ಜಾತಿಗಿಂತ ಪ್ರೀತಿ ದೊಡ್ಡದು; ಕುಂಚಿಟಿಗ ಮಠದಲ್ಲಿ ಜಾತ್ಯತೀತ ವಿವಾಹ ಕ್ರಾಂತಿ
ಹೊಸದುರ್ಗ: ಬಸವಾದಿ ಶರಣರ ವಚನಗಳು ಹಾಗೂ ಸಂವಿಧಾನದ ಆಶಯದಂತೆ ಕಳೆದ 28 ವರ್ಷಗಳಿಂದ ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠವು ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ ನೀಡುತ್ತಿದ್ದು, ಇದುವರೆಗೆ 132 ಜೋಡಿಗಳ ವಿವಾಹಗಳಿಗೆ ಸಾಕ್ಷಿಯಾಗಿದೆ ಎಂದು ಮಠದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಶಾಂತವೀರ ಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಹೊಸದುರ್ಗ ತಾಲ್ಲೂಕಿನ ಹುಲೇನಹಳ್ಳಿ ಗ್ರಾಮದ ಕುಂಚಿಟಿಗ ಸಮಾಜದ ವರ ರಂಗನಾಥ ಹಾಗೂ ಪಟ್ಟಣದ ಭೋವಿ ಸಮಾಜದ ವಧು ನಂದಿನಿ ಅವರಿಗೆ ಲಿಂಗ ಸಂಸ್ಕಾರ ಹಾಗೂ ದೀಕ್ಷೆ ನೀಡಿದ ನಂತರ ಅವರು ಮಾತನಾಡಿದರು.
ಹೆಣ್ಣು-ಗಂಡು ಒಂದಾದಾಗ ಜಾತಿ-ಧರ್ಮ ಅಡ್ಡಬರಬಾರದು ಎಂಬುದೇ ವಚನ ಧರ್ಮ ಮತ್ತು ಸಂವಿಧಾನ ಧರ್ಮದ ಸಾರವಾಗಿದೆ. ತಮ್ಮ ಪೀಠಾರೋಹಣದಿಂದಲೂ ಅಂತರ್ಜಾತಿ ಹಾಗೂ ಅಂತರ್ ಧರ್ಮ ವಿವಾಹಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದೇವೆ ಎಂದು ತಿಳಿಸಿದರು.
ಅಂತರ್ಜಾತಿ ವಿವಾಹಗಳು ಸಮಾಜದಲ್ಲಿನ ಜಾತಿ ದ್ವೇಷವನ್ನು ಕಡಿಮೆ ಮಾಡಿ, ಜಾತಿ ವ್ಯವಸ್ಥೆಯ ನಿರ್ಮೂಲನೆಗೆ ಹಾಗೂ ಜಾತ್ಯತೀತ ಸಮಾಜ ನಿರ್ಮಾಣಕ್ಕೆ ನೆರವಾಗುತ್ತವೆ. ಇಂತಹ ವಿವಾಹಗಳಿಂದ ಸಮಾನತೆ ಮತ್ತು ಭಾತೃತ್ವದ ಮೌಲ್ಯಗಳು ಬಲವಾಗುತ್ತವೆ ಎಂದು ಹೇಳಿದರು.
ಮೊನ್ನೆ (ಶುಕ್ರವಾರ) ಕುಂಚಿಟಿಗ ಸಮಾಜದ ವರ ಹಾಗೂ ನಾಯಕ ಸಮಾಜದ ವಧುವಿಗೆ, ಇಂದು (ಶನಿವಾರ) ಕುಂಚಿಟಿಗ ಸಮಾಜದ ವರ ಮತ್ತು ಭೋವಿ ಸಮಾಜದ ವಧುವಿಗೆ ದೀಕ್ಷಾ ಸಂಸ್ಕಾರ ನೀಡಲಾಗಿದೆ. ಎಲ್ಲರೂ ಸಂವಿಧಾನದ ಆಶಯದಂತೆ ನಡೆದುಕೊಂಡರೆ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ವೃದ್ಧಿಯಾಗುತ್ತದೆ ಎಂದರು.
ಮಠವು ಕೇವಲ ಆಶೀರ್ವಚನಗಳಿಗೆ ಸೀಮಿತವಾಗದೆ, ಜಾತಿ ನಿರ್ಮೂಲನೆ, ಮೂಢನಂಬಿಕೆಗಳ ನಿವಾರಣೆ ಹಾಗೂ ಸಹೋದರತ್ವದ ಬಾಳ್ವೆಯನ್ನು ಬಲಪಡಿಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ. ಸಣ್ಣ ಸಮುದಾಯಗಳ ಪ್ರಗತಿಗೆ ಸಹಕಾರ ನೀಡುವುದು ಪಾರಂಪರಿಕ ಮಠಗಳ ಕರ್ತವ್ಯ ಎಂದು ಅಭಿಪ್ರಾಯಪಟ್ಟರು.
ಕುಂಚಿಟಿಗ ಸಮಾಜದಲ್ಲಿ ಅಂತರ್ಜಾತಿ ವಿವಾಹಕ್ಕೂ ಮೊದಲು ಗುರುಗಳಿಂದ ದೀಕ್ಷೆ ಸ್ವೀಕರಿಸುವುದು ಸಂಪ್ರದಾಯವಾಗಿದೆ. ಸಮಾಜದಲ್ಲಿ ಶಾಂತಿ ಹಾಗೂ ಶಿಸ್ತಿನ ಕಾಪಾಡುವ ನಿಟ್ಟಿನಲ್ಲಿ ಮಠದ ಮಾರ್ಗದರ್ಶನ ಮಹತ್ವದ್ದಾಗಿದೆ.
ಹೆಣ್ಣು-ಗಂಡಿನ ಕುಟುಂಬಗಳು ಸ್ವಯಂ ಪ್ರೇರಣೆಯಿಂದ ಮಠಕ್ಕೆ ಆಗಮಿಸಿ ದೀಕ್ಷೆ ಸ್ವೀಕರಿಸಿ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿರುವುದು ಸಂತಸದ ವಿಷಯವಾಗಿದೆ. ಮಠವು ಯಾರ ಮೇಲೂ ಒತ್ತಾಯ ಹೇರುವುದಿಲ್ಲ, ಮಾರ್ಗದರ್ಶನ ಮಾತ್ರ ನೀಡುತ್ತದೆ ಎಂದು ಸ್ವಾಮೀಜಿ ಹೇಳಿದರು.
ಬಾಕ್ಸ್:
ಹುಲೇನಹಳ್ಳಿ ಗ್ರಾಮದ ರಂಗನಾಥ ಹಾಗೂ ಹೊಸದುರ್ಗದ ನಂದಿನಿ ಪರಸ್ಪರ ಪ್ರೀತಿಸುತ್ತಿದ್ದು, ಏಪ್ರಿಲ್ 9ರಂದು ವಿವಾಹವಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಶನಿವಾರ ಶ್ರೀ ಶಾಂತವೀರ ಸ್ವಾಮೀಜಿ ಅವರು ಲಿಂಗ ಸಂಸ್ಕಾರ ದೀಕ್ಷೆ ನೀಡಿ ಆಶೀರ್ವಾದಿಸಿದರು.
ಬಾಕ್ಸ್:
ಶುಕ್ರವಾರ ಮಠಕ್ಕೆ ಆಗಮಿಸಿದ್ದ ಕುಂಚಿಟಿಗ ಸಮಾಜದ ವರ ಹಾಗೂ ನಾಯಕ ಸಮಾಜದ ವಧುವಿಗೆ ಲಿಂಗ ಸಂಸ್ಕಾರ ದೀಕ್ಷೆ ನೀಡಲಾಗಿದ್ದು, ಕುಟುಂಬಸ್ಥರು ಮತ್ತು ಭಕ್ತರು ಸಾಕ್ಷಿಯಾಗಿ ಅಂತರ್ಜಾತಿ ವಿವಾಹ ನೆರವೇರಿಸಲಾಯಿತು.
