ರಂಗೇರಿದ ಬೈ ಎಲೆಕ್ಷನ್ ಅಖಾಡ; ಸ್ಟಾರ್ ಪ್ರಚಾರಕರು ಎಂಟ್ರಿ
ಟಿಒಬಿ ನ್ಯೂಸ್ ದಾವಣಗೆರೆ
ರಾಜ್ಯದಲ್ಲಿ ಉಪಚುನಾವಣೆ ಕಾವು ಜೋರಾಗಿದ್ದು, ಎರಡು ಕ್ಷೇತ್ರಗಳಲ್ಲಿ ವಿಜಯಪತಾಕೆ ಹಾರಿಸಲು ಕಾಂಗ್ರೆಸ್ ಸಜ್ಜಾಗಿದ್ದು, ಇದೀಗ ಮೂವರು ಪ್ರಭಾವಿ ನಾಯಕರಿಗೆ ಮಹತ್ವದ ಜವಾಬ್ದಾರಿಗಳನ್ನು ನೀಡಿದೆ.
ದಾವಣಗೆರೆ ದಕ್ಷಿಣ ಕ್ಷೇತ್ರದ ಜವಾಬ್ದಾರಿಯನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಬಾಗಲಕೋಟೆಗೆ ಸಚಿವ ಸತೀಶ್ ಜಾರಕಿಹೊಳಿಗೆ ಸಂಪೂರ್ಣ ಹೊಣೆಗಾರಿಕೆ ನೀಡಲಾಗಿದೆ. ಸ್ಟಾರ್ ಪ್ರಚಾರಕರಾಗಿ ಅಥಣಿ ಶಾಸಕ ಲಕ್ಷ್ಮಣ ಸವದಿ ಅವರನ್ನು ನಿಯೋಜಿಸಲಾಗಿದೆ.
ಕಾಂಗ್ರೆಸ್‌ಗೆ ಬಾಗಲಕೋಟೆಗಿಂದ ದಾವಣಗೆರೆಯೇ ದೊಡ್ಡ ಸವಾಲಾಗಿದೆ. ಗುಂಪು ರಾಜಕೀಯ, ಅಭ್ಯರ್ಥಿ ಆಯ್ಕೆ ಕುರಿತ ಅಸಮಾಧಾನ ಮತ್ತು ವಿರೋಧ ಪಕ್ಷಗಳ ಆಕ್ರಮಣಕಾರಿ ಪ್ರಚಾರ ಈ ಕದನವನ್ನು ಇನ್ನಷ್ಟು ಕಠಿಣಗೊಳಿಸಿದೆ.
ಲಿಂಗಾಯತ ಸಮುದಾಯದ ಮತಗಳನ್ನು ಸೆಳೆಯಲು ಸವದಿ, ಅಹಿಂದ ಸಮೀಕರಣವನ್ನು ಗಟ್ಟಿಗೊಳಿಸಲು ಜಾರಕಿಹೊಳಿ, ಹೆಬ್ಬಾಳ್ಕರ್ ಕಾರ್ಯತಂತ್ರ ರೂಪಿಸಲಿದ್ದಾರೆ. ಇವೆರಡರ ಸಮನ್ವಯವೇ ಗೆಲುವಿನ ದಿಕ್ಕು ನಿರ್ಧರಿಸುವ ಪ್ರಮುಖ ಅಂಶವಾಗಲಿದೆ ಎನ್ನಲಾಗಿದೆ.
