ಸಮರ್ಥ್ ಪಟ್ಟಾಭಿಷೇಕಕ್ಕೆ ‘ಕೈ’ ಪಟ್ಟು; ಶುರುವಾಯ್ತು ಮೇಜರ್ ಸರ್ಜರಿ
ಟಿಒಬಿ ನ್ಯೂಸ್ ದಾವಣಗೆರೆ
ದಾವಣಗೆರೆ ದಕ್ಷಿಣದಲ್ಲಿ ಸಮರ್ಥ್ ಪಟ್ಟಾಭಿಷೇಕಕ್ಕೆ ಕಾಂಗ್ರೆಸ್ ಹಿರಿಯ ನಾಯಕರು ನಿರ್ಧರಿಸಿರುವುದು ದಿನದಿಂದ ದಿನಕ್ಕೆ ಸ್ಪಷ್ಟವಾಗುತ್ತಿದೆ. ನಾಮಪತ್ರ ವಾಪಸ್ ಪಡೆಯುವ ವಿಚಾರದಲ್ಲಿ ನಡೆದ ಹೈಡ್ರಾಮಕ್ಕೆ ಇದೀಗ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯ ತಲೆದಂಡವಾಗಿದೆ.
ಪಕ್ಷದ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಓರ್ವನನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಬರೋಬ್ಬರಿ 6 ವರ್ಷ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಿ ಆದೇಶ ಹೊರಡಿಸಿದ್ದಾರೆ.
ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಮೇಜರ್ ಸರ್ಜರಿ
ಹೌದು, ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಎಚ್. ಸುಭಾನ್ ಸಾಬ್ ಅವರನ್ನು ಪಕ್ಷವು 6 ವರ್ಷಗಳ ಕಾಲ ಉಚ್ಚಾಟನೆ ಮಾಡಿದೆ. ಈ ಬಗ್ಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ (ಕೆಪಿಸಿಸಿ) ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಅವರು ಆದೇಶ ಹೊರಡಿಸಿದ್ದಾರೆ.
ಸುಭಾನ್ ಸಾಬ್ ಕಾಂಗ್ರೆಸ್ ಪಕ್ಷದಲ್ಲಿ ದೀರ್ಘಕಾಲದಿಂದಲೂ ಕಾರ್ಯಕರ್ತರಾಗಿ, ನಂತರ ಜಿಲ್ಲಾ ಕಾರ್ಮಿಕ ವಿಭಾಗದ ಅಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿದ್ದರು. ಈ ಬಾರಿ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಪಕ್ಷವು ಶಾಮನೂರು ಶಿವಶಂಕರಪ್ಪನವರ ಮೊಮ್ಮಗ ಸಮರ್ಥ್ ಶಾಮನೂರು ಅವರಿಗೆ ಟಿಕೆಟ್ ನೀಡಿದ್ದಕ್ಕೆ ಅಲ್ಪಸಂಖ್ಯಾತ ಸಮುದಾಯದಲ್ಲಿ ಅಸಮಾಧಾನ ಹುಟ್ಟಿತ್ತು. ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕು ಎಂಬ ಬೇಡಿಕೆಯನ್ನು ಪಕ್ಷ ಗಮನಿಸದೇ ಹೋದುದರಿಂದ ಕೆಲವು ನಾಯಕರು ಬಂಡಾಯ ಎದ್ದಿದ್ದರು.
ಇದರ ಭಾಗವಾಗಿ ಸುಭಾನ್ ಸಾಬ್ ಅವರು ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಪಕ್ಷದ ಶಿಸ್ತನ್ನು ಉಲ್ಲಂಘಿಸಿ, ಪಕ್ಷದ ವಿರುದ್ಧವೇ ಚುನಾವಣೆಗೆ ಸ್ಪರ್ಧಿಸಿದ್ದಕ್ಕೆ ಪಕ್ಷವು ಕಠಿಣ ಕ್ರಮ ಕೈಗೊಂಡಿದೆ. ಜೊತೆಗೆ ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರ ವಿರುದ್ಧ ಅವಹೇಳನಕಾರಿ ಹೇಳಿಕೆ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದ್ದು, ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಅವರು ಹೊರಡಿಸಿದ ಆದೇಶದಲ್ಲಿ ಸುಭಾನ್ ಸಾಬ್ ಅವರನ್ನು ಮುಂದಿನ 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.
ಈ ಉಚ್ಚಾಟನೆ ಆದೇಶವು ಕಾಂಗ್ರೆಸ್ ಪಕ್ಷದ ಶಿಸ್ತು ಕ್ರಮವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಪಕ್ಷದ ನಿರ್ಧಾರಗಳ ವಿರುದ್ಧ ಹೋಗುವವರಿಗೆ ಕಠಿಣ ಶಿಕ್ಷೆಯನ್ನು ನೀಡುವುದರ ಮೂಲಕ ಪಕ್ಷ ತನ್ನ ಒಳಗಿನ ಶಿಸ್ತನ್ನು ಕಾಯ್ದುಕೊಳ್ಳಲು ಬಯಸುತ್ತಿದೆ. ಆದರೆ ಈ ಕ್ರಮವು ಈಗಾಗಲೇ ಬಂಡಾಯದ ಬಿಸಿ ಎದುರಿಸುತ್ತಿರುವ ಕಾಂಗ್ರೆಸ್‌ಗೆ ಇನ್ನಷ್ಟು ಸವಾಲುಗಳನ್ನು ತಂದೊಡ್ಡುವ ಸಾಧ್ಯತೆಗಳು ದಟ್ಟವಾಗಿವೆ.
