Close Menu
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
What's Hot

ಚುನಾವಣಾ ಫಲಿತಾಂಶದ ಆಳದಲ್ಲಿ: ಸಂಖ್ಯೆಗಳ ಅಬ್ಬರವೋ ಅಥವಾ ಮೌಲ್ಯಗಳ ಪತನವೋ?

05/05/2026 ರ ನಿತ್ಯ ಭವಿಷ್ಯ 🔮

ಸಿದ್ದರಾಮಯ್ಯ ನಾಯಕತ್ವಕ್ಕೆ ಸಿಕ್ಕ ಜಯವಿದು: ಉಪಚುನಾವಣೆ ಗೆಲುವಿನ ಬಗ್ಗೆ ಎಚ್.ಆಂಜನೇಯ ಹರ್ಷ

Facebook X (Twitter) Instagram
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
Facebook X (Twitter) Instagram
Times Of Bayaluseeme
  • ಮುಖಪುಟ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ರಾಜಕೀಯ
  • ರಾಜ್ಯ
  • ಸಿನಿಮಾ
Subscribe
Times Of Bayaluseeme
Home»ಮುಖಪುಟ»ಚುನಾವಣಾ ಫಲಿತಾಂಶದ ಆಳದಲ್ಲಿ: ಸಂಖ್ಯೆಗಳ ಅಬ್ಬರವೋ ಅಥವಾ ಮೌಲ್ಯಗಳ ಪತನವೋ?
ಮುಖಪುಟ

ಚುನಾವಣಾ ಫಲಿತಾಂಶದ ಆಳದಲ್ಲಿ: ಸಂಖ್ಯೆಗಳ ಅಬ್ಬರವೋ ಅಥವಾ ಮೌಲ್ಯಗಳ ಪತನವೋ?

Times Of Bayaluseeme StaffBy Times Of Bayaluseeme StaffMay 5, 2026No Comments5 Mins Read
Share WhatsApp Facebook Twitter Threads Telegram
Follow Us
Facebook Instagram
election-results-analysis-values-vs-numbers-kannada
Share
WhatsApp Twitter Facebook Telegram

ಚುನಾವಣೆ ಎಂದರೆ ಯುದ್ಧವಲ್ಲ, ಅದು ನಮ್ಮ ನಡುವಿನ ಒಂದು ಸಣ್ಣ ಸ್ಪರ್ಧೆ ಮಾತ್ರ. ಗೆದ್ದವರ ಅಟ್ಟಹಾಸ, ಸೋತವರ ಮೇಲಿನ ಅವಹೇಳನಕ್ಕಿಂತ ಮಿಗಿಲಾದ ಮಾನವೀಯ ಮೌಲ್ಯಗಳು ನಮ್ಮ ಸಮಾಜಕ್ಕೆ ಬೇಕಿದೆ. ಚುನಾವಣಾ ವ್ಯವಸ್ಥೆಯಲ್ಲಿ ಆಗಬೇಕಾದ ಬದಲಾವಣೆ ಮತ್ತು ಮಾಧ್ಯಮಗಳ ಜವಾಬ್ದಾರಿಯ ಬಗ್ಗೆ ವಿವೇಕಾನಂದ ಎಚ್.ಕೆ. ಅವರ ಸಮಾಜಮುಖಿ ಚಿಂತನೆ ಇಲ್ಲಿದೆ

ಗೆದ್ದವರಿಗೆ ಅಭಿನಂದಿಸುತ್ತಾ,
ಸೋತವರಿಗೆ ಸಾಂತ್ವನ ಹೇಳುತ್ತಾ,
ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ,
ಸಂವಿಧಾನಕ್ಕೆ ಸಲಾಂ ಹೊಡೆಯುತ್ತಾ,
ನಮ್ಮ ಮುಗ್ದತೆ ಮತ್ತು ಮೂರ್ಖತನ ಕಂಡು ಮುಸಿ ಮುಸಿ ನಗುತ್ತಾ……..

ಚುನಾವಣೆಯನ್ನು ಮೌಲ್ಯಗಳ ಮೇಲೆ ಅಳೆಯಬೇಕೆ, ಸಂಖ್ಯೆಗಳ ಮೇಲೆ ಅಳೆಯಬೇಕೆ, ಫಲಿತಾಂಶಗಳ ಮೇಲೆ ಅಳೆಯಬೇಕೆ, ಅಧಿಕಾರ ವಹಿಸಿಕೊಂಡರ ಸಾಮರ್ಥ್ಯದ ಮೇಲೆ ಅಳೆಯಬೇಕೆ ಒಮ್ಮೆ ಮುಕ್ತವಾಗಿ ಆಲೋಚಿಸಿ. ಇದು ವಿದೇಶದ ಶತ್ರುಗಳ ಮೇಲಿನ ವಿಜಯವಲ್ಲ. ನಮ್ಮ ನಡುವಿನ ಒಂದು ಸಣ್ಣ ಸ್ಪರ್ಧೆ ಮಾತ್ರ….

ಇಲ್ಲಿಯವರೆಗೆ ಬಹುತೇಕ ಮಾಧ್ಯಮಗಳು ಮತ್ತು ರಾಜಕೀಯ ಆಸಕ್ತರು ಮತಗಳು ಮತ್ತು ಪಕ್ಷಗಳ ಆಧಾರದ ಮೇಲೆ ಫಲಿತಾಂಶವನ್ನು ವಿಮರ್ಶಿಸಿದ್ದಾರೆ ಮತ್ತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದನ್ನು ಮೀರಿ ಆಲೋಚಿಸಬಹುದಾದ ಸಾಧ್ಯತೆಯ ಹುಡುಕಾಟದಲ್ಲಿ…….

ಪ್ರಜಾಪ್ರಭುತ್ವದ ಯಶಸ್ಸಿಗೆ ಚುನಾವಣೆ ಎಂಬ ವಿಧಾನವೇ ಮೂಲಾಧಾರ. ಆದರೆ ಅದೇ ಮಲಿನವಾಗುತ್ತಾ ಭಾರತೀಯ ಸಂಸ್ಕೃತಿ ಮತ್ತು ಸಮಾಜಕ್ಕೆ ಮಾರಕವಾಗುತ್ತಿದೆಯೇ ಎಂಬ ಅನುಮಾನದ ಹುತ್ತದೊಳಗೆ ಕೈ ಹಾಕಿದಾಗ…

ಬಾಕ್ಸಿಂಗ್‌‌, ಕಬಡ್ಡಿ, ಪುಟ್ ಬಾಲ್ ಸೇರಿ ಯಾವುದೇ ಕ್ರೀಡೆಯಲ್ಲಿ ಗೆದ್ದ ವ್ಯಕ್ತಿ ಮಾಡುವ ಮೊದಲ ಕೆಲಸ ಸೋತವನ ಕೈ ಕುಲುಕುವುದು ಮತ್ತು ಸಾಧ್ಯವಾದರೆ ಅವರನ್ನು ಅಪ್ಪಿಕೊಳ್ಳುವುದು. ಒಂದು ಸ್ಪರ್ಧೆಯ ಮೂಲಭೂತ ಲಕ್ಷಣವೇ ಅದು.

ಆದರೆ ಈ ಚುನಾವಣೆ ಎಂಬ ಪ್ರಕ್ರಿಯೆಯಲ್ಲಿ ಅನೇಕ ವಂಶಗಳಿಗೆ ಹರಡುವಷ್ಟು ದ್ವೇಷ ಅಸೂಯೆ ಸೇಡು ಹಗೆತನ ಮೋಸ ವಂಚನೆ ಕ್ರೌರ್ಯ ಕುತಂತ್ರ ಅಡಗಿರುವುದನ್ನು ಸಾಮಾನ್ಯವಾಗಿ ಕಾಣಬಹುದು. ಚುನಾವಣೆ ಎಂಬುದು ವ್ಯಕ್ತಿಗತ ಮತ್ತು ಸಾಮಾಜಿಕ ವಿಭಜನೆಗೆ ಕಾರಣವಾಗುವ ಬೀಜಗಳನ್ನು ಉತ್ಪಾದಿಸಿ ಅದು ಮೊಳಕೆಯೊಡೆಯುಂತೆ ಮಾಡಿ ಮುಂದೆ ಅದು ಹೆಮ್ಮರವಾಗಿ ಬೆಳೆದು ಅದರ ವಿಷ ಫಲವನ್ನು ಮುಂದಿನ ಪೀಳಿಗೆ ಉಣ್ಣುವಂತೆ ಮಾಡುತ್ತಿದೆ.

ಈಗಾಗಲೇ ಭಾರತೀಯ ಸಾಮಾಜಿಕ ರಚನೆಯಲ್ಲಿಯೇ ಅನೇಕ ತಾರತಮ್ಯ ಮತ್ತು ವಿಭಜನಾತ್ಮಕ ಪದರಗಳು ಸಾಕಷ್ಟು ಇವೆ. ಈಗ ಈ ಚುನಾವಣಾ ವ್ಯವಸ್ಥೆ…..
ಜಾತಿಯ ಆಧಾರದಲ್ಲಿ,
ಧರ್ಮದ ವಿಚಾರದಲ್ಲಿ,
ಭಾಷೆಯ ವಿಷಯದಲ್ಲಿ,
ಪ್ರದೇಶದ ಮೂಲದಲ್ಲಿ,
ಪಕ್ಷಗಳ ಸಿದ್ಧಾಂತಗಳಲ್ಲಿ,
ಹಣದ ಆಮಿಷದಲ್ಲಿ,
ತೋಳ್ಬಲದ ಪ್ರದರ್ಶನದಲ್ಲಿ,
ಬೆದರಿಕೆಯ ಒತ್ತಡದಲ್ಲಿ,
ತಂತ್ರಜ್ಞಾನದ ಕುತಂತ್ರದಲ್ಲಿ,
ವಂಚನೆಯ ಜಾಲದಲ್ಲಿ,
ಸುಳ್ಳಿನ ಭರವಸೆಯಲ್ಲಿ….

ಹೀಗೆ ನಾನಾ ರೀತಿಯ ವಿಭಜನೆಯಲ್ಲಿ ಬಂಧಿಯಾಗಿರುವಾಗ ಚುನಾವಣಾ ಪ್ರಕ್ರಿಯೆ ಇದಕ್ಕೆ ಮತ್ತಷ್ಟು ತುಪ್ಪ ಸುರಿದು ಬೆಂಕಿ ಹೊತ್ತಿಸುತ್ತಿದೆ.

ಒಂದು ಆಶ್ಚರ್ಯಕರ ವಿಷಯವೆಂದರೆ ಚುನಾವಣೆಯಲ್ಲಿ ಒಬ್ಬರಿಗೊಬ್ಬರು ಸ್ಪರ್ಧಿಸುವುದು ನಮ್ಮದೇ ಜನರು. ಹೆಚ್ಚು ಕಡಿಮೆ ಒಂದೇ ಊರಿನ ಒಂದೇ ಜಾತಿಯ ಒಂದೇ ಭಾಷೆಯ ಒಂದೇ ಧರ್ಮದ ಒಂದೇ ರಾಜ್ಯದ ಜನರ ನಡುವೆಯೇ ಸ್ಪರ್ಧೆ ನಡೆದರೂ ಈ ಮಟ್ಟದ ದ್ವೇಷ ಅಸೂಯೆ ಹುಟ್ಟುವುದು ಹೇಗೆ ಸಾಧ್ಯ. ಕೆಲವು ಕಡೆ ಹೊಡೆದಾಟ ಮತ್ತು ಕೊಲೆಗಳು ಸಹ ನಡೆಯುತ್ತವೆ.

ಇದರ ಪರಿಣಾಮ ತುಂಬಾ ಅಪಾಯಕಾರಿ ಅಂಶಗಳು ಕಂಡುಬರುತ್ತಿವೆ. ಅಧಿಕಾರ ವಿಕೇಂದ್ರೀಕರಣ ಪ್ರಜಾಪ್ರಭುತ್ವದ ಪರಿಕಲ್ಪನೆಗೆ ಅತ್ಯುತ್ತಮ ವಿಧಾನವಾದರು ಗ್ರಾಮ ಗ್ರಾಮಗಳಲ್ಲಿ ಚುನಾವಣಾ ಕಾರಣದಿಂದ ಸಾಕಷ್ಟು ವೈಮನಸ್ಯ ಮೂಡುತ್ತಿರುವುದು ಸಹ ಕಳವಳಕಾರಿ. ಇದು ಸಾಮಾಜಿಕ ಸಾಮರಸ್ಯವನ್ನು ಮತ್ತಷ್ಟು ಹದಗೆಡಿಸುತ್ತಿದೆ.

ಜೊತೆಗೆ ಎಲೆಕ್ಟ್ರಾನಿಕ್ ಮಾಧ್ಯಮಗಳ ಕುಚೇಷ್ಟೆಯ ಕಾರಣ ಚುನಾವಣೆ ಎಂಬುದು ಒಂದು ಯುದ್ಧದ ರೀತಿ ಬಿಂಬಿತವಾಗಿದೆ ಮತ್ತು ಅನಾವಶ್ಯಕ ಕುತೂಹಲ ಕೆರಳಿಸಿ ದೀರ್ಘಕಾಲ ಎಳೆಯುತ್ತಿದೆ.

ಇದಕ್ಕೆ ಪರಿಹಾರ ಅಥವಾ ಪರ್ಯಾಯ ಏನು ಎಂಬ ಪ್ರಶ್ನೆ ಕಾಡುತ್ತದೆ.

ಪರ್ಯಾಯ ಏನೂ ಇಲ್ಲ. ಚುನಾವಣಾ ಪದ್ದತಿಯೇ ಅತ್ಯುತ್ತಮ. ಆದರೆ ಪರಿಹಾರ ಸಾಧ್ಯವಿದೆ.

ಚುನಾವಣೆಯನ್ನು ಯುದ್ಧದ ರೀತಿ ಬಿಂಬಿಸುವುದೇ ಮೊದಲ ತಪ್ಪು. ಕ್ರೀಡೆ, ಪರೀಕ್ಷೆ, ಉದ್ಯೋಗದ ರೀತಿ ಅದು ನಮ್ಮ ನಡುವಿನ ಸ್ಪರ್ಧೆ ಎಂದು ಭಾವಿಸುವಂತಾಗಬೇಕು.

ಗೆದ್ದವರು ಸೋತವರನ್ನು ತಬ್ಬಿಕೊಂಡು
ಶಾಲು ಹೊದಿಸಬೇಕೆ ಹೊರತು ಅವರ ಮನೆಯ ಮುಂದೆ ಪಟಾಕಿ ಹೊಡೆದು ಸಂಭ್ರಮಿಸಿ ಅವರನ್ನು ಮತ್ತಷ್ಟು ಮಾನಸಿಕ ಹಿಂಸೆಗೆ ದೂಡಬಾರದು.

ಚುನಾವಣಾ ಆಯೋಗವೇ ಪ್ರಚಾರದ ನೇತೃತ್ವ ವಹಿಸಬೇಕು. ಅಭ್ಯರ್ಥಿಗಳ ವೈಯಕ್ತಿಕ ವಿವರ, ಪಕ್ಷ, ಚಿನ್ಹೆ ಮತ್ತು ಭರವಸೆಗಳನ್ನು ತಾನೇ ಮನೆ ಮನೆಗೆ ತಲುಪಿಸಬೇಕು.

ಅಭ್ಯರ್ಥಿಗಳು ಕೇವಲ ಎಲ್ಲಾ ರೀತಿಯ ಮಾಧ್ಯಮಗಳ ಮೂಲಕ ಮಾತ್ರ ಕೇವಲ 10 ದಿನ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬೇಕು. ಯಾವುದೇ ಬಹಿರಂಗ ಸಭೆ ಸಮಾರಂಭಗಳಿಗೆ ಅವಕಾಶ ನೀಡಬಾರದು.

ಅಭ್ಯರ್ಥಿಗಳು ತನ್ನ ಬಗ್ಗೆ ಮಾತ್ರ ಮಾತನಾಡಬೇಕು. ವಿರೋಧಿಗಳನ್ನು ಹೆಚ್ಚಾಗಿ ಟೀಕಿಸಬಾರದು. ಒಂದು ವೇಳೆ ಅದನ್ನು ಮೀರಿದರೆ ಚುನಾವಣಾ ಆಯೋಗ ಕ್ರೀಡಾ ಅಂಪೈರುಗಳ ರೀತಿ ತಕ್ಷಣವೇ ಡಿಬಾರ್ ಮಾಡುವಂತಿರಬೇಕು.

ಚುನಾವಣೆಯಲ್ಲಿ ಆಯ್ಕೆಯಾದ ಜನ ಪ್ರತಿನಿಧಿ ಆ ತಕ್ಷಣದಿಂದಲೇ ತನ್ನ ಮಾತೃ ಪಕ್ಷದ ಸದಸ್ಯತ್ವವನ್ನು ಕಳೆದುಕೊಳ್ಳುತ್ತಾನೆ. ಈಗ ಆತನಿಗೆ ಯಾವುದೇ ಪಕ್ಷ ಇರುವುದಿಲ್ಲ. ಆತ ಎಲ್ಲಾ ಜನರ ಪ್ರತಿನಿಧಿ ಮಾತ್ರ. ಮತ್ತೆ ಚುನಾವಣೆ ಘೋಷಣೆಯಾದ ಮೇಲೆ ಒಂದು ಪಕ್ಷ ಸೇರಬಹುದು.

ಮಾಧ್ಯಮಗಳು ಅಥವಾ ಬೇರೆ ಯಾರೂ ಚುನಾವಣಾ ಸಮೀಕ್ಷೆ ಮಾಡದಂತೆ ನಿಷೇಧ ಹೇರಬೇಕು. ಅದಕ್ಕಾಗಿ ಸಾಕಷ್ಟು ಶ್ರಮ ಮತ್ತು ಹಣ ವ್ಯರ್ಥವಾಗುವುದನ್ನು ತಡೆಯಬೇಕು. ಹದಿನೈದು ದಿನದಲ್ಲಿ ಬರುವ ಫಲಿತಾಂಶಕ್ಕೆ ಅಷ್ಟು ಶ್ರಮ ಏಕೆ. ಸ್ವಲ್ಪ ತಾಳ್ಮೆ ಇದ್ದರೆ ಸಾಕು.

ಸ್ಪರ್ಧೆ ಒಂದು ಪ್ರಯತ್ನ ಮತ್ತು ಅನುಭವ. ಅದರಲ್ಲಿ ಸೋಲು ಗೆಲುವು ಅಷ್ಟು ಮುಖ್ಯವಲ್ಲ. ಗೆದ್ದ ತಕ್ಷಣ ಆತ ದೊಡ್ಡ ಸಾಧಕನಲ್ಲ. ಸೋತ ತಕ್ಷಣ ಆತ ನಿರುಪಯುಕ್ತನಲ್ಲ. ಇಬ್ಬರೂ ನಮ್ಮವರೇ. ಅವರ ಬಗ್ಗೆ ಸಹಾನುಭೂತಿ ಇರಲಿ.

ಅಧಿಕಾರ ಯಾರಿಗೂ ಶಾಶ್ವತವಲ್ಲ. ಸೇವೆ ಮಾತ್ರ ಶಾಶ್ವತ. ಗೆದ್ದ ತಕ್ಷಣ ನೀವು ನಿಮಗೆ ಇಷ್ಟ ಬಂದಂತೆ ಕೆಲಸ ಮಾಡಲು ಸಾಧ್ಯವಿಲ್ಲ. ಸಂವಿಧಾನದ ರೀತಿಯಲ್ಲಿಯೇ ಕಾರ್ಯ ನಿರ್ವಹಿಸಬೇಕು ಯಾರೇ ಆದರೂ…..

ದುರಾದೃಷ್ಟವಶಾತ್ ಮಾಧ್ಯಮಗಳು ಜನರನ್ನು ಸುಶಿಕ್ಷಿತರನ್ನಾಗಿ ಮಾಡುವ ಬದಲು ಚುನಾವಣಾ ವಿಮರ್ಶೆಗಳನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ಮಾಡಿ ಫಲಿತಾಂಶಗಳ ಆಧಾರದ ಮೇಲೆ ಗೆದ್ದವರನ್ನು ಇಂದ್ರ ಚಂದ್ರ ಚಾಣಕ್ಯ ಎಂದು ಹೊಗಳಿ ಸೋತವರನ್ನು ಅತ್ಯಂತ ದಡ್ಡ ಎಂದು ನಿಂದಿಸಿ ಗೆಲುವೇ ಚುನಾವಣೆಯ ಮಾನದಂಡ. ಏನೇ ಮಾಡಿ ಗೆಲುವಷ್ಟೇ ಮುಖ್ಯ ಎಂದು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ.
ಗೆಲ್ಲುವ ಮಾರ್ಗ ಒಳ್ಳೆಯದಿರಬೇಕು ಎಂಬುದನ್ನು ಹೇಳುವುದೇ ಇಲ್ಲ. ಕೆಟ್ಟ ಮಾರ್ಗದ ಗೆಲುವು ದೇಶ ದ್ರೋಹ, ಧರ್ಮ ದ್ರೋಹ, ಸಂವಿಧಾನದ ದ್ರೋಹ ಎಂದು ಮಾಧ್ಯಮಗಳು ಹೇಳದೆ ಅವು ಮಾನವೀಯತೆಗೆ ದ್ರೋಹ ಮಾಡುತ್ತಿವೆ.

ಇಲ್ಲಿನ ಎಲ್ಲಾ ಪಕ್ಷದವರು ಭಾರತೀಯರೇ ಮತ್ತು ನಮ್ಮವರೇ. ಗೆದ್ದವರು ನಮ್ಮವರೇ ಸೋತವರು ನಮ್ಮವರೇ.
ಸ್ಪರ್ಧೆಗಳು ನಮ್ಮ ನಡುವೆಯೇ, ಸೋಲು ಗೆಲುವು ನಮ್ಮ ನಡುವೆಯೇ,
ಪರಿಣಾಮ ಮತ್ತು ಫಲಿತಾಂಶ ನಮ್ಮ ನಡುವೆಯೇ. ಅದಕ್ಕಾಗಿ ಏಕಿಷ್ಟು ಕಿಚ್ಚು…….

ಮಾಧ್ಯಮಗಳು ಚುನಾವಣಾ ಫಲಿತಾಂಶವನ್ನು ವಿವೇಚನೆ ಮರೆತು ಹೀಗಿಯೇ ವಿಶ್ಲೇಷಿಸುತ್ತವೆ……‌‌‌….

ಗೆದ್ದ ವ್ಯಕ್ತಿ ಮತ್ತು ಪಕ್ಷದ ಎಲ್ಲಾ Weakness ಮತ್ತು ಕೆಟ್ಟ ಗುಣಗಳನ್ನೂ ಸೇರಿಸಿ ಎಲ್ಲವೂ ಅವರುಗಳ Strength ಎಂತಲೂ,
ಎಲ್ಲಾ ತಂತ್ರ, ಮಂತ್ರ, ಕುತಂತ್ರಗಳನ್ನು ಅವರ ಬಹುದೊಡ್ಡ ಸಾಮರ್ಥ್ಯ ಎಂತಲೂ ಚಿತ್ರಿಸುತ್ತವೆ.

ಗೆಲವು ಜವಾಬ್ದಾರಿಯ ಮೊದಲ ಮೆಟ್ಟಿಲು ಎಂಬುದನ್ನು ಮರೆತು, ಯಾರೋ ವ್ಯಕ್ತಿ ಅಥವಾ ಪಕ್ಷದ ಗೆಲುವೇ ಪ್ರಜಾಪ್ರಭುತ್ವ ಯಶಸ್ಸು ಎಂದು ಮೂರ್ಖತನದಿಂದ ವಿಶ್ಲೇಷಣೆ ಮಾಡುತ್ತಾರೆ.

ಹಾಗೆಯೇ ಸೋತ ವ್ಯಕ್ತಿ ಮತ್ತು ಪಕ್ಷದ Strength ಗಳನ್ನು, ಉತ್ತಮ ನಡೆಗಳನ್ನೂ ಸೇರಿಸಿ ಎಲ್ಲವೂ ಅವರ ಅಸಾಮರ್ಥ್ಯ ಎಂದೇ ಬಿಂಬಿಸಲಾಗುತ್ತದೆ.
ಆತನನ್ನು ಅಪ್ರಯೋಜಕ ಎಂದು ಬಹಿರಂಗವಾಗಿಯೇ ಹೇಳಲಾಗುತ್ತದೆ.

ಅದಕ್ಕೆ ಅವರಿಗಿರುವ ಒಂದೇ ಕಾರಣ ಫಲಿತಾಂಶ.
ಅಂದರೆ ಫಲಿತಾಂಶದ ಆಧಾರದ ಮೇಲೆ ನಮ್ಮ ವ್ಯಕ್ತಿತ್ವವನ್ನು ನಿರ್ಧರಿಸಲಾಗುತ್ತದೆ.

ಇದು ಕೇವಲ ರಾಜಕೀಯ ಸೋಲು ಗೆಲುವಿಗೆ ಮಾತ್ರವಲ್ಲ. ನಮ್ಮ ಇಡೀ ಸಮಾಜ ನಮ್ಮನ್ನು ಅಳೆಯುವುದು ಇದೇ ಆಧಾರದ ಮೇಲೆಯೇ.

ನಿಜವಾದ ಗುಣ ಮೌಲ್ಯಗಳನ್ನು ಬಹಳಷ್ಟು ಜನ ಗುರುತಿಸುವುದೇ ಇಲ್ಲ.
ಯಶಸ್ಸಿಗಾಗಿ ನೀವು ಅನುಸರಿಸುವ ಮಾರ್ಗವನ್ನು ಜನ ಗಮನಿಸುವುದಿಲ್ಲ. ಅದು ಎಷ್ಟೇ ಕೆಟ್ಟದ್ದಾಗಿದ್ದರೂ ಫಲಿತಾಂಶ ನಿಮ್ಮ ಪರವಾಗಿದ್ದರೆ ಹಾಡಿ ಹೊಗಳಲಾಗುತ್ತದೆ.

ಆ ಕಾರಣದಿಂದಾಗಿಯೇ ನಮ್ಮ ಸಮಾಜದಲ್ಲಿ ಯಶಸ್ಸಿಗಾಗಿ ಎಲ್ಲಾ ರೀತಿಯ ವಾಮ ಮಾರ್ಗಗಳನ್ನು ಅನುಸರಿಸುತ್ತಾರೆ. ಯಾವುದೇ ಎಗ್ಗಿಲ್ಲದೆ ಎಷ್ಟೇ ಅಸಹ್ಯವಾದರೂ ಅದನ್ನು ಮಾಡಿ ಯಶಸ್ವಿಯಾಗಲು ಪ್ರಯತ್ನಿಸುತ್ತಾರೆ.

ಅದು ಹಣವೋ, ಅಧಿಕಾರವೋ, ಜನಪ್ರಿಯತೆಯೋ ಏನೇ ಆಗಿರಬಹುದು. ಫಲಿತಾಂಶದ ಆಧಾರದ ಮೇಲೆಯೇ ನಿಮ್ಮ ಬೆಲೆ ನಿರ್ಧಾರವಾಗುತ್ತದೆ.

ಇದು ಖಂಡಿತ ಅಪಾಯಕಾರಿ.
ಸೋಲು ಗೆಲುವುಗಳು ಕ್ರಿಯೆ – ಪ್ರಕ್ರಿಯೆಗಳು ಮತ್ತು ಬಹುಮುಖ್ಯವಾಗಿ ಅವು ನಮ್ಮಗಳ ನಡುವೆಯೇ ನಡೆಯುವ ಬದುಕಿನ ಪಯಣದ ಒಂದು ಭಾಗ.

ಸೋತ ಮಾತ್ರಕ್ಕೆ ನಾವು ಅಸಮರ್ಥರು – ಕೆಟ್ಟವರು – ಕೆಲಸಕ್ಕೆ ಬಾರದವರು ಆಗುವುದಿಲ್ಲ. ಆ ಕ್ಷಣಕ್ಕೆ ಫಲಿತಾಂಶ – ಪರಿಸ್ಥಿತಿ ನಮಗೆ ಅನುಕೂಲಕರವಾಗಿರುವುದಿಲ್ಲ ಅಥವಾ ನಮ್ಮ ಶ್ರಮ ಸಾಕಾಗಿರುವುದಿಲ್ಲ.
ಅದೇ ರೀತಿ ಗೆದ್ದ ತಕ್ಷಣ ನಮ್ಮ ಎಲ್ಲಾ ನಡೆಗಳು ಸರ್ವಕಾಲಕ್ಕೂ ಸಂಪೂರ್ಣ ಸತ್ಯ ಎಂದು ಭಾವಿಸಬೇಕಿಲ್ಲ.

ಆದ್ದರಿಂದ,
ನಾವುಗಳು ಮನುಷ್ಯನ ವ್ಯಕ್ತಿತ್ವವನ್ನು ಸೋಲು ಗೆಲುವಿನ ಫಲಿತಾಂಶದ ಮೇಲೆ ಅಳೆಯದೆ ಅವರ ಗುಣಾವಗುಣಗಳ ನಿಜ ಮೌಲ್ಯಗಳನ್ನು ಗುರುತಿಸಿ ಒಳ್ಳೆಯವರನ್ನು ಪ್ರೋತ್ಸಾಹಿಸೋಣ, ಕೆಟ್ಟವರನ್ನು ತಿರಸ್ಕರಿಸೋಣ.
ಗೆದ್ದವನು ಒಳ್ಳೆಯವನು ಆಗಿರಬಹುದು ಅಥವಾ ದುಷ್ಟನೂ ಆಗಿರಬಹುದು.
ಸೋತವನೂ ಕೆಟ್ಟವನೂ ಆಗಿರಬಹುದು ಅಥವಾ ಒಳ್ಳೆಯವನೂ ಆಗಿರಬಹುದು.

ಇದು ಈಗಿನ ರಾಜಕೀಯ ಫಲಿತಾಂಶಗಳಿಗೆ ಮಾತ್ರವಲ್ಲ ಅಂದು ಇಂದು ಮುಂದು ಇದೇ ರೀತಿ ಸಮಾಜದ ಎಲ್ಲಾ ವಿಷಯಗಳಿಗೂ ಅನ್ವಯಿಸುತ್ತದೆ.

ಗೆದ್ದವರೊಂದಿಗೆ ಎಲ್ಲವೂ ಎಲ್ಲರೂ ಇರುತ್ತಾರೆ. ನಿಜವಾಗಿಯೂ ಸಹಾನುಭೂತಿಯ ಅವಶ್ಯಕತೆ ಇರುವುದು ಸೋತವರಿಗೆ. ಅವರ ಬಗ್ಗೆ ಕನಿಕರ ಕಳಕಳಿ ಕ್ಷಮಾಗುಣ ಕರುಣೆ ಇರಲಿ. ಹೀಯಾಳಿಕೆ, ತಿರಸ್ಕಾರ ಬೇಡ. ಅದು ಮುಂದೆ ಸಮಾಜದ ಸ್ವಾಸ್ಥ್ಯ ಹಾಳಾಗಲು ಕಾರಣವಾಗುತ್ತದೆ. ಎಲ್ಲರೂ ನಮ್ಮವರೆ.

ಕೇವಲ ಬಾಯಿ ಮಾತಿನಲ್ಲಿ ನಮ್ಮದು ಅಂತಹ ಸಂಸ್ಕೃತಿ, ಇಂತಹ ಸಂಸ್ಕೃತಿ, ಮಹಾನ್ ಸಂಸ್ಕೃತಿ ಎಂದು ಹೇಳುವುದಕ್ಕೆ ಸೀಮಿತರಾಗದೆ ಆಚರಣೆಯಲ್ಲಿ ಸಹ ಒಳ್ಳೆಯ ಸಂಸ್ಕೃತಿ ಅನುಸರಿಸಲು ಪ್ರಯತ್ನಿಸೋಣ.

ಒಳ್ಳೆಯತನ ತಿಳಿವಳಿಕೆಯಲ್ಲ ನಡವಳಿಕೆ.
ಹಾಳಾಗಿರುವುದು ಸಾಕು ನೆಮ್ಮದಿಯ ಸೌಹಾರ್ದ ಬದುಕಿನತ್ತ ಸಾಗೋಣ. ನಿಮ್ಮ ಬುದ್ದಿವಂತಿಕೆ ಶ್ರಮ ಸಮಾಜದ ಒಳಿತಿಗಾಗಿ ಮಾತ್ರ ಇರಲಿ. ವಿಭಜನೆಗಾಗಿ, ನಿಮ್ಮ ಸ್ವಾರ್ಥಕ್ಕಾಗಿ ಅಲ್ಲ………

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9663750451…..
9844013068…….

ಚುನಾವಣಾ ವಿಶ್ಲೇಷಣೆ (Election Analysis) ಚುನಾವಣಾ ಸುಧಾರಣೆ (Election Reforms) ಪ್ರಜಾಪ್ರಭುತ್ವ (Democracy) ಮಾಧ್ಯಮಗಳ ಪಾತ್ರ (Role of Media) ಮಾನವೀಯ ಮೌಲ್ಯಗಳು (Human Values) ರಾಜಕೀಯ ದ್ವೇಷ (Political Rivalry) ಸಾಮಾಜಿಕ ಸಾಮರಸ್ಯ (Social Harmony) ಸೋಲು-ಗೆಲುವು (Win and Loss)
Follow on Facebook Follow on Instagram
Share. Facebook Twitter WhatsApp Telegram
Previous Article05/05/2026 ರ ನಿತ್ಯ ಭವಿಷ್ಯ 🔮
Times Of Bayaluseeme Staff
  • Website

Related Posts

ತಮಿಳುನಾಡು ಚುನಾವಣೆಯಲ್ಲಿ ವಿಜಯ್ ‘ಟಿವಿಕೆ’ ಅಲೆ: ದಳಪತಿಯನ್ನು ಗೆಲುವಿನತ್ತ ನಡಸಿದ ಆ 7 ಪ್ರಮುಖ ಗ್ಯಾರಂಟಿಗಳು ಇಲ್ಲಿವೆ!

May 4, 2026

ಸೀಬೆ ಎಲೆ: ಕೇವಲ ಹಣ್ಣಷ್ಟೇ ಅಲ್ಲ, ಇದರ ಎಲೆಯೂ ಅಪ್ಪಟ ಔಷಧದ ಗಣಿ!

May 4, 2026

ಶೈಕ್ಷಣಿಕ ಹಾದಿ ಮತ್ತು ಇಂದಿನ ಗೊಂದಲಗಳು: ಒಂದು ಅವಲೋಕನ

May 3, 2026
Add A Comment
Leave A Reply Cancel Reply

Advertisement
Latest Posts

ಚುನಾವಣಾ ಫಲಿತಾಂಶದ ಆಳದಲ್ಲಿ: ಸಂಖ್ಯೆಗಳ ಅಬ್ಬರವೋ ಅಥವಾ ಮೌಲ್ಯಗಳ ಪತನವೋ?

05/05/2026 ರ ನಿತ್ಯ ಭವಿಷ್ಯ 🔮

ಸಿದ್ದರಾಮಯ್ಯ ನಾಯಕತ್ವಕ್ಕೆ ಸಿಕ್ಕ ಜಯವಿದು: ಉಪಚುನಾವಣೆ ಗೆಲುವಿನ ಬಗ್ಗೆ ಎಚ್.ಆಂಜನೇಯ ಹರ್ಷ

ಚಿತ್ರದುರ್ಗ: ಮೇ 05ರಂದು ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 ThemeSphere. Designed by ThemeSphere.
  • Privacy Policy
  • Terms
  • Accessibility

Type above and press Enter to search. Press Esc to cancel.