ಜಿಲ್ಲಾಧಿಕಾರಿ ಬಂಧನಕ್ಕೆ ವಾರಂಟ್ ; ಜಮೀನು ವ್ಯಾಜ್ಯ ಪ್ರಕರಣ
ಮೈಸೂರು: ಭೂ ವ್ಯಾಜ್ಯ ಪ್ರಕರಣದಲ್ಲಿ ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಧಿಕಾರಿಗಳ ವಿರುದ್ಧ ಬಂಧನ ವಾರಂಟ್ ಜಾರಿಯಾಗಿರುವುದು ನಗರದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಮೈಸೂರಿನ ಒಂದನೇ ಅಪರ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ ನ್ಯಾಯಾಲಯವು ಈ ಆದೇಶ ಹೊರಡಿಸಿದ್ದು, ಕುಂಬಾರ ಕೊಪ್ಪಲಿನ ನಿವಾಸಿ ಜಯರಾಮು ಅವರಿಗೆ ಸಂಬಂಧಿಸಿದ ಜಮೀನು ಪ್ರಕರಣದಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಳ್ಳದಿರುವುದನ್ನು ಗಂಭೀರವಾಗಿ ಪರಿಗಣಿಸಿದೆ.
ನಗರದ ಕುಂಬಾರ ಕೊಪ್ಪಲಿನ ಸೀತಾರಾಮೇಗೌಡ ಅವರಿಗೆ ಸೇರಿದ ಹೆಬ್ಬಾಳು ಗ್ರಾಮದ ಸರ್ವೇ ನಂ.155 ಹಾಗೂ 159/1 ವ್ಯಾಪ್ತಿಯ ಐದು ಎಕರೆ ಜಮೀನನ್ನು 1980ರಲ್ಲಿ ನಗರ ಭೂ ಮಿತಿ ಕಾಯಿದೆಯಡಿ ಜಿಲ್ಲಾಡಳಿತ ಸ್ವಾಧೀನಪಡಿಸಿಕೊಂಡಿತ್ತು. ಇದನ್ನು ಪ್ರಶ್ನಿಸಿ ಸೀತಾರಾಮೇಗೌಡ ಅವರ ಪುತ್ರ ಚೆಲುವೇಗೌಡ ಹಾಗೂ ಮೊಮ್ಮಗ ಜಯರಾಮು ನ್ಯಾಯಾಲಯದ ಮೊರೆ ಹೋಗಿದ್ದರು.
ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯವು ಅರ್ಜಿದಾರರ ಪರವಾಗಿ ತೀರ್ಪು ನೀಡಿತ್ತು. ಬಳಿಕ ಜಿಲ್ಲಾಡಳಿತ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರೂ, ಅಲ್ಲಿಯೂ ಕೆಳ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿಯಲಾಯಿತು.
ನ್ಯಾಯಾಲಯದ ಆದೇಶದಂತೆ ಜಮೀನನ್ನು ತಮ್ಮ ಸುಪರ್ದಿಗೆ ನೀಡುವಂತೆ ಭೂ ಮಾಲೀಕರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರೂ, ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಮತ್ತೆ ನ್ಯಾಯಾಲಯದ ಮೊರೆ ಹೋದ ಭೂ ಮಾಲೀಕರ ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಧೀಶರು, ಆದೇಶ ಪಾಲಿಸದ ಜಿಲ್ಲಾಧಿಕಾರಿಗಳ ಬಂಧನಕ್ಕೆ ವಾರಂಟ್ ಜಾರಿಗೊಳಿಸಿ, ಮುಂದಿನ ವಿಚಾರಣೆಯನ್ನು ಏಪ್ರಿಲ್ 24ಕ್ಕೆ ಮುಂದೂಡಿದ್ದಾರೆ ಎಂದು ಜಯರಾಮು ಪರ ವಕೀಲ ನಾಗರಾಜು ತಿಳಿಸಿದ್ದಾರೆ.
ಇತ್ತ, ನ್ಯಾಯಾಲಯ ಹೊರಡಿಸಿರುವ ವಾರಂಟ್ ಪ್ರತಿ ಇನ್ನೂ ಲಭ್ಯವಾಗಿಲ್ಲ. ಪ್ರತಿ ಸಿಕ್ಕ ನಂತರ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.
