ಕಡತಗಳ ವಿಲೇವಾರಿಗೆ ಡೆಡ್ ಲೈನ್ ಫಿಕ್ಸ್ ; ಕರ್ತವ್ಯ ಲೋಪ ಎಸಗಿದರೆ ಶಿಸ್ತು ಕ್ರಮ
ಚಿತ್ರದುರ್ಗ: ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಬುಧವಾರ ನಗರಸಭೆ ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿ, ವಿವಿಧ ವಿಭಾಗಗಳ ಕಾರ್ಯವೈಖರಿಯನ್ನು ಕೂಲಂಕಷವಾಗಿ ಪರಿಶೀಲಿಸಿದರು. ಇ-ಸ್ವತ್ತು ವಿತರಣೆ ಹಾಗೂ ಸಾರ್ವಜನಿಕ ಕೆಲಸಗಳ ವಿಳಂಬಕ್ಕೆ ಅಸಮಧಾನ ವ್ಯಕ್ತಪಡಿಸಿದರು.
ಪರಿಶೀಲನೆ ವೇಳೆ ಸಾರ್ವಜನಿಕರಿಂದ ಕೇಳಿಬಂದ ದೂರುಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು, ಇ-ಸ್ವತ್ತು ವಿತರಣೆಯಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರು. ತಿಂಗಳುಗಟ್ಟಲೆ ಇ-ಸ್ವತ್ತು ಅರ್ಜಿಗಳನ್ನು ಬಾಕಿ ಇಟ್ಟುಕೊಳ್ಳುವುದು ಸರಿಯಲ್ಲ. ನಿಗದಿತ ಕಾಲಮಿತಿಯೊಳಗೆ ಅರ್ಜಿಗಳನ್ನು ಪರಿಶೀಲಿಸಿ ವಿತರಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ತಾಂತ್ರಿಕ ಕಾರಣಗಳನ್ನು ನೀಡಿ ಸಾರ್ವಜನಿಕರನ್ನು ಅಲೆದಾಡಿಸಬಾರದು. ಒಂದು ವೇಳೆ ಸಮಸ್ಯೆಗಳಿದ್ದರೆ ಕೂಡಲೇ ಗಮನಕ್ಕೆ ತಂದು ಬಗೆಹರಿಸಿಬೇಕು ಎಂದರು.
ಕಚೇರಿಯ ಪ್ರತಿ ವಿಭಾಗಕ್ಕೂ ಭೇಟಿ ನೀಡಿ, ಬಾಕಿ ಇರುವ ಕಡತಗಳನ್ನು ಕೂಡಲೇ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಗಡುವು ನೀಡಿದರು. ಕಂಪ್ಯೂಟರ್ ಮತ್ತು ಆನ್‌ಲೈನ್ ಸೌಲಭ್ಯಗಳಿದ್ದರೂ ಕೆಲಸ ವೇಗವಾಗಿ ನಡೆಯುತ್ತಿಲ್ಲದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಕರ್ತವ್ಯ ಲೋಪ ಎಸಗುವ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮದ ಎಚ್ಚರಿಕೆ ನೀಡಿದರು.
ನಗರಸಭೆ ವ್ಯಾಪ್ತಿಯ ಜನಸಾಮಾನ್ಯರಿಗೆ ಯಾವುದೇ ಅಡೆತಡೆಯಿಲ್ಲದೆ ಸೇವೆ ಸಿಗುವಂತೆ ಪಾರದರ್ಶಕ ವ್ಯವಸ್ಥೆ ಜಾರಿಗೆ ತರಬೇಕು ಎಂದು ತಾಕೀತು ಮಾಡಿದರು.
ಜಿಲ್ಲಾಧಿಕಾರಿಗಳ ಭೇಟಿಯಿಂದ ನಗರಸಭೆಯ ಅಧಿಕಾರಿಗಳಲ್ಲಿ ಸಂಚಲನ ಮೂಡಿದ್ದು, ಸಾರ್ವಜನಿಕರು ಈ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪೌರಾಯುಕ್ತೆ ಲಕ್ಷ್ಮಿ, ನಗರಸಭೆ ಕಾರ್ಯಪಾಲಕ ಇಂಜಿನಿಯರ್ ರಾಜು, ಕಂದಾಯ ಅಧಿಕಾರಿ ಪ್ರಕಾಶ್, ಕಚೇರಿ ವ್ಯವಸ್ಥಾಪಕ ಜಯಣ್ಣ ಇದ್ದರು.
