ಹಣ, ಆಭರಣಕ್ಕಾಗಿ ಅಜ್ಜಿ ಕೊಂದ ಮೊಮ್ಮಗನಿಗೆ ಸಿಕ್ಕಿದ್ದು ನಕಲಿ ಚಿನ್ನ
ಬಳ್ಳಾರಿ: ಹಣ ಹಾಗೂ ಬಂಗಾರವನ್ನು ಲಪಟಾಯಿಸಲು ಮೊಮ್ಮಗನೇ ಅಜ್ಜಿಯನ್ನು ಕೊಂದು ಹಾಕಿದ ಘಟನೆ ತಾಲೂಕಿನ ಕಾರೇಕಲ್ಲು ಗ್ರಾಮದಲ್ಲಿ ಭಾನುವಾರ ನಡೆದಿದೆ. ವೀರಮ್ಮ (60) ಕೊಲೆ ಆದ ವೃದ್ದೆ. ಸಿರುಗುಪ್ಪ ತಾಲೂಕಿನ ಹಾಗಲೂರು ಗ್ರಾಮದ ಮೃತ ವೀರಮ್ಮನ ಮಗಳ ಮಗ ಎಂ.ವೀರೇಂದ್ರ (21) ಆರೋಪಿ. ಅಜ್ಜಿಯ ಬಳಿ ಚಿನ್ನ ಹಾಗೂ ಹಣ ಇರುವುದನ್ನು ಗಮನಿಸಿರುವ ವೀರೇಂದ್ರ, ತಡರಾತ್ರಿ ನಿದ್ರೆಯಲ್ಲಿದ್ದ ಅಜ್ಜಿಯನ್ನು ಚಾಕುವಿನಿಂದ ಇರಿದು ಕೊಂದು ಚಿನ್ನದ ಆಭರಣ ಹಾಗೂ ₹23 ಸಾವಿರ ನಗದು ದೋಚಿದ್ದಾನೆ. ಸಾಕ್ಷಿ ನಾಶಕ್ಕಾಗಿ ಶವಕ್ಕೆ ಪೆಟ್ರೋಲ್ ಹಾಕಿ ಸುಟ್ಟು ಪರಾರಿಯಾಗಿದ್ದಾನೆ. ವೀರೇಂದ್ರಗೆ ಅಜ್ಜಿ ಚಿನ್ನದ ಆಭರಣಗಳನ್ನು ಒತ್ತೆ ಇಟ್ಟು ಶೆಡ್ ಹಾಕಿಸಿಕೊಳ್ಳಲು ನೆರವಾಗಿದ್ದಳು. ಆರೋಪಿ ಬಂಧನದ ಬಳಿಕ ಸಿಕ್ಕ ಚಿನ್ನದಾಭರಣಗಳನ್ನು ಪರಿಶೀಲಿಸಿದಾಗ ಅವು ನಕಲಿ ಚಿನ್ನದ ಆಭರಣಗಳಾಗಿದ್ದವು. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ
