ಅನೈತಿಕ ಸಂಬಂಧದ ಅಪಪ್ರಚಾರ; ಯುವ ವೈದ್ಯೆ ಆತ್ಮಹತ್ಯೆ
ಹೊಳಲ್ಕೆರೆ: ಅಪಪ್ರಚಾರ ಮತ್ತು ಕಿರುಕುಳದ ನೋವಿನಿಂದ ಮನನೊಂದ ಆಯುರ್ವೇದ ವೈದ್ಯೆ ಡಾ.ಎಂ.ಯು.ನಿಖಿತಾ (23) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಈ ಸುದ್ದಿ ಪಟ್ಟಣದಲ್ಲಿ ಆಘಾತ ಮೂಡಿಸಿದೆ. ಬಸವ ಲೇಔಟ್ ನಿವಾಸಿಯಾಗಿದ್ದ ನಿಖಿತಾ ಅವರು ಬುಧವಾರ ಮಧ್ಯಾಹ್ನ ತಮ್ಮ ಮನೆಯಲ್ಲಿ ಮೃತಪಟ್ಟಿದ್ದಾರೆ.
ತಾಲ್ಲೂಕಿನ ಮಲ್ಲಾಡಿಹಳ್ಳಿಯ ರಾಘವೇಂದ್ರ ಆಯುರ್ವೇದ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎಎಂಎಸ್ ಕೋರ್ಸ್ ಪೂರ್ಣಗೊಳಿಸಿದ್ದ ಅವರು, ಇದೇ ಕಾಲೇಜಿನ ಆಸ್ಪತ್ರೆಯಲ್ಲಿ ಇಂಟರ್ನ್‌ಶಿಪ್ ಮಾಡುತ್ತಿದ್ದರು. ಯುವ ವೈದ್ಯೆಯ ಈ ಅಕಾಲಿಕ ಸಾವು ಕುಟುಂಬಸ್ಥರು, ಸ್ನೇಹಿತರು ಮತ್ತು ಕಾಲೇಜು ವಲಯದಲ್ಲಿ ತೀವ್ರ ದುಃಖಕ್ಕೆ ಕಾರಣವಾಗಿದೆ.
ಸ್ಥಳದಲ್ಲಿ ಪತ್ತೆಯಾದ ಪತ್ರದಲ್ಲಿ, ಕಾಲೇಜಿನ ಕೆಲ ವಿದ್ಯಾರ್ಥಿನಿಯರು ಮತ್ತು ಉಪನ್ಯಾಸಕರ ಪತ್ನಿಯಿಂದ ನಿರಂತರ ಕಿರುಕುಳ ಎದುರಿಸುತ್ತಿದ್ದೇನೆ ಎಂದು ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ.
ವಿದ್ಯಾರ್ಥಿನಿಯರಾದ ಜಿ.ಆರ್.ಅನುಷಾ, ರಕ್ಷಾ, ಚಿನ್ಮಯಿ, ಗ್ರೀಷ್ಮಾ ಮತ್ತು ಸಾಗರ್ ಹಾಗೂ ಉಪನ್ಯಾಸಕ ಡಾ.ರಾಜು ಅವರ ಪತ್ನಿ ನಿಶಾ ರಾಜ್ ಅವರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬರೆದಿದ್ದಾರೆ.
ಉಪನ್ಯಾಸಕರೊಂದಿಗೆ ಅನೈತಿಕ ಸಂಬಂಧವಿದೆ ಎಂಬ ಸುಳ್ಳು ವದಂತಿಗಳನ್ನು ಹರಡಲಾಗುತ್ತಿತ್ತು. ಈ ವಿಚಾರವಾಗಿ ನಿರಂತರವಾಗಿ ಚುಚ್ಚು ಮಾತುಗಳು ಕೇಳಿಬರುತ್ತಿದ್ದವು ಎಂದು ಅವರು ಬರೆದಿರುವುದಾಗಿ ಮೂಲಗಳು ತಿಳಿಸಿವೆ.
ನಾನು ಬಿಎಎಂಎಸ್ ಕೋರ್ಸ್ ಮುಗಿಸಿ ತರಬೇತಿ ಪಡೆಯುತ್ತಿದ್ದೆ. ತರಬೇತಿ ಸಮಯದಲ್ಲಿ ಆಸ್ಪತ್ರೆಯ ಉಪನ್ಯಾಸಕರಾದ ಡಾ.ರಾಜು ಅವರಿಂದ ಚಿಕಿತ್ಸೆ ಬಗ್ಗೆ ಸಲಹೆ, ಮಾಹಿತಿ ಪಡೆದುಕೊಳ್ಳುತ್ತಿದ್ದೆ. ನನ್ನ ಸಹಪಾಠಿಗಳು ಉಪನ್ಯಾಸಕರಾದ ಡಾ.ರಾಜು ಹಾಗೂ ನನ್ನ ಮಧ್ಯೆ ಅನೈತಿಕ ಸಂಬಂಧ ಹೊಂದಿರುವುದಾಗಿ ಅಪಪ್ರಚಾರ ಮಾಡಿ ಎಲ್ಲಾ ಕಡೆ ಸುಳ್ಳು ಸುದ್ದಿ ಹಬ್ಬಿಸಿದ್ದರು. ಈ ಬಗ್ಗೆ ನನಗೆ ಚುಚ್ಚು ಮಾತುಗಳನ್ನಾಡುತ್ತಿದ್ದರು. ಆದರೆ ನನಗೆ ಅಂತಹ ಯಾವುದೇ ಸಂಬಂಧ ಇರಲಿಲ್ಲ. ಸ್ನೇಹಿತರ ಕಿರುಕುಳದಿಂದ ಬೇಸತ್ತು ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ನಿಖಿತಾ ಬರೆದುಕೊಂಡಿದ್ದಾರೆ.
ನಿತ್ಯ ಭವಿಷ್ಯ
https://timesofbayaluseeme.com/thursday-daily-astrolo
ಮೃತೆಯ ತಂದೆ ಉಮಾಶಂಕರ್ ಮಾತನಾಡಿ, ಮಗಳು ಕಿರುಕುಳದ ವಿಚಾರವನ್ನು ನಮಗೆ ತಿಳಿಸಿದ್ದಳು. ನಾವು ಧೈರ್ಯ ಹೇಳಿ ಓದಿನ ಕಡೆ ಗಮನಕೊಡು ಎಂದು ತಿಳಿಸಿದ್ದೆವು. ಆದರೆ ಇಂತಹ ದುರ್ಘಟನೆ ಸಂಭವಿಸಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ.
ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
