ಮೋಟಾರು ವಾಹನ ನೋಂದಣಿ ತೆರಿಗೆ ಇಳಿಸುವ ಬಿಲ್ ಅಂಗೀಕಾರ
ವಿಧಾನ ಪರಿಷತ್ತು: ತೆರಿಗೆ ಹೊರೆ ಹಿನ್ನೆಲೆಯಲ್ಲಿ ನೋಂದಣಿಗಾಗಿ ವಾಹನ ಮಾಲೀಕರು ಹೊರ ರಾಜ್ಯಗಳತ್ತ ಮುಖ ಮಾಡುವುದನ್ನು ತಡೆಯಲು ಸರ್ಕಾರ ಗುರುವಾರ ಮಂಡಿಸಿದ ‘ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ತಿದ್ದುಪಡಿ ವಿಧೇಯಕ 2026’ ಯಾವುದೇ ಚರ್ಚೆಯಿಲ್ಲದೇಮೇಲ್ಮನೆಯಲ್ಲಿ ಅಂಗೀಕಾರಗೊಂಡಿತು. ಗುರುವಾರ ಬಜೆಟ್ ಮೇಲಿನ ಚರ್ಚೆಗೆ ಸಿಎಂ ಉತ್ತರ ಖಂಡಿಸಿ ವಿರೋಧ ಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದರು. ಈ ನಡುವೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು, ಈ ತಿದ್ದುಪಡಿ ವಿಧೇಯಕ ಮಂಡಿಸಿದರು. ವಿಪಕ್ಷಗಳ ಸದಸ್ಯರು ಸದನಕ್ಕೆ ವಾಪಸ್ ಬರುವ ವೇಳೆಗೆ ಯಾವುದೇ ಚರ್ಚೆ ಇಲ್ಲದೆ ಧ್ವನಿಮತದ ಮುಖಾಂತರ ವಿಧೇಯಕವನ್ನು ಅಂಗೀಕರಿಸಲಾಯಿತು.
