್ಭಾಗದಲ್ಲೇ ಉಳಿದಿದ್ದಳು ಎನ್ನಲಾಗಿದೆ.
ಸುಮಾರು ಹತ್ತು ನಿಮಿಷಗಳ ಬಳಿಕ ಹಿಂದಿರುಗಿ ನೋಡಿದಾಗ ಆಕೆ ಕಾಣಿಸದೆ ಕುಟುಂಬಸ್ಥರು ಆತಂಕಗೊಂಡಿದ್ದರು. ಸುತ್ತಮುತ್ತ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಗದೆ ತಕ್ಷಣ ಪೊಲೀಸರಿಗೆ ದೂರು ನೀಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ಎಸ್‌ಡಿಆರ್‌ಎಫ್ ತಂಡ ಸೇರಿದಂತೆ 70ಕ್ಕೂ ಹೆಚ್ಚು ಸಿಬ್ಬಂದಿ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದರು.
ಶ್ವಾನದಳ, ಡ್ರೋನ್ ಹಾಗೂ ಥರ್ಮಲ್ ಡ್ರೋನ್‌ಗಳ ಸಹಾಯದಿಂದ ನಾಲ್ಕು ದಿನಗಳಿಂದ ನಿರಂತರ ಶೋಧ ನಡೆಯುತ್ತಿತ್ತು.
ಇಂದು ಅರಿಶಿಣಗುಪ್ಪೆ ಪರ್ವತ ಸಾಲಿನ ಕಡೆಯಿಂದ ಶೋಧ ನಡೆಸುತ್ತಿದ್ದ ತಂಡಕ್ಕೆ ಸುಮಾರು ಎರಡು ಸಾವಿರ ಅಡಿ ಆಳದ ಕಂದಕದಲ್ಲಿ ಶ್ರೀನಂದಾ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.
ಪ್ರವಾಸದ ಸಂತಸದ ಕ್ಷಣಗಳು ಕ್ಷಣಾರ್ಧದಲ್ಲಿ ದುರಂತವಾಗಿ ಮಾರ್ಪಟ್ಟಿದ್ದು, ಮಗಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬಾಲಕಿ ಆಕಸ್ಮಿಕವಾಗಿ ಜಾರಿ ಬಿದ್ದಳೇ ಅಥವಾ ಬೇರೆ ಯಾವುದಾದರೂ ಕಾರಣವಿದೆಯೇ ಎಂಬ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
