ಬೆಂಗಳೂರು: ಕರ್ನಾಟಕದ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಿ. ಸುಧಾಕರ್ ಅವರು ತೀವ್ರ ಅನಾರೋಗ್ಯದಿಂದ ಭಾನುವಾರ ಮುಂಜಾನೆ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು.
ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಇಂದು ಮುಂಜಾನೆ 3.15ರ ಸುಮಾರಿಗೆ ಕೊನೆಯುಸಿರೆಳೆದರು. ಮೊಣಕಾಲು ಶಸ್ತ್ರಚಿಕಿತ್ಸೆಯ ಬಳಿಕ ಉಂಟಾದ ಶ್ವಾಸಕೋಶದ ಸೋಂಕಿನಿಂದಾಗಿ ಅವರ ಆರೋಗ್ಯ ಹದಗೆಟ್ಟಿತ್ತು ಎಂದು ತಿಳಿದುಬಂದಿದೆ.
ಕಳೆದ ಮಾರ್ಚ್ 27ರಂದು ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಸುಧಾಕರ್ ಅವರಿಗೆ ನಂತರ ಸೋಂಕು ತೀವ್ರವಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಅವರನ್ನು ಕಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ವೈದ್ಯರು ತೀವ್ರ ನಿಗಾವಹಿಸಿ ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ.
1961ರ ಮಾರ್ಚ್ 28ರಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಜನಿಸಿದ್ದ ಅವರು, ಶಿವಮೊಗ್ಗದ ನ್ಯಾಷನಲ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರ್ಣಗೊಳಿಸಿದ್ದರು. ಪತ್ನಿ ಹರ್ಷಿಣಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಡಿ. ಸುಧಾಕರ್ ಅವರು ಜಿಲ್ಲೆಯ ರಾಜಕೀಯದಲ್ಲಿ ಪ್ರಭಾವಿ ನಾಯಕನಾಗಿ ಗುರುತಿಸಿಕೊಂಡಿದ್ದರು. ಜನಪರ ಕೆಲಸಗಳು ಹಾಗೂ ನೇರ ನಿಲುವಿನಿಂದ ‘ಸೋಲಿಲ್ಲದ ಸರದಾರ’ ಎಂದೇ ಖ್ಯಾತರಾಗಿದ್ದರು.
2004ರಲ್ಲಿ ಮೊದಲ ಬಾರಿಗೆ ಚಳ್ಳಕೆರೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿಧಾನಸಭೆಗೆ ಆಯ್ಕೆಯಾಗಿದ್ದರು. 2008ರಲ್ಲಿ ಹಿರಿಯೂರು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಬಳಿಕ ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿ ಸಮಾಜ ಕಲ್ಯಾಣ ಹಾಗೂ ಯುವಜನ ವ್ಯವಹಾರ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
2013ರಲ್ಲಿ ಕಾಂಗ್ರೆಸ್‌ಗೆ ಮರಳಿದ ಅವರು, ಹಿರಿಯೂರು ಕ್ಷೇತ್ರದಲ್ಲಿ ಜಯ ಸಾಧಿಸಿದ್ದರು. 2018ರ ಚುನಾವಣೆಯಲ್ಲಿ ಸೋಲು ಕಂಡಿದ್ದರೂ, 2023ರಲ್ಲಿ ಮತ್ತೆ ಭರ್ಜರಿ ಗೆಲುವು ದಾಖಲಿಸಿ ಸಚಿವ ಸಂಪುಟದಲ್ಲಿ ಯೋಜನೆ ಮತ್ತು ಸಾಂಖ್ಯಿಕ ಸಚಿವರಾಗಿ ಸ್ಥಾನ ಪಡೆದಿದ್ದರು. ಜೊತೆಗೆ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಸೇವೆ ಸಲ್ಲಿಸುತ್ತಿದ್ದರು.
ಚಿತ್ರದುರ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಸಹ ಅವರು ಕಾರ್ಯನಿರ್ವಹಿಸಿದ್ದರು.
ಸಚಿವರ ನಿಧನಕ್ಕೆ ಮುಖ್ಯಮಂತ್ರಿ, ಸಚಿವರು, ವಿವಿಧ ಪಕ್ಷಗಳ ನಾಯಕರು, ಮಠಾಧೀಶರು ಹಾಗೂ ಸಾರ್ವಜನಿಕರು ಕಂಬನಿ ಮಿಡಿದಿದ್ದಾರೆ. ಡಿ. ಸುಧಾಕರ್ ಅವರ ಅಗಲಿಕೆಯಿಂದ ಚಿತ್ರದುರ್ಗ ಜಿಲ್ಲೆ ಜನಪ್ರಿಯ ಹಾಗೂ ಹೋರಾಟಗಾರ ನಾಯಕನನ್ನು ಕಳೆದುಕೊಂಡಂತಾಗಿದೆ.
