Close Menu
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
What's Hot

11/05/2026 ರ ನಿತ್ಯ ಭವಿಷ್ಯ

ಸೋಲಿಲ್ಲದ ಸರದಾರನ ಪಯಣ ಅಂತ್ಯ: ಸಚಿವ ಡಿ. ಸುಧಾಕರ್ ಅಕಾಲಿಕ ನಿಧನಕ್ಕೆ ರಾಜ್ಯಸ್ತಬ್ದ

ಮೈಸೂರು ಕೆಫೆ ಮಾಲೀಕ ವೇದವ್ಯಾಸ ಆಚಾರ್ಯ ( ಅಣ್ಣಾದೊರೈ) ನಿಧನ

Facebook X (Twitter) Instagram
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
Facebook X (Twitter) Instagram
Times Of Bayaluseeme
  • ಮುಖಪುಟ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ರಾಜಕೀಯ
  • ರಾಜ್ಯ
  • ಸಿನಿಮಾ
Subscribe
Times Of Bayaluseeme
Home»ಜಿಲ್ಲಾ ಸುದ್ದಿ»ಚಿತ್ರದುರ್ಗ»ಸೋಲಿಲ್ಲದ ಸರದಾರನ ಪಯಣ ಅಂತ್ಯ: ಸಚಿವ ಡಿ. ಸುಧಾಕರ್ ಅಕಾಲಿಕ ನಿಧನಕ್ಕೆ ರಾಜ್ಯಸ್ತಬ್ದ
ಚಿತ್ರದುರ್ಗ

ಸೋಲಿಲ್ಲದ ಸರದಾರನ ಪಯಣ ಅಂತ್ಯ: ಸಚಿವ ಡಿ. ಸುಧಾಕರ್ ಅಕಾಲಿಕ ನಿಧನಕ್ಕೆ ರಾಜ್ಯಸ್ತಬ್ದ

Times Of Bayaluseeme StaffBy Times Of Bayaluseeme StaffMay 10, 2026No Comments8 Mins Read
Share WhatsApp Facebook Twitter Threads Telegram
Follow Us
Facebook Instagram
ಕರ್ನಾಟಕದ ಸಚಿವ ಡಿ. ಸುಧಾಕರ್ ಅವರ ಭಾವಚಿತ್ರ
Share
WhatsApp Twitter Facebook Telegram

ಚಿತ್ರದುರ್ಗ: ಕರ್ನಾಟಕದ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಿ. ಸುಧಾಕರ್ ಅವರು ತೀವ್ರ ಅನಾರೋಗ್ಯದಿಂದ ಭಾನುವಾರ ಮುಂಜಾನೆ 3:15ರ ಸುಮಾರಿಗೆ ವಿಧಿವಶರಾಗಿದ್ದಾರೆ. ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಕಳೆದ ಮಾರ್ಚ್ 27ರಂದು ಮೊಣಕಾಲು ನೋವಿನ ಚಿಕಿತ್ಸೆಗಾಗಿ (ಶಸ್ತ್ರಚಿಕಿತ್ಸೆ) ಸುಧಾಕರ್ ಅವರು ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಆಪರೇಷನ್ ಬಳಿಕ ಅವರಿಗೆ ಶ್ವಾಸಕೋಶದ ಸೋಂಕು ತೀವ್ರವಾಗಿ ಉಲ್ಬಣಿಸಿತ್ತು. ಸೋಂಕು ಕಡಿಮೆಯಾಗದ ಹಿನ್ನೆಲೆಯಲ್ಲಿ, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಕೆಲವು ದಿನಗಳ ಹಿಂದೆ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ತೀವ್ರ ನಿಗಾವಹಿಸಿ ಚಿಕಿತ್ಸೆ ನೀಡಿದರೂ, ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.

ಮಾರ್ಚ್ 28, 1961ರಂದು ಚಿತ್ರದುರ್ಗದ ಚಳ್ಳಕೆರೆಯಲ್ಲಿ ಜನಿಸಿದ್ದ ಸುಧಾಕರ್ ಅವರು, ಶಿವಮೊಗ್ಗದ ನ್ಯಾಷನಲ್ ಕಾಲೇಜಿನಲ್ಲಿ ಪದವಿ ಪಡೆದಿದ್ದರು. ಮೃತರು ಪತ್ನಿ ಹರ್ಷಿಣಿ ಸುಧಾಕರ್, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಸದಾ ನಗುಮುಖದಿಂದಲೇ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದ, ಹಿರಿಯೂರು ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದ ಸಚಿವ ಡಿ. ಸುಧಾಕರ್ ಅವರ ನಿಧನದಿಂದಾಗಿ, ಮಧ್ಯ ಕರ್ನಾಟಕ ಭಾಗವು ಓರ್ವ ಅತ್ಯಮೂಲ್ಯ ಹಾಗೂ ಜನಾನುರಾಗಿ ನಾಯಕನನ್ನು ಕಳೆದುಕೊಂಡಂತಾಗಿದೆ. ಅವರ ಬೆಂಬಲಿಗರು ಮತ್ತು ಕ್ಷೇತ್ರದ ಜನತೆ ಕಂಬನಿ ಮಿಡಿಯುತ್ತಿದ್ದಾರೆ.
==

ಸೋಲಿಲ್ಲದ ಸರದಾರ
ಡಿ.ಸುಧಾಕರ್ ಅವರು ತಮ್ಮ ಜನಪರ ಕಾರ್ಯಗಳಿಂದ ಸೋಲಿಲ್ಲದ ಸರದಾರ ಎಂದೇ ಖ್ಯಾತರಾಗಿದ್ದ ಅನುಭವಿ ರಾಜಕಾರಣಿ.
2004: ಮೊದಲ ಬಾರಿಗೆ ಚಳ್ಳಕೆರೆ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರಾಗಿ ಆಯ್ಕೆ.
2008: ಹಿರಿಯೂರು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಭರ್ಜರಿ ಗೆಲುವು. ಬಳಿಕ ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿ ಸಮಾಜ ಕಲ್ಯಾಣ ಸಚಿವರಾಗಿ (2008-2009) ಹಾಗೂ ಯುವಜನ ವ್ಯವಹಾರ ಸಚಿವರಾಗಿ ಸೇವೆ ಸಲ್ಲಿಸಿದ್ದರು.
2013: ಕಾಂಗ್ರೆಸ್ ಪಕ್ಷಕ್ಕೆ ಮರಳಿ, ಹಿರಿಯೂರು ಕ್ಷೇತ್ರದಿಂದ ಜೆಡಿಎಸ್‌ನ ಎ. ಕೃಷ್ಣಪ್ಪ ವಿರುದ್ಧ ಗೆಲುವು ಸಾಧಿಸಿದ್ದರು.
2018: ಹಿರಿಯೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪೂರ್ಣಿಮಾ ಶ್ರೀನಿವಾಸ್ ವಿರುದ್ಧ ಸೋಲು.
2023: ಮತ್ತೆ ಹಿರಿಯೂರು ಕ್ಷೇತ್ರದಿಂದ ಸ್ಪರ್ಧಿಸಿ ಭರ್ಜರಿ ಜಯಭೇರಿ ಬಾರಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಂಪುಟದಲ್ಲಿ ಯೋಜನೆ ಮತ್ತು ಸಾಂಖ್ಯಿಕ ಸಚಿವರಾಗಿ, ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರು ಚಿತ್ರದುರ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

========

ಮಮ್ಮಲ ಮರುಗಿದ ರಾಹುಲ್‌ ಗಾಂಧಿ

ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕ, ಸಚಿವ ಹಾಗೂ ಚಿತ್ರದುರ್ಗ ಜಿಲ್ಲೆಯ ಪ್ರಬಲ ನಾಯಕರಾಗಿದ್ದ ಡಿ. ಸುಧಾಕರ್ ಅವರ ನಿಧನಕ್ಕೆ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಗ್ರ ನಾಯಕರಾದ ರಾಹುಲ್ ಗಾಂಧಿ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿದ್ದ ಹಾಗೂ ಹಿರಿಯೂರು ಮತ್ತು ಚಿತ್ರದುರ್ಗದ ಜನರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದ ಸುಧಾಕರ್ ಅವರ ಅಗಲಿಕೆ ಪಕ್ಷಕ್ಕೆ ಹಾಗೂ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ನಾಯಕರು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

==
ಹಿರಿಯ ಕಾಂಗ್ರೆಸ್ ನಾಯಕ ಮತ್ತು ಕರ್ನಾಟಕದ ಸಚಿವ ಡಿ. ಸುಧಾಕರ್ ಜೀ ಅವರ ನಿಧನದ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ಕಾಂಗ್ರೆಸ್ ಸಿದ್ಧಾಂತದ ದಾರಿದೀಪವಾಗಿದ್ದ ಅವರು, ತಮ್ಮ ಜೀವನವನ್ನು ಚಿತ್ರದುರ್ಗ ಹಾಗೂ ಕರ್ನಾಟಕದ ಬಡವರ ಸೇವೆಗಾಗಿ ಮುಡಿಪಾಗಿಟ್ಟಿದ್ದರು. ಅವರ ಅಗಲಿಕೆಯ ಈ ದುಃಖದ ಸಮಯದಲ್ಲಿ ಅವರ ಕುಟುಂಬಸ್ಥರು ಹಾಗೂ ಬೆಂಬಲಿಗರಿಗೆ ನನ್ನ ಪ್ರಾರ್ಥನೆ ಮತ್ತು ಸಂತಾಪಗಳು.

ರಾಹುಲ್ ಗಾಂಧಿ
==
ಕರ್ನಾಟಕದ ಸಚಿವ, ಜೀವಮಾನವಿಡೀ ಪಕ್ಷಕ್ಕಾಗಿ ಸಮರ್ಪಿಸಿಕೊಂಡಿದ್ದ ಕಟ್ಟಾ ಕಾಂಗ್ರೆಸ್ಸಿಗ ಶ್ರೀ ಡಿ. ಸುಧಾಕರ್ ಅವರ ನಿಧನ ತೀವ್ರ ಬೇಸರ ತರಿಸಿದೆ. ಕಾಂಗ್ರೆಸ್ ಸಿದ್ಧಾಂತಕ್ಕೆ ಬದ್ಧರಾಗಿದ್ದ ಅವರು, ಹಿರಿಯೂರು ಮತ್ತು ಚಿತ್ರದುರ್ಗದ ಜನತೆಗೆ ಸದಾ ಮೀಸಲಾಗಿದ್ದರು.
ತಮ್ಮ ನಗುಮುಖದ ಸ್ವಭಾವ, ಸರಳತೆ ಮತ್ತು ತಳಮಟ್ಟದ ಜನಸಾಮಾನ್ಯರೊಂದಿಗಿನ ಒಡನಾಟದಿಂದಾಗಿ ಅವರು ವಿಶಿಷ್ಟವಾಗಿ ಗುರುತಿಸಿಕೊಂಡಿದ್ದರು. ಅವರು ಸದಾ ಜನತೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಹಿತವನ್ನೇ ಎಲ್ಲಕ್ಕಿಂತ ಮೇಲಿರಿಸಿದ್ದರು. ಪ್ರತಿಯೊಬ್ಬ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಅವರನ್ನು ಸದಾ ಮಿಸ್ ಮಾಡಿಕೊಳ್ಳಲಿದ್ದಾರೆ.
ಅವರ ಕುಟುಂಬಸ್ಥರು, ಪ್ರೀತಿಪಾತ್ರರು ಹಾಗೂ ರಾಜ್ಯಾದ್ಯಂತ ಇರುವ ಅವರ ಬೆಂಬಲಿಗರಿಗೆ ನನ್ನ ಹೃತ್ಪೂರ್ವಕ ಸಂತಾಪಗಳು. ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರಿಗೆ ಕರುಣಿಸಲಿ. ಓಂ ಶಾಂತಿ!

ರಣದೀಪ್ ಸಿಂಗ್ ಸುರ್ಜೇವಾಲ

 

===
ಕಂಬನಿ ಮಿಡಿಯುತ್ತಿದೆ ಜಿಲ್ಲೆ
ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರ ನಿಧನದ ಸುದ್ದಿ ಇಡೀ ಚಿತ್ರದುರ್ಗ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ. ತಮ್ಮ ನೆಚ್ಚಿನ ನಾಯಕನ ಅಗಲಿಕೆಯ ಸುದ್ದಿ ತಿಳಿದು ಕ್ಷೇತ್ರದ ಜನತೆ, ಅದರಲ್ಲೂ ವಿಶೇಷವಾಗಿ ಮಹಿಳಾ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಅಕ್ಷರಶಃ ಶೋಕಸಾಗರದಲ್ಲಿ ಮುಳುಗಿದ್ದಾರೆ. ಮಧ್ಯ ಕರ್ನಾಟಕದ ಓರ್ವ ಪ್ರಭಾವಿ ಹಾಗೂ ಜನಾನುರಾಗಿ ನಾಯಕನನ್ನು ಕಳೆದುಕೊಂಡ ದುಃಖದಲ್ಲಿ ಇಡೀ ಜಿಲ್ಲೆ ಕಂಬನಿ ಮಿಡಿಯುತ್ತಿದೆ.
===
ಮುಗಿಲುಮುಟ್ಟಿದ ಆಕ್ರಂದನ
ಸಚಿವರ ಅಗಲಿಕೆಯ ಹಿನ್ನೆಲೆಯಲ್ಲಿ ಸೇರಿದ್ದ ಸಭೆಯೊಂದರಲ್ಲಿ ಮಹಿಳಾ ಕಾರ್ಯಕರ್ತೆಯರು ಬಿಕ್ಕಿ ಬಿಕ್ಕಿ ಅತ್ತ ದೃಶ್ಯಗಳು ಕಲ್ಲು ಹೃದಯವನ್ನೂ ಕರಗಿಸುವಂತಿತ್ತು. ಅವರು ಬರೀ ಶಾಸಕರಾಗಿರಲಿಲ್ಲ, ನಮ್ಮ ಪಾಲಿನ ದೇವರಾಗಿದ್ದರು ಎಂದು ಮಹಿಳೆಯರು ಕಣ್ಣೀರು ಹಾಕಿದ್ದಾರೆ.
==
ಕೊಡುಗೈ ದಾನಿ
ಯಾರೇ ಕಷ್ಟ ಎಂದು ಹೋದರೂ ಬರಿಗೈಯಲ್ಲಿ ಕಳುಹಿಸುತ್ತಿರಲಿಲ್ಲ, ತುಂಬಿದ ಕೈಯಲ್ಲಿ ಸಹಾಯ ಮಾಡುತ್ತಿದ್ದರು. ಈಗ ನಮ್ಮನ್ನೆಲ್ಲ ಅನಾಥರನ್ನಾಗಿ ಮಾಡಿ ಹೋದರಲ್ಲ ಎಂದು ಮಹಿಳಾ ಅಭಿಮಾನಿಯೊಬ್ಬರು ರೋದಿಸಿದರು.
==
ಸಾಮಾನ್ಯ ಕಾರ್ಯಕರ್ತರಿಗೆ ಬೆಲೆ
ಎಲ್ಲಾ ಕಡೆ ಹಣವಿದ್ದವರಿಗೆ ಮಾತ್ರ ಬೆಲೆ ಸಿಗುತ್ತದೆ. ಆದರೆ ಸುಧಾಕರ್ ಅವರ ಬಳಿ ತಳಮಟ್ಟದಿಂದ ದುಡಿಯುವ ಸಾಮಾನ್ಯ ಕಾರ್ಯಕರ್ತರಿಗೆ, ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಅಪಾರ ಗೌರವವಿತ್ತು ಎಂದು ಕಾರ್ಯಕರ್ತೆಯರು ಸ್ಮರಿಸಿದರು.
==
ಮನೆಗೊಂದು ದೀಪ ಆರಿದಂತಾಗಿದೆ
ಇಂತಹ ದೇವರಂತ ಮನುಷ್ಯನನ್ನು ದೇವರು ಇಷ್ಟು ಬೇಗ ಕರೆದುಕೊಳ್ಳಬಾರದಾಗಿತ್ತು. ನಾವೆಲ್ಲರೂ ಅನಾಥರಾಗಿದ್ದೇವೆ, ನಮ್ಮ ಮನೆಗೆ ದೀಪವೇ ಇಲ್ಲದಂತಾಗಿದೆ ಎಂದು ಕಾರ್ಯಕರ್ತೆಯರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಡಿ. ಸುಧಾಕರ್ ಅವರು ಕೇವಲ ರಾಜಕಾರಣಿಯಾಗಿರದೆ, ಜನರ ಕಷ್ಟಗಳಿಗೆ ಸ್ಪಂದಿಸುವ ಮಾನವೀಯತೆಯುಳ್ಳ ನಾಯಕರಾಗಿದ್ದರು. ಅವರ ನಿಧನದಿಂದ ಚಿತ್ರದುರ್ಗ ಜಿಲ್ಲೆಗೆ ಹಾಗೂ ರಾಜ್ಯ ರಾಜಕಾರಣಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.
==

ಬಿಜೆಪಿ-ಕಾಂಗ್ರೆಸ್ ಎರಡೂ ಸರ್ಕಾರಗಳಲ್ಲಿ ಸಚಿವ

ರಾಜ್ಯ ರಾಜಕೀಯದ ಚತುರ ನಾಯಕ, ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್ (65) ಅವರ ನಿಧನದಿಂದ ಹಿರಿಯೂರು ಮತ್ತು ಚಿತ್ರದುರ್ಗ ) ಜಿಲ್ಲೆಯ ರಾಜಕಾರಣದ ಒಂದು ಶಕೆಗೆ ತೆರೆಬಿದ್ದಿದೆ. ಕೃಷಿ ಮತ್ತು ಉದ್ಯಮದಿಂದ ಆರಂಭವಾಗಿ ವಿಧಾನಸಭೆಯವರೆಗೆ ಬೆಳೆದ ಇವರ ಪಯಣ ಅಸಂಖ್ಯಾತ ಏರಿಳಿತಗಳಿಂದ ಕೂಡಿದ್ದರೂ, ನಾಲ್ಕು ಬಾರಿ ಜಯಗಳಿಸುವ ಮೂಲಕ ಜಿಲ್ಲೆಯ ಅಪ್ರತಿಮ ನಾಯಕರಾಗಿ ಹೊರಹೊಮ್ಮಿದ್ದರು. ಡಿಸಿಎಂ ಡಿಕೆ ಶಿವಕುಮಾರ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಅವರು, ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಅಭಿವೃದ್ಧಿ ಕಾರ್ಯಗಳಿಗೆ ಶ್ರಮಿಸಿದ್ದರು.

==
ಶಾಸಕ ಸ್ಥಾನ ಉಳಿಸಿಕೊಂಡಿದ್ದ ಸುಧಾಕರ್!

2010ರಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಬಂಡಾಯ ಎದ್ದ 16 ಶಾಸಕರಲ್ಲಿ ಸುಧಾಕರ್ ಕೂಡ ಒಬ್ಬರಾಗಿದ್ದರು. ಅಂದು ಸ್ಪೀಕರ್ ಅವರಿಂದ ಅನರ್ಹಗೊಂಡರೂ, ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸಿ ತಮ್ಮ ಶಾಸಕ ಸ್ಥಾನವನ್ನು ಉಳಿಸಿಕೊಂಡ ಚತುರ ಇವರು.
2013ರಲ್ಲಿ ಮತ್ತೆ ಕಾಂಗ್ರೆಸ್ ಸೇರಿ ಹಿರಿಯೂರಿನಿಂದ ಗೆದ್ದರು. 2018ರಲ್ಲಿ ಸೋಲು ಕಂಡಿದ್ದರೂ ಛಲ ಬಿಡದ ಸುಧಾಕರ್, 2023ರ ಚುನಾವಣೆಯಲ್ಲಿ ಮತ್ತೆ ಭರ್ಜರಿ ಜಯ ಸಾಧಿಸಿ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿ ಸಕ್ರಿಯರಾಗಿದ್ದರು.
==
ರೈತಪರ ನಿಲುವು ಮತ್ತು ಸರಳ ವ್ಯಕ್ತಿತ್ವ
ಸಚಿವ ಡಿ. ಸುಧಾಕರ್ ಕೇವಲ ಅಧಿಕಾರಕ್ಕಾಗಿ ರಾಜಕಾರಣ ಮಾಡಿದವರಲ್ಲ. ಚಿತ್ರದುರ್ಗ ಜಿಲ್ಲೆಯಲ್ಲಿ ಬರಗಾಲ ಬಂದಾಗ ಹಿರಿಯೂರಿನ ಕೆರೆಗಳ ಸುತ್ತಮುತ್ತ ಸ್ವತಃ ಮೇವು ಬೆಳೆಸಿ ರೈತರ ಜಾನುವಾರುಗಳಿಗೆ ಹಂಚಿದ ಅವರ ಕಾರ್ಯ ಇಂದಿಗೂ ಜನರ ಮನಸ್ಸಿನಲ್ಲಿದೆ.
ಚಿತ್ರದುರ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಸಹಕಾರಿ ಕ್ಷೇತ್ರಕ್ಕೂ ದೊಡ್ಡ ಕೊಡುಗೆ ನೀಡಿದ್ದಾರೆ. ಪತ್ನಿ ಹರ್ಷಿಣಿ, ಮಗ ಸುಹಾಸ್ ಹಾಗೂ ಪುತ್ರಿ ಸ್ಫೂರ್ತಿ ಸೇರಿದಂತೆ ಅಪಾರ ಅಭಿಮಾನಿಗಳನ್ನು ಅಗಲಿರುವ ಸುಧಾಕರ್ ಅವರ ರಾಜಕೀಯ ಚತುರತೆ ಮತ್ತು ಜನಸೇವೆ ಜಿಲ್ಲೆಯ ಇತಿಹಾಸದಲ್ಲಿ ಸದಾ ನೆನಪಿನಲ್ಲುಳಿಯಲಿದೆ.
==

ಸಿಎಂ ಸಿದ್ದರಾಮಯ್ಯ ಸಂತಾಪ

ಸಚಿವ ಸುಧಾಕರ್ ಸಾವಿಗೆ ಸಿಎಂ ಸಂತಾಪ ಸೂಚಿಸಿದ್ದು, ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ಸರ್ಕಾರದ ಯೋಜನೆ ಮತ್ತು ಸಾಂಖ್ಯಿಕ ಸಚಿವರು, ಹಿರಿಯ ನಾಯಕರು ಆಗಿದ್ದ ಡಿ.ಸುಧಾಕರ್ ಅವರ ಅಕಾಲಿಕ ನಿಧನದಿಂದ ದುಃಖಿತನಾಗಿದ್ದೇನೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯ ನಿಮಿತ್ತ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ನಾನು ಖುದ್ದು ಆಸ್ಪತ್ರೆಗೆ ಭೇಟಿನೀಡಿ ಸುಧಾಕರ್‌ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರಿಂದ ಅವರ ಆರೋಗ್ಯದ ಮಾಹಿತಿ ಪಡೆದಿದ್ದೆ, ಈ ವೇಳೆ ಅವರು ಗುಣಮುಖರಾಗುವ ಭರವಸೆ ನನ್ನಲ್ಲಿ ಮೂಡಿತ್ತು.

ಜನಸೇವೆಯಲ್ಲಿ‌ ಅಪಾರ ಕಾಳಜಿ ಮತ್ತು ಬದ್ಧತೆಯಿದ್ದ ವ್ಯಕ್ತಿ ಸುಧಾಕರ್. ಇಂಥವರು ಇನ್ನಷ್ಟು ಕಾಲ ಜನರ ನಡುವೆ ಇರಬೇಕಿತ್ತು. ವೈದ್ಯರ ನಿರಂತರ ಪ್ರಯತ್ನ, ನಮ್ಮೆಲ್ಲರ ಹಾರೈಕೆಯ ಹೊರತಾಗಿಯೂ ಇಂದು ಸುಧಾಕರ್ ಅವರು ನಮ್ಮನ್ನಗಲಿದ್ದಾರೆ. ಇದು ಅತ್ಯಂತ ನೋವಿನ ಗಳಿಗೆ. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬವರ್ಗ ಮತ್ತು ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.
===

ಕೌಟುಂಬಿಕ ಹಿನ್ನೆಲೆ

ಸಚಿವ ಡಿ. ಸುಧಾಕರ್ ಅವರು 1961 ಮಾರ್ಚ್‌ 28ರಂದು ಎನ್.ದಶರಥಯ್ಯ ಮತ್ತು ಕಾಂಚನಮಾಲಮ್ಮ ದಂಪತಿಯ ಪುತ್ರನಾಗಿ ಜನಿಸಿದರು. ಇವರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿ ನಡೆದರೆ, ಪದವಿ ಶಿಕ್ಷಣವನ್ನು ಶಿವಮೊಗ್ಗದ ನ್ಯಾಷನಲ್ ಕಾಲೇಜಿನಲ್ಲಿ ಬಿ.ಕಾಂ ಪೂರೈಸುವ ಮೂಲಕ ಮುಗಿಸಿದರು.

ವೃತ್ತಿಜೀವನದಲ್ಲಿ ತಂದೆಯಿಂದ ಬಳುವಳಿಯಾಗಿ ಬಂದಿದ್ದ ಕೃಷಿ ಮತ್ತು ಲಿಕ್ಕರ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಇವರು, ನಂತರ ರಾಜಕೀಯದತ್ತ ಆಕರ್ಷಿತರಾದರು. ಮಾಜಿ ಶಾಸಕ ಎನ್. ಜಯಣ್ಣ ಅವರಿಂದ ರಾಜಕೀಯ ಕಲಿತ ಸುಧಾಕರ್, ಹಂತ ಹಂತವಾಗಿ ಬೆಳೆದು ಚಿತ್ರದುರ್ಗ ಜಿಲ್ಲೆಯ ಪ್ರಭಾವಿ ನಾಯಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿ ಗುರುತಿಸಿಕೊಂಡಿದ್ದರು.

ವೈಯಕ್ತಿಕ ಜೀವನದಲ್ಲಿ ಸರಳ ವ್ಯಕ್ತಿತ್ವದ ಇವರು ಪತ್ನಿ ಹರ್ಷಿಣಿ, ಮಗ ಸುಹಾಸ್ ಹಾಗೂ ಪುತ್ರಿ ಸ್ಫೂರ್ತಿ ಅವರನ್ನು ಅಗಲಿದ್ದಾರೆ. ಸಚಿವರ ಅಕಾಲಿಕ ನಿಧನಕ್ಕೆ ಮುಖ್ಯಮಂತ್ರಿಗಳು ಹಾಗೂ ರಾಜ್ಯದ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಅವರ ಅಗಲಿಕೆಯಿಂದ ಚಿತ್ರದುರ್ಗ ಜಿಲ್ಲೆಯಾದ್ಯಂತ ಶೋಕದ ಛಾಯೆ ಆವರಿಸಿದೆ.
===

ಭದ್ರ ಮೇಲ್ದಂಡೆ ಯೋಜನೆ ಜಾರಿಗೆ ಸುಧಾಕರ್ ಅವಿರತ ಹೋರಾಟ

ಸಚಿವರಾದ ಡಿ. ಸುಧಾಕರ್ ಅವರು ಭದ್ರ ಮೇಲ್ದಂಡೆ ಯೋಜನೆ ಜಾರಿಗೆ ಹೋರಾಟ ಮಾಡಿದ್ದರು. ಅವರ ಸ್ಮರಣಾರ್ಥ ನೀರಾವರಿ ಯೋಜನೆಗೆ ಸುಧಾಕರ್ ಅವರ ಹೆಸರಿಡಲು ಆಲೋಚನೆ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಸಚಿವ ಡಿ ಸುಧಾಕರ್ ನಿಧನದ ಹಿನ್ನೆಲೆಯಲ್ಲಿ ಸದಾಶಿವನಗರ ನಿವಾಸದಲ್ಲಿ ಭಾನುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಇಂದು ನಮ್ಮ ಪಾಲಿಗೆ ಬಹಳ ದುಃಖದ ದಿನ. ನನ್ನ ಆಪ್ತಮಿತ್ರ ಹಾಗೂ ನಮ್ಮ ಸರ್ಕಾರದ ಸಚಿವರಾದ ಡಿ. ಸುಧಾಕರ್ ಅವರು ನಮ್ಮನ್ನು ಅಗಲಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ಮಂಡಿ ನೋವಿನ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸೇರಿದ್ದರು. ಶಸ್ತ್ರಚಿಕಿತ್ಸೆ ನಂತರ ಶ್ವಾಸಕೋಶ ಸೋಂಕಿಗೆ ಒಳಗಾಗಿದ್ದರು, ಪ್ರಜ್ಞೆ ಹೋಗಿತ್ತು. ಈ ಮಧ್ಯೆ ಕೆಲ ದಿನಗಳ ಕಾಲ ಅವರಿಗೆ ಪ್ರಜ್ಞೆ ಮರಳಿತ್ತು. ಹೀಗಾಗಿ ಅವರು ಗುಣಮುಖರಾಗಿ ಮರಳುತ್ತಾರೆ ಎಂಬ ವಿಶ್ವಾಸವಿತ್ತು. ವಿದೇಶದಿಂದಲೂ ವೈದ್ಯರನ್ನು ಕರೆಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಇಂದು ಬೆಳಗಿನ ಜಾವ 3.15ಕ್ಕೆ ಅವರು ಕೊನೆಯುಸಿರೆಳೆದಿದ್ದಾರೆ. ಪ್ರತಿ ನಿತ್ಯ ನಾನು ಅವರ ಕುಟುಂಬ ಸದಸ್ಯರ ಜತೆ ಸಂಪರ್ಕದಲ್ಲಿದ್ದು, ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆಯುತ್ತಿದ್ದೆ ಎಂದರು.
ಇಂದು ಅವರ ಪಾರ್ಥಿವ ಶರೀರವನ್ನು ಹಿರಿಯೂರಿಗೆ ತೆಗೆದುಕೊಂಡು ಹೋಗಲಾಗುತ್ತಿದ್ದು, ಸಂಜೆ ನಂತರ ಚಳ್ಳಕೆರೆಗೆ ತೆಗೆದುಕೊಂಡು ಹೋಗಲಾಗುವುದು. ನಾನು ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ಮಾಡಿದ್ದು ನಾಳೆ ಸಂಜೆ 3 ಗಂಟೆ ನಂತರ ಜೈನ ಧರ್ಮದ ವಿಧಿ ವಿಧಾನಗಳ ಪ್ರಕಾರ ಅಂತಿಮ ಕಾರ್ಯ ನಡೆಸಲಾಗುವುದು. ಸರ್ಕಾರದ ಗೌರವದೊಂದಿಗೆ ಅವರಿಗೆ ಅಂತಿಮ ನಮನ ಸಲ್ಲಿಸಲಾಗುವುದು ಎಂದು ತಿಳಿದರು.
ನಾನು ಇಂದು ಅವರ ಪಾರ್ಥಿವ ಶರೀರ ದರ್ಶನ ಮಾಡಲಿದ್ದೇನೆ. ನಾಳೆ ಅವರ ಅಂತಿಮ ಸಂಸ್ಕಾರ ಕಾರ್ಯದಲ್ಲಿ ಭಾಗವಹಿಸುತ್ತೇನೆ. ಅವರು ನನ್ನ ಜೊತೆ ಬಹಳ ಒಡನಾಟ ಇಟ್ಟುಕೊಂಡಿದ್ದರು. ಬಹಳ ಚಿಕ್ಕ ವಯಸ್ಸು, ಆರೋಗ್ಯವಾಗಿದ್ದರು. ಎಸ್ ಎಂ ಕೃಷ್ಣ ಅವರ ಕಾಲದಲ್ಲಿ ರಂಗನಾಥ್ ಅವರ ಕ್ಷೇತ್ರದಲ್ಲಿ ಟಿಕೆಟ್ ಕೊಡಿಸಿದ್ದೆ. ನನ್ನ ಜೊತೆ ಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಅವರಿಗೆ ಯೋಜನಾ ಮತ್ತು ಮುಜರಾಯಿ ಇಲಾಖೆ ನೀಡಲಾಗಿತ್ತು. ಅವರ ಜೊತೆ ಚರ್ಚೆ ಮಾಡಿ ಮುಜರಾಯಿ ಇಲಾಖೆಯನ್ನು ರಾಮಲಿಂಗಾರೆಡ್ಡಿ ಅವರಿಗೆ ನೀಡಲಾಯಿತು. ಸಿಎಂ ಇದಕ್ಕೆ ಅನುಮತಿ ನೀಡಿದ್ದರು ಎಂದು ಹೇಳಿದರು.
ಭಾರತ ಜೋಡೋ ಯಾತ್ರೆ ವೇಳೆ ಐದು ದಿನದ ಜವಾಬ್ದಾರಿಯನ್ನು ಅವರೇ ವಹಿಸಿದ್ದರು. ಅವರ ಅಗಲಿಕೆ ವಿಚಾರವನ್ನು ರಾಹುಲ್ ಗಾಂಧಿ ಅವರ ಗಮನಕ್ಕೆ ತರಲಾಗಿದೆ. ರಾಹುಲ್ ಗಾಂಧಿ ಅವರು ಸುಧಾಕರ್ ಅವರ ಕುಟುಂಬದ ಸದಸ್ಯರ ಜೊತೆಗೆ ಮಾತನಾಡಲಿದ್ದಾರೆ ಎಂದರು.
ಸುಧಾಕರ್ ಅವರ ಪಕ್ಷ ನಿಷ್ಠೆ, ತ್ಯಾಗ ಸ್ಮರಿಸುತ್ತೇವೆ. ಶಾಂತಿ ಕಾಪಾಡಬೇಕು ಎಂದು ನಮ್ಮ ಕಾರ್ಯಕರ್ತರು ಹಾಗೂ ಮುಖಂಡರಿಗೆ ಮನವಿ ಮಾಡುತ್ತೇವೆ. ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದರು. ಹಾಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದರು. ಅವರ ಅಗಲಿಕೆ ನಮ್ಮ ಪಕ್ಷಕ್ಕೆ ದೊಡ್ಡ ನಷ್ಟವಾಗಿದೆ. ಈ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವೆ ಎಂದರು.
ಭದ್ರಾ ಯೋಜನೆ ಪೂರ್ಣಗೊಳಿಸಿ ಅದಕ್ಕೆ ಚಾಲನೆ ನೀಡಬೇಕು ಎಂದು ಬಹಳ ಆಸೆ ಇಟ್ಟುಕೊಂಡಿದ್ದರು. ಈ ಯೋಜನೆಗಾಗಿ ಸಾಕಷ್ಟು ಹೋರಾಟ ಮಾಡಿದ್ದರು. ಅವರ ಅಧ್ಯಕ್ಷತೆಯಲ್ಲಿ ಈ ಯೋಜನೆ ಉದ್ಘಾಟನೆ ಮಾಡಬೇಕು ಎಂದು ಚಿಂತಿಸಿದ್ದೆವು. ಕ್ಷೇತ್ರ ಹಾಗೂ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಆಸಕ್ತಿ ಹೊಂದಿದ್ದರು. ಎಲ್ಲಾ ವರ್ಗದ ಜನರಿಗೆ ನ್ಯಾಯ ಒದಗಿಸಿಕೊಡುತ್ತಿದ್ದರು. ಪಕ್ಷದ ಸದಸ್ಯತ್ವ ಅಭಿಯಾನದಲ್ಲಿ ಅತಿ ಹೆಚ್ಚು ನೋಂದಣಿ ಮಾಡಿಸಿದ ಕೀರ್ತಿ ಸುಧಾಕರ್ ಅವರಿಗೆ ಸಲ್ಲುತ್ತದೆ. ರಾಹುಲ್ ಗಾಂಧಿ ಅವರ ಭಾರತ ಜೋಡೋ ಸಂದರ್ಭದಲ್ಲಿ ಮಳೆ ಬಂದು ಅವ್ಯವಸ್ಥೆಯಾದಾಗ ಕಾರ್ಯಕ್ರಮ ಯಶಸ್ಸಿಗೆ ಅವರು ಹಾಗೂ ಅವರ ಕಾರ್ಯಕರ್ತರು ಪಟ್ಟ ಕಷ್ಟ ನೆನೆಯುತ್ತೇವೆ ಎಂದು ಹೇಳಿದರು.
==
ನನ್ನ ಆತ್ಮೀಯ ಸ್ನೇಹಿತ
ಆತ್ಮೀಯ ಸ್ನೇಹಿತರು ಹಾಗೂ ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಸಚಿವರು, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಡಿ.ಸುಧಾಕರ್ ಅವರು ಅನಾರೋಗ್ಯದಿಂದ ನಿಧನರಾಗಿರುವ ಸುದ್ದಿ ಕೇಳಿ ಆಘಾತವಾಯಿತು.
ಜನಸೇವೆಯನ್ನೇ ಧ್ಯೇಯವಾಗಿಸಿಕೊಂಡು ಸರಳತೆ, ಸೌಜನ್ಯ ಮತ್ತು ಮಾನವೀಯ ಮೌಲ್ಯಗಳ ಮೂಲಕ ಎಲ್ಲರ ಮನ ಗೆದ್ದಿದ್ದ ಅವರ ಅಗಲಿಕೆ ರಾಜ್ಯಕ್ಕೆ ಹಾಗೂ ಅಪಾರ ಅಭಿಮಾನಿ ಬಳಗಕ್ಕೆ ತುಂಬಲಾರದ ನಷ್ಟವಾಗಿದೆ.
ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬದ ಸದಸ್ಯರು, ಬಂಧು-ಬಳಗ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಸೋಮವಾರ ಚಳ್ಳಕೆರೆಯಲ್ಲಿ ಸಂಜೆ 4.00 ಗಂಟೆಗೆ ಸಕಲ ಸರ್ಕಾರಿ ಗೌರವದೊಂದಿಗೆ ಅವರ ಅಂತ್ಯಕ್ರಿಯೆ ನಡೆಯಲಿದ್ದು, ನಾನು ಸಹ ಭಾಗಿಯಾಗುತ್ತೇನೆ.
ಟಿ.ರಘುಮೂರ್ತಿ
ಶಾಸಕರು
===

ನಿಮ್ಮ ನೆನಪು ಸದಾ ಜೀವಂತ ಸುದಣ್ಣ

ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದಂತಹ ಡಿ.ಸುಧಾಕರ್ ಅಣ್ಣ ಇವತ್ತು ನಮ್ಮೊಡನೆ ಇಲ್ಲ ಆದರೆ ಅವರು ಮಾಡಿರುವಂತಹ ಅಭಿವೃದ್ಧಿ ಕಾರ್ಯಗಳು ಅವರನ್ನು ನೆನಪಿಸುವಂತೆ ಮಾಡುತ್ತಿದೆ, ಚಿತ್ರದುರ್ಗ ಜಿಲ್ಲೆಗೆ ಸಾಕಷ್ಟು ಹೊಸ ಹೊಸ ಯೋಜನೆಗಳನ್ನ ತಂದು ಜಿಲ್ಲೆಯನ್ನು ಅಭಿವೃದ್ಧಿಪಡಿಸಬೇಕು ಎನ್ನುವ ಅಭಿಲಾಷೆಯನ್ನು ಹೊಂದಿದಂತ ವ್ಯಕ್ತಿ ಇವತ್ತು ನಮ್ಮ ಬಳಿ ಇಲ್ಲ ಎನ್ನುವುದು ಮನಸ್ಸಿಗೆ ಬರಸಿಡಿಲು ಬಡಿದಂತಾಗಿದೆ ಎಂದು ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಅವರು ತಿಳಿಸಿದರು.

ಸುದಣ್ಣ ಹೇಗಿದ್ದೀಯಾ? ಚೆನ್ನಾಗಿದ್ದೀಯಾ? ಸ್ವಲ್ಪ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕಡೆ ಸ್ವಲ್ಪ ಗಮನಹರಿಸಣ ಎನ್ನುತ್ತಲೆ ಫೋನ್ನಲ್ಲಿ ಸಂಭಾಷಣೆ ಮಾಡುತ್ತಿದ್ದೆ, ಸುದಣ್ಣ ಎನ್ನುತ್ತಲೆ ನಾನು ಅವರನ್ನು ಮಾತನಾಡಿಸುತ್ತಿದೆ, ಸಚಿವರಾಗಿದ್ದರು ಸಹ ಆತ್ಮೀಯವಾಗಿ ಪ್ರೀತಿಯ ತಮ್ಮನಂತೆ ನನ್ನನ್ನ ಅಪ್ಪಿಕೊಳ್ಳುತ್ತಿದ್ದರು ತಮಾಷೆಗಾಗಿ ಕೀಟಲೆ ಮಾಡುತ್ತಿದ್ದರು ಅಂತಹ ವ್ಯಕ್ತಿಯ ನಿಧನದ ಸುದ್ದಿ ಕೇಳಿ ಮನಸ್ಸಿಗೆ ಅಪಾರ ವೇದನೆ ಉಂಟುಮಾಡಿದೆ.

ಡಿ.ಸುಧಾಕರ್ ಅವರು 2008ರಿಂದ ಹಿರಿಯೂರು ಶಾಸಕರಾಗಿದ್ದರು. ಎರಡನೇ ಬಾರಿಗೆ ಮಂತ್ರಿಯಾಗಿದ್ದ ಅವರು ಅತ್ಯಂತ ಜನಪ್ರಿಯ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು ಅಷ್ಟೇ ಅಲ್ಲದೆ. ಎರಡನೇ ಬಾರಿಗೆ ಶಾಸಕರಾದ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ಸಹಕಾರ ಕ್ಷೇತ್ರದಲ್ಲಿಯೂ ಸಾಕಷ್ಟು ಕೊಡುಗೆ ನೀಡಿರುವ ಅವರು ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆಗಿದ್ದರು ಒಟ್ಟಿನಲ್ಲಿ ಡಿ.ಸುಧಾಕರ್ ಜನ ಮೆಚ್ಚಿದ ನಾಯಕನಾಗಿ ಜನ ಪ್ರೀತಿ ವಿಶ್ವಾಸನ ಪಡೆದಂತಹ ವ್ಯಕ್ತಿಯಾಗಿದರು.

ನನ್ನ ರಾಜಕೀಯ ಜೀವನದ ಪ್ರತಿಯೊಂದು ಹಂತದಲ್ಲೂ ಅಣ್ಣನಂತೆ ಮಾರ್ಗದರ್ಶನ ನೀಡಿದವರು, ಆತ್ಮೀಯ ಸ್ನೇಹಿತರೂ ಆಗಿದ್ದ ಡಿ.ಸುಧಾಕರ್ ಅವರು ಸರಳತೆ, ಜನಪರ ಕಾಳಜಿ ಹಾಗೂ ನಿಸ್ವಾರ್ಥ ಸೇವೆಯ ಮೂಲಕ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದ ಗುರುತು ಮೂಡಿಸಿದ್ದರು ಅವರು ಇವತ್ತು ನಮ್ಮ ಜೊತೆ ಇಲ್ಲದೆ ಇರುವುದು ಮನಸ್ಸಿಗೆ ಗಾಸಿಗೊಳಿಸಿದೆ.

ಡಿ.ಸುಧಾಕರ್ ರವರನ್ನ ಸಚಿವರಾಗಿದ್ದರು ಸಹ ನಾನು ಸುದಣ್ಣ ಅಂತಲೆ ಅವರನ್ನು ಕರೆಯುತ್ತಿದ್ದೆ, ಅವರ ಅಗಲಿಕೆ ನನ್ನ ವೈಯಕ್ತಿಕ ಜೀವನಕ್ಕೂ ಹಾಗೂ ರಾಜ್ಯ ರಾಜಕೀಯಕ್ಕೂ ತುಂಬಲಾರದ ನಷ್ಟವಾಗಿದೆ. ಭಗವಂತನು ಅವರ ದಿವ್ಯಾತ್ಮಕ್ಕೆ ಚಿರಶಾಂತಿ ಕರುಣಿಸಲಿ. ಅವರ ಕುಟುಂಬದವರಿಗೆ, ಬಂಧು-ಬಳಗಕ್ಕೆ ಹಾಗೂ ಅಪಾರ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
==

Chitradurga News. D Sudhakar Death News Minister D Sudhakar ಕರ್ನಾಟಕ ರಾಜಕೀಯ ಸುದ್ದಿ ಚಳ್ಳಕೆರೆ ಸುಧಾಕರ್ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರು ಡಿ. ಸುಧಾಕರ್ ಅಂತ್ಯಕ್ರಿಯೆ ​ಡಿ. ಸುಧಾಕರ್ ನಿಧನ ಸಚಿವ ಸುಧಾಕರ್ ವಿಧಿವಶ ಹಿರಿಯೂರು ಶಾಸಕರು
Follow on Facebook Follow on Instagram
Share. Facebook Twitter WhatsApp Telegram
Previous Articleಮೈಸೂರು ಕೆಫೆ ಮಾಲೀಕ ವೇದವ್ಯಾಸ ಆಚಾರ್ಯ ( ಅಣ್ಣಾದೊರೈ) ನಿಧನ
Next Article 11/05/2026 ರ ನಿತ್ಯ ಭವಿಷ್ಯ
Times Of Bayaluseeme Staff
  • Website

Related Posts

ಮೈಸೂರು ಕೆಫೆ ಮಾಲೀಕ ವೇದವ್ಯಾಸ ಆಚಾರ್ಯ ( ಅಣ್ಣಾದೊರೈ) ನಿಧನ

May 10, 2026

ಸಚಿವ ಡಿ. ಸುಧಾಕರ್ ನಿಧನ; ಸಾರ್ವಜನಿಕ ಅಂತಿಮ ದರ್ಶನ

May 10, 2026

ಚಿತ್ರದುರ್ಗ ಜಿಲ್ಲೆಗೆ ಬರಸಿಡಿಲು; ‘ಸೋಲಿಲ್ಲದ ಸರದಾರ’ ಇನ್ನು ನೆನಪು

May 10, 2026
Add A Comment
Leave A Reply Cancel Reply

Advertisement
Latest Posts

11/05/2026 ರ ನಿತ್ಯ ಭವಿಷ್ಯ

ಸೋಲಿಲ್ಲದ ಸರದಾರನ ಪಯಣ ಅಂತ್ಯ: ಸಚಿವ ಡಿ. ಸುಧಾಕರ್ ಅಕಾಲಿಕ ನಿಧನಕ್ಕೆ ರಾಜ್ಯಸ್ತಬ್ದ

ಮೈಸೂರು ಕೆಫೆ ಮಾಲೀಕ ವೇದವ್ಯಾಸ ಆಚಾರ್ಯ ( ಅಣ್ಣಾದೊರೈ) ನಿಧನ

10/05/2026 ರ ನಿತ್ಯ ಭವಿಷ್ಯ

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 ThemeSphere. Designed by ThemeSphere.
  • Privacy Policy
  • Terms
  • Accessibility

Type above and press Enter to search. Press Esc to cancel.