ಕಾಳಸಂತೆಯಲ್ಲಿ ಗ್ಯಾಸ್ ಸಿಲಿಂಡರ್ ; ಹೆಚ್ಚುತ್ತಿವೆ ಪ್ರಕರಣ
ಟಿಒಬಿ ನ್ಯೂಸ್ ಚಿತ್ರದುರ್ಗ
ಜಿಲ್ಲೆಯಲ್ಲಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಗಳಿಗೆ ಅಕ್ರಮವಾಗಿ ಬಳಸುವುದು ಹಾಗೂ ಕಾಳಸಂತೆಯಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, ಮಹಿಳಾ ಮತ್ತು ಮಕ್ಕಳ ರಕ್ಷಣಾ ಸೇನೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೇನೆ ಅಧ್ಯಕ್ಷೆ ಪಾರ್ವತಿ ಮಾತನಾಡಿ,
ಇರಾನ್–ಇಸ್ರೇಲ್ ಹಾಗೂ ಅಮೆರಿಕಾ ನಡುವಿನ ಯುದ್ಧದ ಪರಿಣಾಮವಾಗಿ ದೇಶಾದ್ಯಂತ ಗ್ಯಾಸ್ ಸಿಲಿಂಡರ್ ಕೊರತೆ ಉಂಟಾಗಿದ್ದು, ಕರ್ನಾಟಕದಲ್ಲೂ ಇದರ ಪರಿಣಾಮ ತೀವ್ರವಾಗಿದೆ. ಇಂತಹ ಸಂಕಷ್ಟದ ವೇಳೆಯಲ್ಲಿ ಗೃಹಬಳಕೆಯ ಸಿಲಿಂಡರ್‌ಗಳನ್ನು ಕಾಳಸಂತೆಯಲ್ಲಿ ರೂ.2000ಕ್ಕೂ ಹೆಚ್ಚು ದರಕ್ಕೆ, ವಾಣಿಜ್ಯ ಸಿಲಿಂಡರ್‌ಗಳನ್ನು ರೂ.5000ರಷ್ಟು ದರಕ್ಕೆ ಮಾರಾಟ ಮಾಡುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ ಎಂದರು.
ಇತ್ತೀಚೆಗೆ ಚಿತ್ರದುರ್ಗ ನಗರದ ಜೆ.ಸಿ.ಆರ್ ಬಡಾವಣೆಯ ಬೀದಿ ಬದಿ ಅಂಗಡಿಗಳಲ್ಲಿ ಗೃಹಬಳಕೆಯ ಸಿಲಿಂಡರ್‌ಗಳನ್ನು ಅಕ್ರಮವಾಗಿ ಬಳಸುತ್ತಿದ್ದ ಪ್ರಕರಣವನ್ನು ಮಹಿಳಾ ಮತ್ತು ಮಕ್ಕಳ ರಕ್ಷಣಾ ಸೇನೆ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಅಧಿಕಾರಿಗಳೊಂದಿಗೆ ತಡೆದು, ಸಿಲಿಂಡರ್‌ಗಳನ್ನು ವಶಪಡಿಸಿಕೊಂಡು ಸೀಜ್ ಮಾಡಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಗ್ಯಾಸ್ ವಿತರಣೆ ವಿಳಂಬವಾಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳ ನಂತರ, ನಗರ ಪ್ರದೇಶಗಳಲ್ಲಿ 25 ದಿನಗಳ ನಂತರ ಮಾತ್ರ ಸಿಲಿಂಡರ್‌ಗಳನ್ನು ಒದಗಿಸಲಾಗುತ್ತಿದೆ ಎಂದು ಗ್ರಾಹಕರು ದೂರಿದ್ದಾರೆ ಎಂದರು.
ಆಸ್ಪತ್ರೆಗಳು, ಶಾಲಾ-ಕಾಲೇಜುಗಳ ಹಾಸ್ಟೆಲ್‌ಗಳು, ಅಂಗನವಾಡಿಗಳು ಮತ್ತು ಇಂದಿರಾ ಕ್ಯಾಂಟೀನ್‌ಗಳಿಗೆ ಗ್ಯಾಸ್ ಸರಬರಾಜು ನಿರಂತರವಾಗಿರಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ, ಗ್ಯಾಸ್ ಬುಕ್ಕಿಂಗ್ ಹೆಸರಿನಲ್ಲಿ ಮೊಬೈಲ್ ಕರೆಗಳ ಮೂಲಕ ವಂಚನೆ ಪ್ರಕರಣಗಳು ಹೆಚ್ಚುತ್ತಿರುವುದು ಗಮನಾರ್ಹವಾಗಿದೆ. ಕೆವೈಸಿ ಮಾಡಿಸುವ ನೆಪದಲ್ಲಿ ಹಣ ವಸೂಲಿ ಮಾಡುವ ಪ್ರಕರಣಗಳ ವಿರುದ್ಧ ಸೈಬರ್ ಕ್ರೈಮ್ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಗೃಹಬಳಕೆಯ ಸಿಲಿಂಡರ್‌ಗಳನ್ನು ವಾಣಿಜ್ಯ ಬಳಕೆಗೆ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿ, ಅಕ್ರಮ ವಿತರಣೆಯಲ್ಲಿ ತೊಡಗಿರುವ ಏಜೆನ್ಸಿಗಳ ಪರವಾನಿಗೆ ರದ್ದುಪಡಿಸುವಂತೆ ಹಾಗೂ ಅಗತ್ಯ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದರು.
ಸಾರ್ವಜನಿಕರ ಅಗತ್ಯಕ್ಕೆ ತಕ್ಕಂತೆ ಗ್ಯಾಸ್ ಸಿಲಿಂಡರ್‌ಗಳನ್ನು ತಕ್ಷಣ ಒದಗಿಸುವಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಲಾಗಿದೆ ಎಂದರು.
ಉಪಾಧ್ಯಕ್ಷೆ ಎಸ್. ನೇತ್ರಾವತಿ, ಪ್ರಧಾನ ಕಾರ್ಯದರ್ಶಿ ಜಿ.ಬಿ. ಗೌರಮ್ಮ, ಖಜಾಂಚಿ ಎಚ್. ವೈ. ನಾಗಮಣಿ, ಸಂಘಟನಾ ಕಾರ್ಯದರ್ಶಿ ಶಬಾನಬಾನು, ನಿರ್ದೇಶಕರಾದ ಜಿ.ಸಾವಿತ್ರಮ್ಮ, ಶೋಭ, ಕವಿತ, ಪ್ರಭಾ, ತೇಜೇಶ್ವರಿ, ಹೀನಾ ಕೌಸರ್ ಇದ್ದರು.
