ಚಿತ್ರದುರ್ಗ: ದೇಶದ ಬಹುತ್ವ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಒಳಗೊಂಡ ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ. ಅವುಗಳ ಬಲದಿಂದಲೇ ಆಡಳಿತ ವ್ಯವಸ್ಥೆ ಸುಸೂತ್ರವಾಗಿ ನಡೆಯುತ್ತಿದೆ ಎಂದು ನಗರದ ಸರ್ಕಾರಿ ಕಲಾ ಕಾಲೇಜು (ಸ್ವಾಯತ್ತ) ಪ್ರಾಂಶುಪಾಲೆ ಪ್ರೊ. ತಾರಿಣಿ ಶುಭದಾಯಿನಿ ಹೇಳಿದರು.
ನಗರದ ಸರ್ಕಾರಿ ಕಲಾ ಕಾಲೇಜಿನ ಅಂಬೇಡ್ಕರ್ ಸಭಾಂಗಣದಲ್ಲಿ ಮಂಗಳವಾರ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜದಲ್ಲಿ ದಲಿತರು ಮತ್ತು ಮಹಿಳೆಯರು ದ್ವಂದ್ವ ಶೋಷಣೆಗೆ ಒಳಗಾಗುತ್ತಿದ್ದಾರೆ. ಹಿಂದುಳಿದ ವರ್ಗಗಳು ಸಂಖ್ಯೆಯಲ್ಲಿ ಹೆಚ್ಚಾಗಿದ್ದರೂ ಅಧಿಕಾರದಿಂದ ವಂಚಿತರಾಗಿ ಅಸ್ಪೃಶ್ಯತೆಯ ಅನುಭವವನ್ನು ಎದುರಿಸುತ್ತಿರುವುದು ಕಳವಳಕಾರಿ ಸಂಗತಿ ಎಂದು ಅವರು ಹೇಳಿದರು.
ಪತ್ರಕರ್ತ ಪಿ. ಲಂಕೇಶ್ ಅವರ ‘ಮುಟ್ಟಿಸಿಕೊಂಡವರು’ ಕಥೆಯನ್ನು ಉಲ್ಲೇಖಿಸಿದ ಅವರು, ಜಾತಿ ವ್ಯವಸ್ಥೆಯನ್ನು ಒಂದು ಸಾಮಾಜಿಕ ರೂಪಕವಾಗಿ ಕಥೆಯಲ್ಲಿ ಚಿತ್ರಿಸಲಾಗಿದೆ ಎಂದರು. ಹೊರಗಡೆ ಕಾಣಿಸದ ಜಾತಿ ಭೇದಗಳು ಮನೆಯೊಳಗೇ ಆರಂಭವಾಗುತ್ತವೆ. ಆದ್ದರಿಂದ ಸಮಾಜಕ್ಕೆ ಅಂಟಿಕೊಂಡಿರುವ ಜಾತಿ, ಭ್ರಷ್ಟಾಚಾರ ಮತ್ತು ಶ್ರೇಷ್ಠತೆಯ ವ್ಯಸನದಂತಹ ರೋಗಗಳನ್ನು ನಿವಾರಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ರಾಜ್ಯಶಾಸ್ತ್ರ ಚಿಂತಕ ಪ್ರೊ. ಗಂಗಾಧರ ಮಾತನಾಡಿ, ಜಾತಿ ಭೇದ, ಅಸ್ಪೃಶ್ಯತಾ ಆಚರಣೆ, ಕೆರೆಯ ನೀರಿನ ನಿರಾಕರಣೆ, ಗಾಡಿಯಲ್ಲಿ ಪ್ರಯಾಣಕ್ಕೆ ತಡೆ, ಕ್ಷೌರಿಕ ಸೇವೆಯ ನಿರಾಕರಣೆ ಸೇರಿದಂತೆ ಅಂಬೇಡ್ಕರ್ ಅವರು ಅನುಭವಿಸಿದ ಘಟನೆಗಳೇ ಅವರ ಚಿಂತನೆಗೆ ಹೊಸ ದಿಕ್ಕು ನೀಡಿದವು ಎಂದು ಹೇಳಿದರು.
ಅಂಬೇಡ್ಕರ್ ಅವರ ಆತ್ಮಕಥನ ‘ವೀಸಾಗಾಗಿ ಕಾಯುವಿಕೆ’ ಹಾಗೂ ಗೌತಮ ಬುದ್ಧ ಅವರ ಚಿಂತನೆಗಳು ಸಂವಿಧಾನ ರಚನೆಗೆ ಪ್ರೇರಣೆ ನೀಡಿವೆ. ಅವರ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರೂ ಓದಿದಾಗ ಮಾತ್ರ ಅಂಬೇಡ್ಕರ್ ಅವರ ನಿಜವಾದ ಮಹತ್ವ ಅರ್ಥವಾಗುತ್ತದೆ ಎಂದು ತಿಳಿಸಿದರು.
ಎನ್‌ಎಸ್‌ಎಸ್ ಅಧಿಕಾರಿ ಪ್ರೊ. ಪ್ರಸಾದ್ ಹಾಗೂ ಕನ್ನಡ ಸಹ ಪ್ರಾಧ್ಯಾಪಕ ಪ್ರೊ. ಚಿತ್ತಯ್ಯ ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಅರ್ಪಿಸಲಾಯಿತು.
ಪರೀಕ್ಷಾ ನಿಯಂತ್ರಣ ಅಧಿಕಾರಿ ಪ್ರೊ. ಎಸ್.ಬಿ. ಶಿವಪ್ರಸಾದ್, ಐಕ್ಯೂಎಸಿ ಸಮಿತಿ ಸಂಚಾಲಕಿ ಪ್ರೊ. ಕೆ. ಲೀಲಾವತಿ, ಪ್ರಾಧ್ಯಾಪಕರ ಸಂಘದ ಅಧ್ಯಕ್ಷ ಪ್ರೊ. ಹನುಮಂತಪ್ಪ, ಮುಖ್ಯ ಅಧೀಕ್ಷಕ ಹರೀಶ್ ಬಾಬುರೆಡ್ಡಿ ಹಾಗೂ ವಾಣಿಜ್ಯಶಾಸ್ತ್ರ ವಿಭಾಗದ ಪ್ರೊ. ಸೌಮ್ಯ ಉಪಸ್ಥಿತರಿದ್ದರು.
