ಡಾ.ಜೆ.ಕರಿಯಪ್ಪ ಮಾಳಿಗೆ: ನಡೆ–ನುಡಿ
ಚಿತ್ರದುರ್ಗ: ಸರ್ಕಾರಿ ಕಲಾ ಕಾಲೇಜಿನ (ಸ್ವಾಯತ್ತ) ಪ್ರಾಂಶುಪಾಲರಾದ ಡಾ.ಜೆ.ಕರಿಯಪ್ಪ ಮಾಳಿಗೆ ಅವರಿಗೆ ಪತ್ರಕರ್ತರ ಬಳಗ ಹಾಗೂ ಆಶಯ ತಂಡದಿಂದ ಮಾ.29 ರಂದು ‘ಡಾ.ಜೆ.ಕರಿಯಪ್ಪ ಮಾಳಿಗೆ: ನಡೆ–ನುಡಿ’ ಗೌರವಾರ್ಪಣೆ ಹಾಗೂ ವಿಶಿಷ್ಟ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನಗರದ ಕ್ರೀಡಾಭವನದಲ್ಲಿ ಅಂದು ಬೆಳಿಗ್ಗೆ 10.30ಕ್ಕೆ ಸಂಸ್ಕೃತಿ ಚಿಂತಕ ಡಾ.ಎಸ್.ನಟರಾಜ್ ಬೂದಾಳು ಕಾರ್ಯಕ್ರಮ ಉದ್ಘಾಟಿಸಿ ತತ್ವಪದ ಮತ್ತು ಅವಧೂತ ಪರಂಪರೆ ಕುರಿತು ಮಾತನಾಡಲಿದ್ದಾರೆ. ಹಿರಿಯ ಪತ್ರಕರ್ತ ಎಂ.ಎನ್.ಯೋಗೇಶ್ ಅಧ್ಯಕ್ಷತೆವಹಿಸಲಿದ್ದು, ಸಂಪಾದನೆ ಕೃತಿಗಳು ಕುರಿತು ವಿಮರ್ಶಕರಾದ ಡಾ.ಲೋಕೇಶ್ ಅಗಸನಕಟ್ಟೆ, ಸಂಶೋಧನೆ ಕುರಿತು ಕವಯಿತ್ರಿ ತಾರಿಣಿ ಶುಭದಾಯಿನಿ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಹಿರಿಯ ಪತ್ರಕರ್ತ ಶ.ಮಂಜುನಾಥ್, ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ವಿ.ವೀರೇಶ್, ಉದ್ಯಮಿ ಟಿ.ವಿ.ಅರುಣ್ ಉಪಸ್ಥಿತಿವಹಿಸಲಿದ್ದಾರೆ. ದಾವಣಗೆರೆ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಎಚ್.ಜಿ.ವಿಜಯಕುಮಾರ್ ನಿರ್ವಹಣೆ ಮಾಡಲಿದ್ದಾರೆ.
ಮಧ್ಯಾಹ್ನ 12 ಗಂಟೆಗೆ ಒಡನಾಟದ ಮಾತು ಗೋಷ್ಠಿ ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪವಹಿಸಲಿದ್ದು, ಕವಿ ಚಂದ್ರಶೇಖರ್ ತಾಳ್ಯ, ಕಥೆಗಾರ ಎಸ್.ಗಂಗಾಧರಯ್ಯ ಒಡನಾಟದ ಮಾತು ಆಡಲಿದ್ದಾರೆ. ಜಿಲ್ಲಾ ಪತ್ರಕರ್ತರ ಸಂಘದ ನಿರ್ದೇಶಕ ವೀರೇಂದ್ರ ಕುಮಾರ್ ಕೋಗುಂಡೆ ಮಠ, ಹಿರಿಯ ಪತ್ರಕರ್ತ ಎಂ.ಜೆ.ತಿಪ್ಪೇಸ್ವಾಮಿ, ಪತ್ರಕರ್ತ ಟಿ.ಎನ್.ಪ್ರಹ್ಲಾದ್ ಉಪಸ್ಥಿತಿವಹಿಸಲಿದ್ದು, ಪ್ರಾಧ್ಯಾಪಕ ಡಾ.ಕೆ.ಚಿತ್ತಯ್ಯ ನಿರ್ವಹಣೆ ಮಾಡಲಿದ್ದಾರೆ ಎಂದು ಬಳಗದ ಜೋಗಿಮಟ್ಟಿ ಮಹೇಶ್ ಬಾಬು ತಿಳಿಸಿದ್ದಾರೆ.
====
ಡಾ.ಜೆ.ಕರಿಯಪ್ಪ ಮಾಳಿಗೆ ಕುರಿತು
ಪ್ರಸ್ತುತ ಕನ್ನಡ ಸಾರಸ್ವತ ಲೋಕದಲ್ಲಿ ಕೇಳಲ್ಪಡುತ್ತಿರುವ ಬಲು ಪರಿಚಯಸ್ಥ ಹೆಸರು. ಕರ್ನಾಟಕದ ಅವಧೂತ ಪರಂಪರೆಯ ಬಗೆಗಿನ ಓದು ಮತ್ತು ಬರಹದಲ್ಲಿ ಅವರೊಂದು ಮುಂಚೂಣಿ ಲೇಖನಿ. ಪ್ರಸ್ತುತ ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜಿನ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ಮಾ.31 ರಂದು ನಿವೃತ್ತರಾಗುತ್ತಿರುವ ಶ್ರೀಯುತರು, ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಸಿ ಎನ್ ಮಾಳಿಗೆ ಗ್ರಾಮದ ಜೋಗಸಿದ್ಧಪ್ಪ ಮತ್ತು ತಿಮ್ಮಕ್ಕ ದಂಪತಿಗಳ ದ್ವಿತೀಯ ಪುತ್ರರಾಗಿ ಜನಿಸಿದರು.
ಇವರು, ಸ್ವಗ್ರಾಮ ಸಿಎನ್ ಮಾಳಿಗೆಯಲ್ಲಿ ಪ್ರಾಥಮಿಕ ಶಿಕಣವನ್ನು ಮುಗಿಸಿ, ಚಳ್ಳಕೆರೆ ತಾಲ್ಲೂಕಿನ ಸಾಣೆಕೆರೆಯಲ್ಲಿ ಪ್ರೌಢಶಿಕ್ಷಣ ಪಡೆದರು. ಚಿತ್ರದುರ್ಗದ ಎಸ್.ಜೆ.ಎಂ. ಪದವಿ ಕಾಲೇಜಿನಲ್ಲಿ ಬಿ.ಎ. ಪದವಿಯನ್ನು ಪಡೆದು, 1991 ರಲ್ಲಿ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ವಿಭಾಗದಿಂದ ಎಂ.ಎ. ಪದವಿಯನ್ನು ಪಡೆದುಕೊಂಡು, 2004 ರಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಪ್ರೊ. ಎಫ್.ಟಿ. ಹಳ್ಳಿಕೇರಿ ಅವರ ಮಾರ್ಗದರ್ಶನದಲ್ಲಿ ‘ಅವಧೂತ ಪರಂಪರೆ’ ಎಂಬ ವಿಷಯ ಕುರಿತು ಸಂಶೋಧನೆ ಕೈಗೊಂಡು ಪಿಎಚ್.ಡಿ ಪದವಿಯನ್ನು ಪಡೆದುಕೊಂಡರು.
ಕರ್ನಾಟಕ ಸರ್ಕಾರ ಕಾಲೇಜು ಶಿಕ್ಷಣ ಇಲಾಖೆಯ ಪದವಿ ಕಾಲೇಜಿನ ಸಹ ಪ್ರಧ್ಯಾಪಕರಾಗಿ 1996 ರಲ್ಲಿ ಸೇವಾ ವೃತ್ತಿಯನ್ನಾರಂಭಿಸಿದ ಶ್ರೀಯುತರು, 30 ವರ್ಷಗಳ ಅಧ್ಯಯನ ಮತ್ತು ಅಧ್ಯಾಪನ ಕಾಯಕ ಸೇವೆ ಸಲ್ಲಿಸಿದ್ದಾರೆ. ಸಂಶೋಧನೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸಿರುವ ಇವರು, ಜಾನಪದ, ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ನಾಡಿನ ಜನಪದ ಕಲಾವಿದರ ಬಗ್ಗೆ ಸಂಶೋಧನೆ ಕೈಗೊಂಡು ಕ್ಷೇತ್ರಕಾರ್ಯದ ಮೂಲಕ ಸಂಗ್ರಹಿಸಿದ್ದ ಅಧ್ಯಯನಾಂಶಗಳನ್ನು ಪ್ರಕಟಿಸಿದ್ದಾರೆ.
ಬುಡಕಟ್ಟು ಸಂಸ್ಕೃತಿ ಮತ್ತು ಸಮುದಾಯಗಳ ಬಗ್ಗೆಯೂ ಅಪಾರ ಕಾರ್ಯನಿರ್ವಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರೀಯುತರು, ಹಲವು ಮಹತ್ವದ ಕೃತಿಗಳನ್ನು ಪ್ರಕಟಿಸಿದ್ದಾರೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಚಿತ್ರದುರ್ಗ ಜಿಲ್ಲೆಯ ಗ್ರಾಮ ಚರಿತ್ರೆ ಕುರಿತು ‘ಗ್ರಾಮ ಚರಿತ್ರೆ ಕೋಶ’ ಎಂಬ ಎರಡು ಬೃಹತ್ ಸಂಪುಟಗಳು.
ರಾಷ್ಟ್ರ್ರೀಂಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಪಕಟಗೊಂಡಿರುವ ‘ಚಿತ್ರದುರ್ಗ ಜಿಲ್ಲೆಯ ತತ್ವಪದಗಳು’ ಎಂಬ ಎರಡು ಸಂಪುಟ ಕೃತಿಗಳು. ಬಯಲು ಸೀಮೆಯ ಅವಧೂತರ ಕುರಿತ ‘ಚಿತ್ರದುರ್ಗ ಜಿಲ್ಲೆಯ ಅವಧೂತರು’ ಎಂಬ ಕೃತಿಗಳು ಪ್ರಕಟವಾಗಿವೆ.
ಇವುಗಳ ಜೊತೆಗೆ, ಪುರಾಣ ಮತ್ತು ಚರಿತ್ರೆಯನ್ನು ಸಮಕಾಲೀನ ಚಿತ್ರದುರ್ಗ ಜಿಲ್ಲೆಯ ಜಾನಪದ, ಬುಡಕಟ್ಟು, ತತ್ವಪದಕಾರರು, ಬಯಲಾಟ ಕಲೆ ಮತ್ತು ಕಲಾವಿದರ ಬಗೆಗಿನ ಸ್ಪಂದನೆಯನ್ನು ಸಾದರಪಡಿಸುವ ಲೇಖನಗಳನ್ನು ಒಳಗೊಂಡಿರುವ ಮಹತ್ವದ ಕೃತಿ ‘ಬಹುಮುಖಿ’. ಹಾಗೆ ದಲಿತ ಪದವಿಧರರ ಸಮಸ್ಯೆಗಳು, ಬಳ್ಳಾರಿ ಜಿಲ್ಲೆಯ ಅವಧೂತರು, ವಚನಕಾರ ಮೋಳಿಗೆ ಮಾರಯ್ಯ ಮೊದಲಾದ ಮಹತ್ವದ ಕೃತಿಗಳನ್ನು ಪ್ರಕಟಿಸಿದ್ದಾರೆ.
ಸಾಹಿತ್ಯ ಸಂವೇದನೆ, ಸಾಹಿತ್ಯ ಕಣಜ, ಚಿನ್ಮೂಲಾದ್ರಿ ಸಿರಿ, ವಾಲ್ಮೀಕಿ ವಿಜಯ ಮತ್ತು ಕರ್ನಾಟಕ ಏಕೀಕರಣ-ಹೆಜ್ಜೆ ಗುರುತುಗಳು ಇವು ಶ್ರೀಯುತರು ಸಂಪಾದಿಸಿರುವ ಪ್ರಮುಖ ಕೃತಿಗಳಾಗಿವೆ.
ಇದೂವರೆಗೂ, ಇಪ್ಪತ್ತೊದಕ್ಕೂ ಹೆಚ್ಚು ಮೌಲಿಕ ಸಂಶೋಧನಾ ಲೇಖನಗಳನ್ನು, ಏಳು ಸಂಶೋಧನಾ ಯೋಜನೆಗಳನ್ನು ಮಂಡಿಸಿರುವ ಇವರು, ಹತ್ತಕ್ಕೂ ಹೆಚ್ಚು ರಾಷ್ಟ್ರಮಟ್ಟದ ಐವತ್ತಕ್ಕೂ ಹೆಚ್ಚು ರಾಜ್ಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ಸಂಪನ್ಮೂಲ ವ್ಯಕ್ತಯಾಗಿ ಭಾಗವಹಿಸಿ ತಮ್ಮ ಮೌಲಿಕ ಉಪನ್ಯಾಸ ನೀಡಿದ್ದಾರೆ.
ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ. ಸಂಶೋಧನಾ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿರುವ ಇವರು ಇಬ್ಬರು ಎಂಪಿಲ್ ವಿದ್ಯಾರ್ಥಿಗಳು ಹಾಗೂ ನಾಲ್ವರು ವಿದ್ಯಾರ್ಥಿಗಳಿಗೆ ಪಿಎಚ್.ಡಿ. ಮಾರ್ಗದರ್ಶನ ಮಾಡಿದ್ದಾರೆ. 2023ರ ಫೆಬ್ರವರಿಯಲ್ಲಿ ನಡೆದ ಹಿರಿಯೂರು ತಾಲ್ಲೂಕಿನ 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಾಡಿನ ಗೌರವಕ್ಕೆ ಪಾತ್ರರಾಗಿದ್ದಾರೆ.
ಇಷ್ಟೊಂದು ಬಹುಮುಖ ಪ್ರತಿಭೆಯುಳ್ಳ ಶ್ರೀಯುತರ ನಿವೃತ್ತಿಯೋತ್ತರದ ಬದುಕು ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡು, ಕನ್ನಡ ಸಾಹಿತ್ಯಕ್ಕೆ ಜೀವ ಸಂಜೀವಿನಿಯಾಗಬಲ್ಲ ಮತ್ತಷ್ಟು ಮೌಲ್ಯಯುತ ಕೃತಿಗಳು ರಚನೆಯಾಗಲಿ, ನಾಡಿನ ಸಾಹಿತ್ಯದ ಶ್ರೀಮಂತಿಕೆಗೆ ಮಹತ್ವದ ಕೊಡುಗೆಯಾಗಲಿ ಎಂದು ಬಯಸುವ, ಸರ್ಕಾರಿ ಕಲಾ ಕಾಲೇಜಿನ ಇತಿಹಾಸ ನಿಕಾಯದ ಮನಸ್ಸುಗಳು.
==
