ಪರಿಶಿಷ್ಟ ಜಾತಿ ಒಳಮೀಸಲಾತಿಗೆ ಸಂಬಂಧಿಸಿದಂತೆ ಕರ್ನಾಟಕ ಸಚಿವ ಸಂಪುಟ ಮಹತ್ವದ ನಿರ್ಧಾರ ಕೈಗೊಂಡಿದೆ. ಎಡಗೈಗೆ 5.25%, ಬಲಗೈಗೆ 5.25% ಮತ್ತು ಇತರೆ ಸಮುದಾಯಗಳಿಗೆ 4.5% ಮೀಸಲಾತಿ ಹಂಚಿಕೆ ಮಾಡಲಾಗಿದ್ದು, ಶೀಘ್ರವೇ 56,000+ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ.
ಬೆಂಗಳೂರು, ಏಪ್ರಿಲ್ 24: ಪರಿಶಿಷ್ಟ ಜಾತಿಯ ಎಲ್ಲ ಸಮುದಾಯಗಳಿಗೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಇಂದಿನ ಸಚಿವ ಸಂಪುಟ ಸಭೆ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದ್ದು, ಎಡ, ಬಲ ಹಾಗೂ ಇತರೇ ಸಮುದಾಯಗಳಿಗೆ 5.25:5.25:4.5 ಮೀಸಲಾತಿ ಕಲ್ಪಿಸಲು ಸರ್ವಾನುಮತದಿಂದ ಒಪ್ಪಿಗೆ ನೀಡಿದೆ.
ಒಳಮೀಸಲಾತಿಗೆ ಸಂಬಂಧಿಸಿದಂತೆ ಇಂದು ನಡೆದ ಸಂಪುಟ ಸಭೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಮೀಸಲಾತಿಯನ್ನು ಶೇ.50ಕ್ಕೆ ಮಿತಿಗೊಳಿಸುವ ಹೈಕೋರ್ಟ್ ತೀರ್ಪಿನ ಪ್ರಕಾರ ಪರಿಶಿಷ್ಟ ಜಾತಿಯೊಳಗೆ ಒಳ ಮೀಸಲಾತಿಯನ್ನು ಮರು ನಿಗಧಿಪಡಿಸಿ ಪರಿಶಿಷ್ಟ ಜಾತಿಗೆ 15% ಹಾಗೂ ಪರಿಶಿಷ್ಟ ವರ್ಗಗಳಿಗೆ ಶೇ3 ರಷ್ಟು ಮೀಸಲಾತಿ ನೀಡಲಾಗಿದೆ. ಒಳಮೀಸಲಾತಿಗೆ ರಚಿಸಲಾಗಿದ್ದ ಕಾಯ್ದೆಗೆ ಅನುಗುಣವಾಗಿ 17 % ಮೀಸಲಾತಿಗೆ 6:6:5 ಇದ್ದರೆ, ಇದೀಗ 15 % ಮೀಸಲಾತಿಗೆ 5.3, 5.3 ಹಾಗೂ 4.4 ಮೀಸಲಾತಿಯನ್ನು ನಿಗದಿ ಮಾಡಿ ವರದಿ ನೀಡಲಾಗಿದ್ದು, ಅಂತಿಮವಾಗಿ ಸಚಿವ ಸಂಪುಟ ಸಭೆಯು ಎಡಗೈ ಸಂಬಂಧಿತ ಜಾತಿಗಳಿಗೆ 5.25, ಬಲಗೈ ಜಾತಿಗಳಿಗೆ 5.25 ಬೋವಿ , ಲಂಬಾಣಿ, ಕೊರಚ, ಕೊರಮ ಹಾಗೂ 59 ಅಲೆಮಾರಿ ಜಾತಿಗಳು ಸೇರಿ 4.5 ಮೀಸಲಾತಿ ನೀಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂದರು.
*ಎಲ್ಲಾ ಸಮುದಾಯಗಳಿಗೂ ಸಮಾನ ನ್ಯಾಯ ದೊರೆಯಲಿದೆ*
ಈ ನಿರ್ಧಾರದಿಂದ ಎಲ್ಲ ಸಮುದಾಯಗಳಿಗೂ ಸಮಾನ ನ್ಯಾಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು ನೇಮಕಾತಿ ಮಾಡುವ ಸಂದರ್ಭದಲ್ಲಿ ಒಳಮೀಸಲಾತಿಯನ್ನು ಇದರನ್ವಯ ನಿರ್ಧರಿಸಬೇಕು ಎಂದರು.
ಶೇ. ಆರರಷ್ಟು ಮೀಸಲಾತಿಗೆ ಸಂಬಂಧಿಸಿದಂತೆ ಉಚ್ಛ ನ್ಯಾಯಾಲಯ ಅಂತಿಮವಾಗಿ ತೀರ್ಮಾನ ಕೈಗೊಳ್ಳುವವರೆಗೆ ಬ್ಯಾಕ್ ಲಾಗ್ ಎಂದು ಪರಿಗಣಿಸಲಾಗುವುದು ಎಂದರು.
ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿಗೆ ಸಂಬಂಧಿಸಿದಂತೆ ರಾಷ್ಟ್ರದಲ್ಲಿಯೇ ಮಹತ್ವಪೂರ್ಣ ನಿರ್ಧಾರ ಇದಾಗಿದ್ದು, ರೋಸ್ಟರ್ ಸಂಬಂಧಿಸಿದಂತೆ ಸೂಕ್ತ ಪರಿಹಾರವನ್ನು ಕೈಗೊಂಡು ರಾಜ್ಯದ ಶೋಷಿತ ವರ್ಗಗಳ ಬದುಕಿನಲ್ಲಿ ತಿರುವು ನೀಡಲಾಗುತ್ತಿದೆ ಎಂದರು.
*ನ್ಯಾಯಾಲಯದ ಆದೇಶಕ್ಕೆ ಒಳಪಟ್ಟು ನಿರ್ಧಾರ*
ಒಳಮೀಸಲಾತಿ ಕುರಿತು ಬಹುಕಾಲದಿಂದ ಅನೇಕ ಹೋರಾಟಗಳು ನಡೆದಿವೆ. ನಂತರ ಚಿತ್ರದುರ್ಗದಲ್ಲಿ ನಡೆದ ಪರಿಶಿಷ್ಟ ಜಾತಿ ಸಮಾವೇಶದಲ್ಲಿ ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ಕಲ್ಪಿಸುವ ಐತಿಹಾಸಿಕ ನಿರ್ಧಾರವನ್ನು ಕೈಗೊಳ್ಳಲಾಗಿತ್ತು . ಈ ಸಮಾವೇಶದಲ್ಲಿ 101 ಪರಿಶಿಷ್ಟ ಜಾತಿಗಳು ಸೇರಿದಂತೆ ಅಲೆಮಾರಿ ಸೇರಿದಂತೆ 59 ಜಾತಿಗಳ ಪ್ರತಿನಿಧಿಗಳು ಪಾಲ್ಗೊಂಡು ಒಳಮೀಸಲಾತಿಗೆ ಸರ್ವಾನುಮತದಿಂದ ಒಪ್ಪಿಗೆ ನೀಡಿದ್ದರು ಎಂದು ವಿವರಿಸಿದ ಮುಖ್ಯಮಂತ್ರಿಗಳು ಗೃಹ ಸಚಿವ ಡಾ: ಜಿ. ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ರಚನೆಯಾಗಿದ್ದ ಪ್ರಣಾಳಿಕಾ ಸಮಿತಿಯಲ್ಲಿಯೂ ಒಳಮೀಸಲಾತಿಯನ್ನು ಸರ್ಕಾರ ನೀಡಲಿದೆ ಎಂಬ ಭರವಸೆ ನೀಡಲಾಗಿತ್ತು.
ಸುಪ್ರೀಂ ಕೋರ್ಟ್ ಒಳಮೀಸಲಾತಿ ಕಲ್ಪಿಸುವ ತೀರ್ಮಾನವನ್ನು ಆಯಾ ರಾಜ್ಯಗಳೇ ತೆಗೆದುಕೊಳ್ಳಬಹುದು ಎಂದು ಆದೇಶ ನೀಡಿದ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಅವರ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗ ರಚಿಸಲಾಯಿತು. ಅವರು ನೀಡಿದ ವರದಿ ಆಧರಿಸಿ ಸಚಿವ ಸಂಪುಟವು ಪರಿಶಿಷ್ಟ ಜಾತಿಯ ಬಲ, ಎಡ ಸಮುದಾಯಗಳು ಹಾಗೂ ಇತರೇ ಅಲೆಮಾರಿ ಜಾತಿಗಳಿಗೆ ಕ್ರಮವಾಗಿ 6:6:5 ಮೀಸಲಾತಿ ಕಲ್ಪಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು. ಪರಿಶಿಷ್ಟ ಜಾತಿಗೆ ಒಟ್ಟು 24 % ಅಂದರೆ ಶೇ 7% ರಷ್ಟು ಎಸ್.ಟಿಗೆ ಹಾಗೂ 17% ಎಸ್ .ಸಿ ಸಮುದಾಯಗಳಿಗೆ ಮೀಸಲಿಡಲಾಯಿತು. ಹೀಗಾಗಿ ಒಟ್ಟು ಶೇ 56% ರಷ್ಟು ಮೀಸಲಾತಿ ನೀಡಿದಂತಾಯಿತು.
ನ್ಯಾಯಾಲಯವು ಇಂದಿರಾ ಸಹಾನಿ ಪ್ರಕರಣವನ್ನು ಉಲ್ಲೇಖಿಸಿ ಮೀಸಲಾತಿ ಶೇ 50 ರಷ್ಟು ಮೀರಬಾರದು ಎಂದು ಪುನರುಚ್ಛರಿಸಿತ್ತು ಎಂದರು.
ಆದರೆ ಈ ಮೀಸಲಾತಿಗೆ ಅಪಸ್ವರಗಳು ಎದ್ದ ನಂತರ ಗೊಂದಲ ನಿವಾರಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ತಾಂತ್ರಿಕ ಸಮಿತಿ ರಚಿಸಿ ವರದಿಯನ್ನು ಪಡೆಯಲಾಗಿದೆ. ಅದರಂತೆ ಕೋರ್ಟ್ ಆದೇಶದ ಶೇಕಡ 50 ಮಿತಿಗೆ ಒಳಪಟ್ಟು ಇಂದಿನ ಸಚಿವ ಸಂಪುಟದಲ್ಲಿ ಎಡ, ಬಲ ಹಾಗೂ ಇತರೇ ಸಮುದಾಯಗಳಿಗೆ 5.25:5.25:4.5 ಮೀಸಲಾತಿ ಕಲ್ಪಿಸುವ ದಿಟ್ಟ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.
*ನೇಮಕಾತಿ ಪ್ರಕ್ರಿಯೆ ಶೀಘ್ರವೇ ಪ್ರಾರಂಭಿಸಲಾಗುವುದು*
ಈಗಾಗಲೇ ಬಜೆಟ್ ನಲ್ಲಿ ಘೋಷಿಸಿರುವಂತೆ ಈ ವರ್ಷ 56432 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಿ, ತುರ್ತು ಕ್ರಮ ಕೈಗೊಳ್ಳಲಾಗುವುದು. ನೇಮಕಾತಿಗಳಲ್ಲಿ
ಶೇಕಡ 50ರ ಮೀಸಲಾತಿಯು ನ್ಯಾಯಾಲಯವು ಅಂತಿಮ ತೀರ್ಮಾನ ತೆಗೆದುಕೊಳ್ಳುವವರೆಗೆ. ನಮ್ಮ ಸರ್ಕಾರವು ಈಗಾಗಲೇ ಶೇಕಡ 56ರ ಮೀಸಲಾತಿ ನೀಡಬೇಕೆನ್ನುವ ನಿರ್ಧಾರಕ್ಕೆ ಬದ್ಧವಾಗಿದೆ. ಸಿ ಕೆಟಗರಿಯಲ್ಲಿ ನೇಮಕಾತಿಗೆ ಲಭ್ಯವಾಗುವ ಹುದ್ದೆಗಳಲ್ಲಿ ಶೇ.20ರಷ್ಟು ನ್ನು 59 ಅಲೆಮಾರಿ ಜಾತಿಗಳಿಗೆ ಮೀಸಲಿಡಲು ಸoಪುಟದಲ್ಲಿ ನಿರ್ಧರಿಸಲಾಗಿದೆ. ಈಗ ಪ್ರಸಕ್ತ ತೀರ್ಮಾನದಂತೆ ಸಿ ಕೆಟಗರಿಗೆ 4.5 ಮೀಸಲಾತಿ ಕಲ್ಪಿಸಲಾಗಿದೆ ಎಂದರು.
*ಸರ್ಕಾರದ ಒಕ್ಕೊರಲ ಐತಿಹಾಸಿಕ ತೀರ್ಮಾನ*
ನಮ್ಮ ಸರ್ಕಾರವು ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ನೀತಿಗೆ ಬದ್ಧವಾಗಿದೆ ನೀಡಿದ ವಚನದಂತೆ ನಡೆದು ಕೊಂಡಿದ್ದೇವೆ. ದಲಿತ ಸಂಘಟನೆಗಳು ಸೇರಿದಂತೆ ಇತರ ಸಮುದಾಯಗಳು ಈ ನಿರ್ಧಾರವನ್ನು ಸ್ವಾಗತಿಸುವ ವಿಶ್ವಾಸವನ್ನು ಮುಖ್ಯಮಂತ್ರಿಗಳು ವ್ಯಕ್ತಪಡಿಸಿದರು.
*ಶೇಕಡಾ 24 ಮೀಸಲಾತಿ ಕಲ್ಪಿಸಲು ನಮ್ಮ ಸರ್ಕಾರ ಬದ್ಧವಾಗಿದೆ *
ನಮ್ಮ ಸರ್ಕಾರವು ಶೇಕಡ 24 ಮೀಸಲಾತಿಗೆ ಅಂದರೆ ಪರಿಶಿಷ್ಟ ಜಾತಿ- ಶೇಕಡ 17 ಮತ್ತು ಪರಿಶಿಷ್ಟ ಪಂಗಡ ಶೇಕಡಾ -7 ತೀರ್ಮಾನಕ್ಕೆ ಬದ್ಧವಾಗಿದೆ. ಭವಿಷ್ಯದಲ್ಲಿ ಶೇಕಡ 17ರಷ್ಟು ಮೀಸಲಾತಿ ಕಲ್ಪಿಸಬಹುದು ಎಂದು ಕೋರ್ಟ್ ತೀರ್ಪು ಸರ್ಕಾರದ ಪರವಾಗಿ ಬಂದಲ್ಲಿ ಈ ಹಿಂದೆ ಸಚಿವ ಸಂಪುಟದಲ್ಲಿ ತೆಗೆದುಕೊಂಡಿರುವ 6:6:5 ಮೀಸಲಾತಿ ತೀರ್ಮಾನದಂತೆ ಶೇಕಡ 6ನ್ನು ಬ್ಯಾಕ್ ಲಾಗ್ ಎಂದು ತೀರ್ಮಾನಿಸಲಾಗುವುದು ಎಂದರು.
