ಬಕೆಟ್‌ನಲ್ಲಿ ಮುಳುಗಿ ಮಗು ಸಾವು; ತಾಯಿ ಆತ್ಮಹತ್ಯೆ
ಬೆಂಗಳೂರು: ನಗರದ ಚಂದ್ರಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನಕಲುಕುವ ಘಟನೆಯೊಂದು ನಡೆದಿದ್ದು, 11 ತಿಂಗಳ ಮಗು ನೀರಿನ ಬಕೆಟ್‌ನಲ್ಲಿ ಆಕಸ್ಮಿಕವಾಗಿ ಮುಳುಗಿ ಮೃತಪಟ್ಟಿದೆ.
ಈ ದುರ್ಘಟನೆಯಿಂದ ತೀವ್ರವಾಗಿ ಮನನೊಂದ ತಾಯಿ, ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಮೃತರನ್ನು 29 ವರ್ಷದ ಪ್ರತಿಭಾ ಎಂದು ಗುರುತಿಸಲಾಗಿದ್ದು, ಅವರು ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಮೃತ ಮಗುವಿನ ಹೆಸರು ಅಗಸ್ತ್ಯ ಎಂದು ತಿಳಿದುಬಂದಿದೆ. ಅವರ ಪತಿ ಮಹಾಂತೇಶ್ ಕೂಡ ಟೆಕ್ಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಪ್ರತಿಭಾ ಮನೆಯ ಮೇಲ್ಚಾವಣಿಗೆ ಒಣಗಲು ಹಾಕಿದ್ದ ಬಟ್ಟೆ ತರಲು ತೆರಳಿದ್ದ ವೇಳೆ, ಮಗು ಆಟವಾಡುತ್ತಾ ಬಚ್ಚಲು ಮನೆಯೊಳಗೆ ಹೋಗಿ ನೀರು ತುಂಬಿದ್ದ ಬಕೆಟ್‌ಗೆ ಬಿದ್ದಿದೆ. ಇದರಿಂದ ಮಗು ಮೃತಪಟ್ಟಿದೆ ಎನ್ನಲಾಗಿದೆ.
ಈ ಘಟನೆದಿಂದ ತೀವ್ರವಾಗಿ ನೊಂದ ಪ್ರತಿಭಾ, ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂಬ ಬೇಸರದಲ್ಲಿ ಡೆತ್ ನೋಟ್ ಬರೆದಿಟ್ಟು ಜೀವತ್ಯಾಗ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ರಾತ್ರಿ ಪತಿ ಮಹಾಂತೇಶ್ ಮನೆಗೆ ಮರಳಿದಾಗ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ತನ್ನ ಬಳಿ ಇದ್ದ ಕೀಲಿಯಿಂದ ಬಾಗಿಲು ತೆರೆದಿದ್ದಾರೆ. ಆಗ ಪ್ರತಿಭಾ ಮೃತ ಸ್ಥಿತಿಯಲ್ಲಿ ಕಂಡುಬಂದಿದ್ದು, ಹಾಸಿಗೆಯ ಮೇಲೆ ಮಗುವಿನ ಮೃತದೇಹ ಇತ್ತು ಎಂದು ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಡೆತ್ ನೋಟ್‌ನಲ್ಲಿ, ಬಟ್ಟೆ ತರಲು ತೆರಳಿದ್ದಾಗ ಮಗು ಆಟವಾಡುತ್ತಾ ಒಳಗೆ ಹೋಗಿದೆ. ಬಕೆಟ್‌ನಲ್ಲಿದ್ದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದೆ. ನನ್ನ ಮಗುವನ್ನು ಉಳಿಸಿಕೊಳ್ಳಲು ಆಗಲಿಲ್ಲ. ಅದರ ಸಾವಿಗೆ ನಾನೇ ಕಾರಣ ಎಂದು ಬರೆದಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಈ ಸಂಬಂಧ ಚಂದ್ರಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ
