ಕಾಂಗ್ರೆಸ್ ಮುಖಂಡನ ಶವ ಪತ್ತೆ; ಮೂರು ದಿನದಿಂದ ನಾಪತ್ತೆ
ಚಿತ್ರದುರ್ಗ: ನಗರದ ಹೊರವಲಯದಲ್ಲಿ ಕಾಂಗ್ರೆಸ್ ರೈತ ಮೋರ್ಚಾ ಮುಖಂಡ ಶಿವಲಿಂಗಪ್ಪ (50) ಅವರ ಶವ ಅನುಮಾನಾಸ್ಪದ ಸ್ಥಿತಿಯಲ್ಲಿ ಹೆದ್ದಾರಿ ಪಕ್ಕದ ನಿರ್ಜನ ಪ್ರದೇಶದಲ್ಲಿ ಶವ ಪತ್ತೆಯಾಗಿದೆ.
ಮೃತ ಶಿವಲಿಂಗಪ್ಪ ಅವರು ರಸಗೊಬ್ಬರ ಅಂಗಡಿ ನಡೆಸುತ್ತಿದ್ದು, ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದರು ಎಂದು ತಿಳಿದುಬಂದಿದೆ.
ಶವದ ಮುಖದ ಗುರುತು ಸಿಗದ ಸ್ಥಿತಿಯಲ್ಲಿ ಪತ್ತೆಯಾಗಿರುವುದರಿಂದ ಇದು ಸಹಜ ಸಾವು ಅಲ್ಲ, ಕೊಲೆ ಆಗಿರಬಹುದೆಂಬ ಶಂಕೆ ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ವ್ಯಕ್ತವಾಗಿದೆ.
ಸಂಬಂಧಿಕರು ಸಮಗ್ರ ತನಿಖೆಗೆ ಆಗ್ರಹಿಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಘಟನೆ ಸ್ಥಳಕ್ಕೆ ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
