Close Menu
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
What's Hot

ರಾಷ್ಟ್ರಮಟ್ಟಕ್ಕೆ ಆರ್‌.ವೈಷ್ಣವಿ ಆಯ್ಕೆ

ಕರಿಯಪ್ಪ ಮಾಳಿಗೆ ನೆಲದ ಮಗ ; ಸಂಶೋಧನೆಯ ಹಾದಿಯಲ್ಲಿ ಮಣ್ಣಿನ ಗುಣ ಹುಡುಕಿದ ಚಿಂತಕ

ರೈತ ಸಮೃದ್ಧಿಯಾಗಿದ್ದರೆ ದೇಶವು ಕೂಡ ಸಮೃದ್ಧಿ: ಶಾಸಕ ಕೆ.ಸಿ ವೀರೇಂದ್ರ ಪಪ್ಪಿ

Facebook X (Twitter) Instagram
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
Facebook X (Twitter) Instagram
Times Of Bayaluseeme
  • ಮುಖಪುಟ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ರಾಜಕೀಯ
  • ರಾಜ್ಯ
  • ಸಿನಿಮಾ
Subscribe
Times Of Bayaluseeme
Home»ಜಿಲ್ಲಾ ಸುದ್ದಿ»ಚಿತ್ರದುರ್ಗ»ಕರಿಯಪ್ಪ ಮಾಳಿಗೆ ನೆಲದ ಮಗ ; ಸಂಶೋಧನೆಯ ಹಾದಿಯಲ್ಲಿ ಮಣ್ಣಿನ ಗುಣ ಹುಡುಕಿದ ಚಿಂತಕ
ಚಿತ್ರದುರ್ಗ

ಕರಿಯಪ್ಪ ಮಾಳಿಗೆ ನೆಲದ ಮಗ ; ಸಂಶೋಧನೆಯ ಹಾದಿಯಲ್ಲಿ ಮಣ್ಣಿನ ಗುಣ ಹುಡುಕಿದ ಚಿಂತಕ

ಮೃತ್ಯುಂಜಯಾಚಾರ್ ಬಿBy ಮೃತ್ಯುಂಜಯಾಚಾರ್ ಬಿMarch 29, 2026No Comments5 Mins Read
Share WhatsApp Facebook Twitter Threads Telegram
Follow Us
Facebook Instagram
Share
WhatsApp Twitter Facebook Telegram

ಕರಿಯಪ್ಪ ಮಾಳಿಗೆ ನೆಲದ ಮಗ ; ಸಂಶೋಧನೆಯ ಹಾದಿಯಲ್ಲಿ ಮಣ್ಣಿನ ಗುಣ ಹುಡುಕಿದ ಚಿಂತಕ

ಟಿಒಬಿ ನ್ಯೂಸ್ ಚಿತ್ರದುರ್ಗ

ಈ ನೆಲದ ತತ್ವಪದಕಾರರ ಅಂತರಂಗದ ಒಡನಾಟದೊಂದಿಗೆ, ಮಣ್ಣಿನ ಸತ್ವ ಮತ್ತು ಜೀವತಂತುವನ್ನು ಮೀಟಿದ ಅಪರೂಪದ ಸಂಶೋಧಕ ಡಾ. ಜೆ. ಕರಿಯಪ್ಪ ಮಾಳಿಗೆ ಎಂದು ಸಂಸ್ಕೃತಿ ಚಿಂತಕ ಡಾ.ಎಸ್.ನಟರಾಜ ಬೂದಾಳು ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಮೀಪದ ಕ್ರೀಡಾ ಭವನದಲ್ಲಿ ಭಾನುವಾರ ಪತ್ರಕರ್ತರ ಬಳಗ, ಆಶಯ ವತಿಯಿಂದ ಹಮ್ಮಿಕೊಂಡಿದ್ದ ಡಾ.ಜೆ.ಕರಿಯಪ್ಪ ಮಾಳಿಗೆ ನಡೆ-ನುಡಿ, ಗೌರವಾರ್ಪಣೆ ಮತ್ತು ವಿಶಿಷ್ಟ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ, ತತ್ವಪದ ಮತ್ತು ಅವಧೂತ ಪರಂಪರೆ ಕುರಿತು ಮಾತನಾಡಿದರು.

ತತ್ವಪದಕಾರರ ಪರಂಪರೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಕರಿಯಪ್ಪ ಮಾಳಿಗೆ ಈ ನೆಲದ ನಿಜವಾದ ಪ್ರತಿನಿಧಿ. ಚಿತ್ರದುರ್ಗದ ನೈಜ ಸತ್ವವನ್ನು ಅರ್ಥಮಾಡಿಕೊಂಡಿರುವ ಅವರು, ಈ ಮಣ್ಣಿನ ಸಾಂಸ್ಕೃತಿಕ ಬೇರುಗಳನ್ನು ಮೀಟಿದವರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಚಿತ್ರದುರ್ಗದ ಬಹುತ್ವವೇ ಈ ನೆಲದ ನಿಜವಾದ ಶಕ್ತಿ. ಕರ್ನಾಟಕದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಚಿತ್ರದುರ್ಗದಲ್ಲಿ ಯಾವುದೇ ಒಂದು ನಿರ್ದಿಷ್ಟ ಜಾತಿ ಬಲಿಷ್ಠವಾಗಿಲ್ಲದಿರುವುದು ಈ ನೆಲದ ಹೆಮ್ಮೆಯ ವಿಷಯ. ಬೇಡರು, ಬೆಸ್ತರು, ಉಪ್ಪಾರರು, ಗಾಣಿಗರು, ಕುರುಬರು, ದಲಿತರು ಹಾಗೂ ಮುಸ್ಲಿಂರು ಸೇರಿದಂತೆ ಅನೇಕ ಸಮುದಾಯಗಳು ಸಮಾನವಾಗಿ ಬೆರೆತು ಬಾಳುತ್ತಿವೆ. ಈ ಬಹುತ್ವವೇ ಇಲ್ಲಿನ ಜನರನ್ನು ಒಟ್ಟಾಗಿ ಹಿಡಿದಿಟ್ಟಿದೆ ಎಂದು ತಿಳಿಸಿದ ಅವರು, ನಮ್ಮ ಸಾಂಸ್ಕøತಿಕ ಇಕ್ಕಟ್ಟುಗಳ ಮಧ್ಯೆ ಬದುಕುತ್ತಿರುವ ನಮಗೆ, ತತ್ವಪದಗಳ ಮೂಲಕ ಆಂತರಿಕ ಯಾನ ಮಾಡಿಸಿದ ಅಪರೂಪದ ವ್ಯಕ್ತಿತ್ವ ಎಂದು ಬಣ್ಣಿಸಿದರು.

ತತ್ವಪದಗಳ ಸಂಗ್ರಹ ಯೋಜನೆಯಲ್ಲಿ ಕರಿಯಪ್ಪ ಅವರು ತೋರಿದ ಶ್ರದ್ಧೆಯಿಂದಾಗಿ ಹೊನ್ನೆನಹಳ್ಳಿ ದಾಸಗಿರಿ ಅಜ್ಜ, ಸಕ್ಕರೆಪ್ಪ ತಾತ, ವೀರಪ್ಪ ತಾತ ಹಾಗೂ ಕರೀಂ ಪೀರ ಅವರಂತಹ ನೂರಾರು ಅಜ್ಞಾತ ತತ್ವಪದಕಾರರು ಮತ್ತು ತತ್ವ ಸಾಧಕರು ಸಾಂಸ್ಕøತಿಕ ಲೋಕಕ್ಕೆ ಪರಿಚಯವಾಗಿದ್ದಾರೆ. ಚಿನ್ಮೂಲಾದ್ರಿ ಪರಂಪರೆಯ ಹಿಂದಿನ ತಲೆಮಾರಿನ ಸ್ವಾಮೀಜಿಗಳು ಕೂಡ ಅದ್ಭುತ ತತ್ವಪದಕಾರರಾಗಿದ್ದರು ಎಂಬುದನ್ನು ನೆನಪಿಸಿದ ಬೂದಾಳು ಅವರು, ಈ ಎಲ್ಲಾ ಅಸ್ಮಿತೆಗಳನ್ನು ದಾಖಲಿಸಿರುವುದು ಜಿಲ್ಲೆಯ ಸಾಂಸ್ಕೃತಿಕ ಚರಿತ್ರೆಗೆ ಸಂದ ದೊಡ್ಡ ಜಯ ಎಂದರು.

ಡಾ.ಜೆ.ಕರಿಯಪ್ಪ ಮಾಳಿಗೆ ಅವರ ಸಂಪಾದನೆ ಕೃತಿಗಳ ಕುರಿತು ವಿಮರ್ಶಕ ಡಾ. ಲೋಕೇಶ್ ಅಗಸನಕಟ್ಟೆ ಮಾತನಾಡಿ, ಬರವಣಿಗೆ ಎಂಬುದು ಕೇವಲ ಅಕ್ಷರಗಳ ಜೋಡಣೆಯಲ್ಲ, ಅದು ಬದುಕಿನ ನಡೆಯನ್ನೇ ಪ್ರತಿಬಿಂಬಿಸುವ ಕನ್ನಡಿಯಾಗಬೇಕು. ಕರಿಯಪ್ಪ ಮಾಳಿಗೆ ಅವರ ಬದುಕು ಮತ್ತು ಬರಹ ಎರಡೂ ಒಂದೇ ಆಗಿವೆ ಎಂದು ತಿಳಿಸಿದರು.

ಜಾನಪದ ವಿಶ್ವವಿದ್ಯಾಲಯದ ಮಹತ್ವಾಕಾಂಕ್ಷೆಯ ಗ್ರಾಮ ಚರಿತ್ರೆ ಮತ್ತು ಗ್ರಾಮ ಕೋಶ ಸಿದ್ಧಪಡಿಸುವಲ್ಲಿ ಕರಿಯಪ್ಪ ಅವರ ಶ್ರಮ ಅಪಾರವಾದುದು. ಕರ್ನಾಟಕದ ಪ್ರತಿ ಹಳ್ಳಿಯ ಅಸ್ಮಿತೆ ನಾಶವಾಗುವ ಮೊದಲೇ ಅವುಗಳನ್ನು ದಾಖಲಿಸಬೇಕೆಂಬ ಯೋಜನೆಯಡಿ ಚಿತ್ರದುರ್ಗ ಜಿಲ್ಲೆಯ ಹಳ್ಳಿಗಳ ಮಾಹಿತಿ ಸಂಗ್ರಹಿಸುವ ಹೊಣೆಯನ್ನು ಅವರು ಸಮರ್ಥವಾಗಿ ನಿಭಾಯಿಸಿದರು. ಮಾಹಿತಿ ಸಂಗ್ರಹಕಾರರು ನೀಡಿದ ದತ್ತಾಂಶಗಳನ್ನು ಕೇವಲ ಕಾಗದದ ಮೇಲೆ ನಂಬದೆ, ಸ್ವತಃ ಹಳ್ಳಿಗಳಿಗೆ ಭೇಟಿ ನೀಡಿ ಅವುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದರು. ಇಂದು ನಾವು ಕಾಣುವ ಜಾನಪದ ವಿಶ್ವವಿದ್ಯಾಲಯದ ಸಂಪುಟಗಳಲ್ಲಿ ಅವರ ಪರಿಶ್ರಮ ಎದ್ದು ಕಾಣುತ್ತದೆ. ಹಳ್ಳಿಗಳಿಗೆ ತೆರಳಿ ಮೌಖಿಕ ಪರಂಪರೆ ಮತ್ತು ಐತಿಹ್ಯಗಳನ್ನು ಸಂಗ್ರಹಿಸುವುದು ಸವಾಲಿನ ಕೆಲಸವಾಗಿತ್ತು. ಮಾಹಿತಿ ಸಂಗ್ರಹಣೆಯಲ್ಲಿ ಎದುರಾದ ಕಷ್ಟ ಕಾರ್ಪಣ್ಯಗಳ ನಡುವೆಯೂ ಅವರು ತಮ್ಮ ಗುರಿಯಿಂದ ಹಿಂದೆ ಸರಿಯಲಿಲ್ಲ ಎಂದು ಸ್ಮರಿಸಿದರು.

ಜೀವನದಲ್ಲಿ ಹಣ-ಅಸ್ತಿ ಮಾಡುವುದಕ್ಕಿಂತಲೂ ಜನರ ಪ್ರೀತಿ, ವಿಶ್ವಾಸ ಮತ್ತು ಸ್ನೇಹವನ್ನು ಗಳಿಸುವುದೇ ನಿಜವಾದ ಸಂಪಾದನೆ. ಅಂತಹ ಅಪರೂಪದ ಗುಣ ಡಾ. ಜೆ. ಕರಿಯಪ್ಪ ಮಾಳಿಗೆ ಅವರಲ್ಲಿದೆ. ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯುವ ಗುಣ ಎಲ್ಲರಿಗೂ ಸಿದ್ಧಿಸುವುದಿಲ್ಲ. ಇವನಾರವ ಎನ್ನದೆ ಇವ ನಮ್ಮವ ಎಂದು ಎಲ್ಲರನ್ನೂ ಪ್ರೀತಿಯಿಂದ ಕಾಣುವುದೇ ಅವರ ಗುಣ ಎಂದು ತಿಳಿಸಿದರು.

ಸಂಶೋದನೆ ಕುರಿತು ಕವಯಿತ್ರಿ ತಾರಿಣಿ ಶುಭದಾಯಿನಿ ಮಾತನಾಡಿ, ಶೈಕ್ಷಣಿಕ ಕ್ಷೇತ್ರ ಮತ್ತು ಬದುಕಿನ ಹಾದಿ ಎರಡರಲ್ಲೂ ಡಾ. ಜೆ. ಕರಿಯಪ್ಪ ಮಾಳಿಗೆ ಅವರು ಹಾಕಿಕೊಟ್ಟಿರುವ ಹೆಜ್ಜೆಗುರುತುಗಳು ಅತ್ಯಂತ ಪ್ರಭಾವಶಾಲಿಯಾಗಿವೆ. ಸಂಶೋಧನೆಯು ಕೇವಲ ಅಂಕಿ-ಅಂಶಗಳ ಸಂಗ್ರಹವಾಗದೆ, ಆ ನೆಲದ ಮಣ್ಣಿನ ಗುಣ, ಜನರ ಆಹಾರ ಪದ್ಧತಿ ಮತ್ತು ಅವರು ಕಟ್ಟುಕೊಂಡಿರುವ ತಾತ್ವಿಕ ಸತ್ವದ ಶೋಧನೆಯಾಗಬೇಕು ಎಂದು ತಿಳಿಸಿದ ಅವರು, ಮಾಳಿಗೆ ಅವರು ಗಾದೆಗಳು ಮತ್ತು ಜನಪದ ಕಥನಗಳ ಮೂಲಕ ಸಾಂಸ್ಕೃತಿಕ ಸತ್ವವನ್ನು ಶೋಧಿಸುವ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.

ಕರಿಯಪ್ಪ ಮಾಳಿಗೆ ಅವರು ಬಳ್ಳಾರಿಯ ಅವಧೂತರು ಕುರಿತು ಮಾಡಿದ ಸಂಶೋಧನೆಯು ಅವರ ತಾತ್ವಿಕ ಅಧ್ಯಯನಕ್ಕೆ ಉತ್ತಮ ಉದಾಹರಣೆ ಎಂದು ಸ್ಮರಿಸಿದ ಅವರು, ಕೇವಲ ಭೌತಿಕ ಆಕರಗಳನ್ಮಷ್ಟೇ ಬಳಸದೆ, ಅಮೂರ್ತವಾದ ಸಿದ್ಧಾಂತಗಳ ಮೂಲಕ ಸಮಾಜದ ಸಂಸ್ಕೃತಿಯನ್ನು ಕಟ್ಟಿಕೊಡುವುದೇ ಅವರ ವಿಶೇಷತೆ ಎಂದರು.

ಕರಿಯಪ್ಪ ಮಾಳಿಗೆ ಅವರ ಒಡನಾಟದ ಕುರಿತು ಕವಿ ಚಂದ್ರಶೇಖರ್ ತಾಳ್ಯ ಮಾತನಾಡಿ, ಕರಿಯಪ್ಪ ಮಾಳಿಗೆ ಅವರು ನಿಜವಾದ ನೆಲದ ಮಗನಾಗಿದ್ದು, ಮಣ್ಣಿನ ಗುಣ ಮತ್ತು ಜನರ ನಾಡಿಮಿಡಿತವನ್ನು ಚೆನ್ನಾಗಿ ಬಲ್ಲವರಾಗಿದ್ದಾರೆ. ಇಂದಿನ ಕಾಲದಲ್ಲಿ ಮಾನವೀಯ ಸಂಬಂಧಗಳು ಹಳಸುತ್ತಿರುವಾಗ, ಮಾಳಿಗೆ ಅವರು ತಮ್ಮ ವಿದ್ಯಾರ್ಥಿಗಳು ಮತ್ತು ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳುವ ನಿರ್ಮಲ ಪ್ರೀತಿ ಮತ್ತು ಗೌರವ ಎಲ್ಲರಿಗೂ ಮಾದರಿಯಾಗಿದೆ. ಅವರು ವಿದ್ಯಾರ್ಥಿಗಳನ್ನು ಸಮಾನವಾಗಿ ಕಂಡು ಅವರಿಂದಲೂ ಕಲಿಯುವ ಗುಣ ಹೊಂದಿದ್ದಾರೆ ಎಂದು ತಿಳಿಸಿದರು.

ಕಥೆಗಾರ ಗಂಗಾಧರ್ ಮಾತನಾಡಿ, ಒಬ್ಬ ಸಂಶೋಧಕ ಅಥವಾ ಲೇಖಕ ಸದಾ ಸಮಾಜದ ಹಿಗ್ಪಿ ಬಯಸುತ್ತಾನೆ. ಕರಿಯಪ್ಪ ಅವರು ಕೂಡ ಸಮಾಜಮುಖಿಯಾಗಿ ಆಲೋಚಿಸುವ ವ್ಯಕ್ತಿಗಳಾಗಿದ್ದು, ನಿರಂತರವಾಗಿ ಸಮಾಜಕ್ಕಾಗಿ ಏನನ್ನಾದರೂ ಅರ್ಪಿಸುತ್ತಲೇ ಇರುತ್ತಾರೆ. ಇಂತಹ ಸೃಜನಶೀಲ ವ್ಯಕ್ತಿಗಳಿಗೆ ನಿವೃತ್ತಿ ಎಂಬುದು ಕೇವಲ ತಾಂತ್ರಿಕ ಪ್ರಕ್ರಿಯೆಯಷ್ಟೇ ಎಂದು ಹೇಳಿದರು.

ತುಮಕೂರು, ಚಿತ್ರದುರ್ಗ ಹಾಗೂ ಕೋಲಾರ ಜಿಲ್ಲೆಗಳು ತತ್ವಪದಗಳ ದೊಡ್ಡ ಭಂಡಾರವನ್ನು ಹೊಂದಿವೆ. ಬೂದಾಳ್ ಅವರಂತಹ ಹಿರಿಯರು ಈ ಪರಂಪರೆಯನ್ನು ಅಕ್ಷರ ರೂಪಕ್ಕೆ ಇಳಿಸುವಲ್ಲಿ ದೊಡ್ಡ ಕೆಲಸ ಮಾಡಿದ್ದಾರೆ. ಕರಿಯಪ್ಪ ಮಾಳಿಗೆ ಅವರು ಕೂಡ ಈ ಸಂಪ್ರದಾಯದ ಆಳವಾದ ಅಧ್ಯಯನ ನಡೆಸಿದ್ದಾರೆ. ತತ್ವಪದಗಳು ನಮ್ಮ ಮೂಲ ಸಂಸ್ಕøತಿಯ ಭಾಗವಾಗಿದ್ದು, ಅದರಲ್ಲಿರುವ ಜಾತ್ಯತೀತ ಮನೋಭಾವ ಮತ್ತು ಮನುಕುಲದ ಬಗೆಗಿನ ಪ್ರೀತಿ ಅನನ್ಯವಾದುದು ಎಂದರು.

ಕರಿಯಪ್ಪ ಮಾಳಿಗೆ ಅವರಿಗೆ ಸಿಟ್ಟು ಸ್ವಲ್ಪ ಜಾಸ್ತಿ ಇರಬಹುದು. ಆದರೆ ಅದು ಅವರ ಪ್ರಾಮಾಣಿಕತೆಯ ಸಂಕೇತ. ಯಾವುದಾದರೂ ವಿಚಾರ ಸರಿ ಕಾಣದಿದ್ದರೆ ಮುಲಾಜಿಲ್ಲದೆ ಹೇಳುವ ಗುಣ ಅವರದ್ದು. ಅವರ ಸಂಘಟನಾ ಶಕ್ತಿಯೂ ಅದ್ವಿತೀಯವಾಗಿದ್ದು, ಕಳೆದ ವರ್ಷ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಕಾರ್ಯಕ್ರಮವನ್ನು ಚಿತ್ರದುರ್ಗದಲ್ಲಿ ಯಶಸ್ವಿಯಾಗಿ ಆಯೋಜಿಸುವ ಮೂಲಕ ತಮ್ಮ ಸಾಮಥ್ರ್ಯ ಮೆರೆದಿದ್ದರು ಎಂದು ಸ್ಮರಿಸಿದರು.

ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ ಮಾತನಾಡಿ, ಡಾ. ಜೆ. ಕರಿಯಪ್ಪ ಮಾಳಿಗೆ ಅವರ ಸಂಶೋಧನಾ ಶಕ್ತಿ ಶ್ಲಾಘಿಸಿದ ಅವರು, ಸಂಶೋಧನಾ ಕ್ಷೇತ್ರಕ್ಕೆ ಅವರ ಕೊಡುಗೆ ಇನ್ನೂ ಹೆಚ್ಚಾಗಲಿ. ರಾಜಕೀಯದ ವ್ಯಾಮೋಹಕ್ಕೆ ಬೀಳದೆ ಇನ್ನೂ ಹೆಚ್ಚು ಓದು ಮತ್ತು ಅಭ್ಯಾಸದಲ್ಲಿ ತೊಡಗಿಸಿಕೊಳ್ಳುವಂತೆ ಅವರು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಹಿರಿಯ ಪತ್ರಕರ್ತ ಎಂ.ಎನ್.ಯೋಗೇಶ್ ಮಾತನಾಡಿ, ಕರಿಯಪ್ಪ ಮಾಳಿಗೆ ಅವರೊಂದಿಗೆ ಕೇವಲ ಒಂದು ವರ್ಷದ ಪರಿಚಯವಿದ್ದರೂ, ಅವರ ಜೊತೆಗಿನ ಆತ್ಮೀಯತೆ ದಶಕಗಳ ಕಾಲದ ಹಳೆಯ ಸ್ನೇಹದಂತೆ ಭಾಸವಾಗುತ್ತಿದೆ. ಅವರಲ್ಲಿರುವ ಮುಗ್ಧತೆ, ಅವರ ಮಾತಿನ ಗಡುಸುತನದ ಹಿಂದೆ ಅಡಗಿರುವ ಮೃದು ಸ್ವಭಾವ ಮತ್ತು ಅವರಲ್ಲಿರುವ ಜ್ಞಾನದ ಕುತೂಹಲವು ತಮ್ಮನ್ನು ಅವರ ಜೊತೆ ಹೆಚ್ಚು ಮಾತನಾಡಲು ಪ್ರೇರೇಪಿಸಿತು ಎಂದು ಹೇಳಿದರು.

ಅಭಿನಂದನಾ ಕಾರ್ಯಕ್ರಮಗಳೆಂದರೆ ಕೇವಲ ಸುಳ್ಳುಗಳ ಸುರಿಮಳೆಯಾಗಬಾರದು. ಅವು ವ್ಯಕ್ತಿಯ ನಡೆ-ನುಡಿಗಳನ್ನು ವಿಮರ್ಶಾತ್ಮಕವಾಗಿ ಕಟ್ಟಿಕೊಡುವ ದರ್ಶನವಾಗಬೇಕು. ಈ ನಿಟ್ಟಿನಲ್ಲಿ ಡಾ.ಜೆ.ಕರಿಯಪ್ಪ ಮಾಳಿಗೆ ಅವರ ನಡೆ-ನುಡಿ ಕಾರ್ಯಕ್ರಮ ಅವರ ಬದುಕು-ಬರಹದ ವಿಮರ್ಶಾತ್ಮಕ ಅವಲೋಕನವಾಗಿ ಮೂಡಿಬಂದಿದೆ ಎಂದು ಅಭಿಪ್ರಾಯಪಟ್ಟರು.

ವಚನ ಸಾಹಿತ್ಯ ಓದಿನಿಂದ ಬದುಕಿಗೆ ಶಕ್ತಿ: ಡಾ. ಜೆ. ಕರಿಯಪ್ಪ ಮಾಳಿಗೆ: ಯುವಜನತೆ ತಮ್ಮ ಬದುಕಿನ ಅಸ್ಮಿತೆ ಮತ್ತು ಶಕ್ತಿಯನ್ನು ಕಂಡುಕೊಳ್ಳಲು ವಚನ ಸಾಹಿತ್ಯದ ಓದು ಅನಿವಾರ್ಯ ಎಂದು ಚಿಂತಕ ಡಾ. ಜೆ. ಕರಿಯಪ್ಪ ಮಾಳಿಗೆ ಅಭಿಪ್ರಾಯಪಟ್ಟರು.

ತಾವು ವೃತ್ತಿ ಜೀವನಕ್ಕೆ ಸೇರಿದಾಗ ಬಸವಣ್ಣನವರ ವಚನಗಳ ಪುಸ್ತಕವನ್ನೇ ಸ್ಫೂರ್ತಿಯಾಗಿ ಇಟ್ಟುಕೊಂಡಿದ್ದಾಗಿ ಸ್ಮರಿಸಿದ ಅವರು, ಇಂದು ತಮ್ಮ ಬಳಿ ಸಮೃದ್ಧವಾದ ವೈಯಕ್ತಿಕ ಗ್ರಂಥಾಲಯವಿದ್ದು, ನಿರಂತರ ಓದಿನಲ್ಲಿ ತೊಡಗಿರುವುದಾಗಿ ತಿಳಿಸಿದರು.

ವಚನ ಸಾಹಿತ್ಯದ ತತ್ವ ಸಿದ್ಧಾಂತಗಳು ಕೇವಲ ಭಾಷಣಕ್ಕೆ ಸೀಮಿತವಾಗದೆ, ಅವುಗಳನ್ನು ವೃತ್ತಿ ಮತ್ತು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಾರ್ಥಕತೆ ಲಭಿಸುತ್ತದೆ ಎಂದು ತಿಳಿಸಿದ ಅವರು, ನಡೆ ಮತ್ತು ನುಡಿಯಲ್ಲಿ ಸಾಮರಸ್ಯ ಇರಬೇಕು ಎಂದರು.

ಜೀವನದಲ್ಲಿ ಸಾಮರಸ್ಯ, ಸೌಹಾರ್ದತೆ ಮತ್ತು ಸಹಬಾಳ್ವೆ ಬಹಳ ಮುಖ್ಯ. ಈ ನಿಟ್ಟಿನಲ್ಲಿ ನಮ್ಮ ಆಪ್ತ ಗೆಳೆಯರು ಆಯೋಜಿಸಿರುವ ಈ ಕಾರ್ಯಕ್ರಮ ಕೇವಲ ಶೈಕ್ಷಣಿಕ ಶಿಸ್ತಿನ ಚೌಕಟ್ಟಿಗೆ ಸೀಮಿತವಾಗದೆ, ಪ್ರೀತಿ ಮತ್ತು ಆತ್ಮೀಯತೆಯ ಸಮ್ಮಿಲನವಾಗಿದೆ. ನನಗೆ ಚುನಾವಣೆಗೆ ನಿಲ್ಲುವ ಯಾವುದೇ ಆಸೆ, ಕನಸುಗಳಿಲ್ಲ. ಕಳೆದ 20 ವರ್ಷಗಳಿಂದ ಒಂದೇ ಕಾಲೇಜಿನಲ್ಲಿ ಪಾಠ ಮಾಡುತ್ತಾ ಬಂದಿದ್ದೇನೆ. ನನಗೆ ಓದು, ಬರಹ ಮತ್ತು ಸಂಶೋಧನೆಯಲ್ಲಿ ಮಾತ್ರ ಆಸಕ್ತಿ ಇದೆ ಎಂದು ಸ್ಪಷ್ಟಪಡಿಸಿದರು.

ವಿದ್ಯಾರ್ಥಿಗಳೊಂದಿಗೆ ತಮಗಿರುವ ಆತ್ಮೀಯ ಸಂಬಂಧವನ್ನು ನೆನಪಿಸಿಕೊಂಡ ಅವರು, ತಮ್ಮ ಶಿಷ್ಯವೃಂದ ಪ್ರೀತಿಯಿಂದ ತಮ್ಮನ್ನು ‘ಟೈಗರ್’ ಎಂದು ಕರೆಯುವುದನ್ನು ಸ್ಮರಿಸಿದರು.

ಪತ್ರಕರ್ತ ಗೌನಹಳ್ಳಿ ಗೋವಿಂದಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಡಾ. ಜೆ. ಕರಿಯಪ್ಪ ಮಾಳಿಗೆ ಅವರು ಕೇವಲ ಒಬ್ಬ ಪ್ರಾಧ್ಯಾಪಕರಷ್ಟೇ ಅಲ್ಲ, ಅವರೊಬ್ಬ ಪ್ರೀತಿ ಮತ್ತು ನಂಬಿಕೆಯ ಸಾಕಾರಮೂರ್ತಿ. ಅವರೊಂದಿಗೆ ಕಳೆದ 15 ವರ್ಷಗಳ ಒಡನಾಟದಲ್ಲಿ ನಾನು ಕಂಡುಕೊಂಡ ಸತ್ಯವೇನೆಂದರೆ, ಅವರು ಯಾರನ್ನು ನಂಬುತ್ತಾರೋ ಅವರ ಮೇಲೆ ಅಪಾರವಾದ ಸ್ನೇಹ ತೋರುತ್ತಾರೆ ಎಂದು ಅಭಿಪ್ರಾಯಪಟ್ಟರು.

ಜಾನಪದ ವಿಶ್ವವಿದ್ಯಾಲಯದ ಮೂಲಕ ಗ್ರಾಮ ಚರಿತ್ರೆ ಕೋಶ ಸಿದ್ಧಪಡಿಸುವ ಸಂದರ್ಭದಲ್ಲಿ ಮಾಳಿಗೆ ಅವರ ಕಾರ್ಯವೈಖರಿ ನೆನಪಿಸಿಕೊಂಡ ಅವರು, “ಆ ಕೆಲಸದ ಸಮಯದಲ್ಲಿ ಅವರು ಅತೀವವಾದ ಶಿಸ್ತು ಮತ್ತು ಕಟ್ಟುನಿಟ್ಟಿನ ಸ್ವಭಾವ ತೋರುತ್ತಿದ್ದರು. ಪ್ರತಿಯೊಂದು ಹಳ್ಳಿಯ ಇತಿಹಾಸ ದಾಖಲಿಸುವಾಗ ಅಲ್ಲಿನ ಭಾಷೆ, ಪರಿಸರ, ಪ್ರಕೃತಿ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿ ಕೆಲಸ ಮಾಡುತ್ತಿದ್ದರು. ಕೆಲಸದ ವಿಚಾರದಲ್ಲಿ ಅವರು ತೋರಿಸುತ್ತಿದ್ದ ಆ ಸಿಟ್ಟು ಮತ್ತು ಶಿಸ್ತು ನಮಗೆ ಆರಂಭದಲ್ಲಿ ಕಷ್ಟವೆನಿಸಿದರೂ, ಕೆಲಸದ ಗುಣಮಟ್ಟಕ್ಕಾಗಿ ಅದು ಅನಿವಾರ್ಯವಾಗಿತ್ತು ಎಂದರು.

ಮಾಳಿಗೆ ಅವರು ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವ ಗುಣ ಹೊಂದಿದ್ದಾರೆ. ಯಾರದ್ದೇ ಕಷ್ಟವಿರಲಿ, ಅವರು ಅದನ್ನು ಕೇಳಿಸಿಕೊಂಡು ಸ್ಪಂದಿಸುವ ರೀತಿ ನಿಜಕ್ಕೂ ಮಾದರಿ. ಸ್ನೇಹ ಮತ್ತು ನಂಬಿಕೆ ಎಂಬುದು ಅವರ ಜೀವನದ ಎರಡು ಪ್ರಮುಖ ಆಧಾರಸ್ತಂಭಗಳು ಎಂದರು.

ಇದೇ ಸಂದರ್ಭದಲ್ಲಿ ಡಾ.ಜೆ.ಕರಿಯಪ್ಪ ಮಾಳಿಗೆ ಹಾಗೂ ಅವರ ಪತ್ನಿ ಮಹದೇವಮ್ಮ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಅಹೋಬಲ ಟಿವಿಎಸ್ ಮಾಲೀಕ ಟಿ.ವಿ.ಅರುಣ್ ಕುಮಾರ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಚಿತ್ರದುರ್ಗ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವೀರೇಶ ವಿ ಅಪ್ಪು, ನಿರ್ದೇಶಕ ವೀರೇಂದ್ರ ಕುಮಾರ್ ಕೋಗುಂಡೆ ಮಠ, ರಾಜ್ಯ ಸಮಿತಿ ಸದಸ್ಯ ಎಸ್.ಸಿದ್ದರಾಜು, ಪತ್ರಕರ್ತರಾದ ಮಹೇಶ್ ಬಾಬು, ಕೆ.ಪಿ.ಓಂಕಾರಮೂರ್ತಿ, ದಾವಣಗೆರೆ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ.ವಿಜಯ್ ಕುಮಾರ್, ಸರ್ಕಾರಿ ಕಲಾ ಕಾಲೇಜು ಪ್ರಾಧ್ಯಾಪಕ ಡಾ.ಕೆ.ಚಿತ್ತಯ್ಯ ಸೇರಿದಂತೆ ಮತ್ತಿತರರು ಇದ್ದರು.

============

Follow on Facebook Follow on Instagram
Share. Facebook Twitter WhatsApp Telegram
Previous Articleರೈತ ಸಮೃದ್ಧಿಯಾಗಿದ್ದರೆ ದೇಶವು ಕೂಡ ಸಮೃದ್ಧಿ: ಶಾಸಕ ಕೆ.ಸಿ ವೀರೇಂದ್ರ ಪಪ್ಪಿ
Next Article ರಾಷ್ಟ್ರಮಟ್ಟಕ್ಕೆ ಆರ್‌.ವೈಷ್ಣವಿ ಆಯ್ಕೆ
ಮೃತ್ಯುಂಜಯಾಚಾರ್ ಬಿ
  • Website

ಮೃತ್ಯುಂಜಯಾಚಾರ್ ಬಿ ಉಪ ಸಂಪಾದಕರು, ಟೈಮ್ಸ್ ಆಫ್ ಬಯಲುಸೀಮೆ ಮೃತ್ಯುಂಜಯಾಚಾರ್ ಬಿ ಅವರು 'ಟೈಮ್ಸ್ ಆಫ್ ಬಯಲುಸೀಮೆ' (timesofbayaluseeme.com) ಕನ್ನಡ ಸುದ್ದಿ ಪೋರ್ಟಲ್‌ನಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಆಳವಾದ ಆಸಕ್ತಿ ಹೊಂದಿರುವ ಇವರು, ನಿಖರವಾದ ಸುದ್ದಿ ವಿಶ್ಲೇಷಣೆ ಮತ್ತು ಜನಪರ ವರದಿಗಳನ್ನು ನೀಡುವಲ್ಲಿ ಸದಾ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಾದೇಶಿಕ ಸುದ್ದಿಗಳ ಬಗ್ಗೆ ಇವರು ವಿಶೇಷ ಗಮನಹರಿಸುತ್ತಾರೆ.

Related Posts

ರಾಷ್ಟ್ರಮಟ್ಟಕ್ಕೆ ಆರ್‌.ವೈಷ್ಣವಿ ಆಯ್ಕೆ

March 29, 2026

ಜಾತಿಗಿಂತ ಪ್ರೀತಿ ದೊಡ್ಡದು; ಕುಂಚಿಟಿಗ ಮಠದಲ್ಲಿ ಜಾತ್ಯತೀತ ವಿವಾಹ ಕ್ರಾಂತಿ

March 29, 2026

ಭದ್ರಾ ಮೇಲ್ದಂಡೆ ಯೋಜನೆಗೆ ಇನ್ನೂ ₹28,485 ಕೋಟಿ ಅಗತ್ಯ; ಕೇಂದ್ರ ಅನುದಾನಕ್ಕಾಗಿ ರಾಜ್ಯದ ಮನವಿ

March 29, 2026
Add A Comment
Leave A Reply Cancel Reply

Advertisement
Latest Posts

ರಾಷ್ಟ್ರಮಟ್ಟಕ್ಕೆ ಆರ್‌.ವೈಷ್ಣವಿ ಆಯ್ಕೆ

ಕರಿಯಪ್ಪ ಮಾಳಿಗೆ ನೆಲದ ಮಗ ; ಸಂಶೋಧನೆಯ ಹಾದಿಯಲ್ಲಿ ಮಣ್ಣಿನ ಗುಣ ಹುಡುಕಿದ ಚಿಂತಕ

ರೈತ ಸಮೃದ್ಧಿಯಾಗಿದ್ದರೆ ದೇಶವು ಕೂಡ ಸಮೃದ್ಧಿ: ಶಾಸಕ ಕೆ.ಸಿ ವೀರೇಂದ್ರ ಪಪ್ಪಿ

ಕರುನಾಡಿನ ಜಲಋಷಿ – ರಾಜಸ್ಥಾನದ ಜಲರಕ್ಷಕ: ದೆಹಲಿಯಲ್ಲಿ ಜಲ ಸಂರಕ್ಷಣೆಯ ಮಹಾ ಸಂವಾದ

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 ThemeSphere. Designed by ThemeSphere.
  • Privacy Policy
  • Terms
  • Accessibility

Type above and press Enter to search. Press Esc to cancel.