ಚಿತ್ರದುರ್ಗ: ನಗರದ ದೊಡ್ಡಪೇಟೆಯಲ್ಲಿರುವ ಪ್ರಸಿದ್ಧ ಮೈಸೂರು ಕೆಫೆಯ ಮಾಲೀಕರಾಗಿದ್ದ ವೇದವ್ಯಾಸ ಆಚಾರ್ಯ (ಅಣ್ಣಾದೊರೈ) ಅವರು ಇಂದು ಮುಂಜಾನೆ ಬೆಂಗಳೂರಿನಲ್ಲಿ ನಿಧನರಾದರು.
ಸುಮಾರು ಐದು ದಶಕಗಳಿಗಿಂತಲೂ ಹೆಚ್ಚು ಕಾಲ ಮೈಸೂರು ಕೆಫೆ ನಡೆಸುತ್ತಿದ್ದ ಅವರು, ಉತ್ತಮ ಸೇವೆ ಹಾಗೂ ಆತ್ಮೀಯ ನಡೆನುಡಿಗಳ ಮೂಲಕ ಅಪಾರ ಗ್ರಾಹಕ ವಲಯವನ್ನು ಹೊಂದಿದ್ದರು. ಗ್ರಾಹಕರೊಂದಿಗೆ ಸ್ನೇಹಭಾವದಿಂದ ಮಾತನಾಡುತ್ತಿದ್ದ ಅವರನ್ನು ಅಣ್ಣಾದೊರೈ ಎಂದೇ ಜನರು ಕರೆಯುತ್ತಿದ್ದರು.
ಸಾಹಿತ್ಯ ಮತ್ತು ಕನ್ನಡ ಚಟುವಟಿಕೆಗಳಲ್ಲಿಯೂ ಆಸಕ್ತಿ ಹೊಂದಿದ್ದ ಅವರು, ದೊಡ್ಡಪೇಟೆಯಲ್ಲಿ ಕನ್ನಡ ಬಳಗ ಸ್ಥಾಪಿಸಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಹಿರಿಯ ಸಾಹಿತಿಗಳಾದ ದ.ರಾ. ಬೇಂದ್ರೆ ಮತ್ತು ಜಿ.ಎಸ್. ಶಿವರುದ್ರಪ್ಪ ಅವರನ್ನು ಆಹ್ವಾನಿಸಿ ಕಾರ್ಯಕ್ರಮಗಳನ್ನು ನಡೆಸಿದ್ದನ್ನು ಸಾಹಿತ್ಯಾಸಕ್ತರು ಸ್ಮರಿಸಿದ್ದಾರೆ.
ಅವರ ನಿಧನಕ್ಕೆ ವ್ಯಾಪಾರಿಗಳು, ಗ್ರಾಹಕರು ಕನ್ನಡಾಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
