ಡಾ. ಕರಿಯಪ್ಪ ಮಾಳಿಗೆ ಅವರ ಸ್ನೇಹ-ನಂಬಿಕೆ ಅನನ್ಯ: ಪತ್ರಕರ್ತ ಗೌನಹಳ್ಳಿ ಗೋವಿಂದಪ್ಪ ಶ್ಲಾಘನೆ
ಚಿತ್ರದುರ್ಗ: “ಡಾ. ಜೆ. ಕರಿಯಪ್ಪ ಮಾಳಿಗೆ ಅವರು ಕೇವಲ ಒಬ್ಬ ಪ್ರಾಧ್ಯಾಪಕರಷ್ಟೇ ಅಲ್ಲ, ಅವರೊಬ್ಬ ಪ್ರೀತಿ ಮತ್ತು ನಂಬಿಕೆಯ ಸಾಕಾರಮೂರ್ತಿ. ಅವರೊಂದಿಗೆ ಕಳೆದ 15 ವರ್ಷಗಳ ಒಡನಾಟದಲ್ಲಿ ನಾನು ಕಂಡುಕೊಂಡ ಸತ್ಯವೇನೆಂದರೆ, ಅವರು ಯಾರನ್ನು ನಂಬುತ್ತಾರೋ ಅವರ ಮೇಲೆ ಅಪಾರವಾದ ಸ್ನೇಹವನ್ನು ತೋರುತ್ತಾರೆ” ಎಂದು ಪತ್ರಕರ್ತ ಗೌನಹಳ್ಳಿ ಗೋವಿಂದಪ್ಪ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಪಂಚಾಯತ್ ಕಚೇರಿ ಪಕ್ಕದ ಕ್ರೀಡಾ ಭವನದಲ್ಲಿ ಭಾನುವಾರ ಪತ್ರಕರ್ತರ ಬಳಗ ಮತ್ತು ‘ಆಶಯ’ ವತಿಯಿಂದ ಆಯೋಜಿಸಿದ್ದ “ಡಾ. ಜೆ. ಕರಿಯಪ್ಪ ಮಾಳಿಗೆ: ನಡೆ-ನುಡಿ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾಳಿಗೆ ಅವರ ಪತ್ರಿಕಾ ಒಡನಾಟವನ್ನು ಸ್ಮರಿಸಿದ ಗೋವಿಂದಪ್ಪ ಅವರು, “ನಾನು ಕನ್ನಡ ಪ್ರಭ ಪತ್ರಿಕೆಯಲ್ಲಿದ್ದಾಗ ವಿಶೇಷ ಪುರವಣಿಗಳಿಗೆ ಲೇಖನ ಕೇಳಿದ ಕೂಡಲೇ ಮಾಳಿಗೆ ಅವರು ಸ್ಪಂದಿಸುತ್ತಿದ್ದರು. ವಿಜಯವಾಣಿ, ಸಂಯುಕ್ತ ಕರ್ನಾಟಕ, ಪ್ರಜಾವಾಣಿ ಸೇರಿದಂತೆ ಹತ್ತು ಹಲವಾರು ಪತ್ರಿಕೆಗಳಿಗೆ ಅವರು ನಿರಂತರವಾಗಿ ಲೇಖನಗಳನ್ನು ಬರೆದಿದ್ದಾರೆ. ಆಕಾಶವಾಣಿಯಂತಹ ಸಂಸ್ಥೆಗಳು ಲೇಖನಗಳಿಗೆ ಗೌರವಧನ ನೀಡುತ್ತವೆ, ಆದರೆ ನಮ್ಮಂತಹ ಪತ್ರಿಕೆಗಳಿಂದ ಅವರು ಎಂದಿಗೂ ಪ್ರತಿಫಲ ಅಥವಾ ಗೌರವಧನವನ್ನು ಅಪೇಕ್ಷಿಸಲಿಲ್ಲ. ಅಂತಹ ನಿಸ್ವಾರ್ಥ ಮನೋಭಾವ ಅವರದ್ದು” ಎಂದು ಸ್ಮರಿಸಿದರು.
ಜಾನಪದ ವಿಶ್ವವಿದ್ಯಾಲಯದ ಮೂಲಕ ‘ಗ್ರಾಮ ಚರಿತ್ರೆ ಕೋಶ’ ಸಿದ್ಧಪಡಿಸುವ ಸಂದರ್ಭದಲ್ಲಿ ಮಾಳಿಗೆ ಅವರ ಕಾರ್ಯವೈಖರಿಯನ್ನು ನೆನಪಿಸಿಕೊಂಡ ಅವರು, “ಆ ಕೆಲಸದ ಸಮಯದಲ್ಲಿ ಅವರು ಅತೀವವಾದ ಶಿಸ್ತು ಮತ್ತು ಕಟ್ಟುನಿಟ್ಟಿನ ಸ್ವಭಾವವನ್ನು ತೋರುತ್ತಿದ್ದರು. ಪ್ರತಿಯೊಂದು ಹಳ್ಳಿಯ ಇತಿಹಾಸವನ್ನು ದಾಖಲಿಸುವಾಗ ಅಲ್ಲಿನ ಭಾಷೆ, ಪರಿಸರ, ಪ್ರಕೃತಿ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿ ಕೆಲಸ ಮಾಡುತ್ತಿದ್ದರು. ಕೆಲಸದ ವಿಚಾರದಲ್ಲಿ ಅವರು ತೋರಿಸುತ್ತಿದ್ದ ಆ ಸಿಟ್ಟು ಮತ್ತು ಶಿಸ್ತು ನಮಗೆ ಆರಂಭದಲ್ಲಿ ಕಷ್ಟವೆನಿಸಿದರೂ, ಕೆಲಸದ ಗುಣಮಟ್ಟಕ್ಕಾಗಿ ಅದು ಅನಿವಾರ್ಯವಾಗಿತ್ತು” ಎಂದರು.
“ಮಾಳಿಗೆ ಅವರು ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವ ಗುಣ ಹೊಂದಿದ್ದಾರೆ. ಯಾರದ್ದೇ ಕಷ್ಟವಿರಲಿ, ಅವರು ಅದನ್ನು ಕೇಳಿಸಿಕೊಂಡು ಸ್ಪಂದಿಸುವ ರೀತಿ ನಿಜಕ್ಕೂ ಮಾದರಿ. ಸ್ನೇಹ ಮತ್ತು ನಂಬಿಕೆ ಎಂಬುದು ಅವರ ಜೀವನದ ಎರಡು ಪ್ರಮುಖ ಆಧಾರಸ್ತಂಭಗಳು” ಎಂದು ಗೋವಿಂದಪ್ಪ ಶ್ಲಾಘಿಸಿದರು.
