ಅನುದಾನ ನಿರೀಕ್ಷೆಯಲ್ಲೂ ತಪ್ಪು ಮಾಹಿತಿ: ತೀವ್ರ ತರಾಟೆ
ಜನಸ್ನೇಹಿ ಪಾದಚಾರಿ ಮಾರ್ಗಗಳ ಅಭಿವೃದ್ಧಿಗೆ 10 ಕೋಟಿ ರೂ. ಮೀಸಲು ಇಟ್ಟಿರುವ ಮಹಾನಗರ ಪಾಲಿಕೆ, ಪಾರಂಪರಿಕ ಕಟ್ಟಡಗಳ ಅಭಿವೃದ್ಧಿಗೆ ನಯಾಪೈಸೆ ಅನುದಾನ ನೀಡಿಲ್ಲ. ಹೀಗಾಗಿ ಮಹಾನಗರ ಪಾಲಿಕೆಗೆ ಮಂಡಿಸಲಾದ 2026-27ನೇ ಸಾಲಿನ ಆಯವ್ಯಯವು ಸತ್ವ ಇಲ್ಲದ ಬಜೆಟ್ ಆಗಿದೆ ಮಾಜಿ ಮೇಯರ್ ಶಿವಕುಮಾರ್ ಟೀಕಿಸಿದ್ದಾರೆ.
ಮಹಾನಗರ ಪಾಲಿಕೆ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ನಾನು ಮೇಯರ್ ಆಗಿದ್ದಾಗ ಪಾರಂಪರಿಕ ಕಮಾನುಗಳ ರಕ್ಷಣೆಗಾಗಿ 3 ಕೋಟಿ ರೂ. ಅನುದಾನ ಮೀಸಲು ಇಟ್ಟಿದ್ದೆ. ಪಾರಂಪರಿಕ ಇಲಾಖೆಗೆ ಪ್ರಸ್ತಾವನೆಯನ್ನೂ ಸಲ್ಲಿಸಿದರೂ ಅನುದಾನ ಬಳಕೆ ಆಗಲಿಲ್ಲ.
ಮೈಸೂರು ಪಾರಂಪರಿಕ ನಗರ ಎಂದು ಪ್ರಸಿದ್ಧಿಯಾಗಿದೆ. ಇಲ್ಲಿನ ಪಾರಂಪರಿಕ ಕಟ್ಟಡಗಳನ್ನು ಉಳಿಸುವುದು ಪಾಲಿಕೆಯ ಆದ್ಯತೆ ಕರ್ತವ್ಯ ಆಗಬೇಕಿತ್ತು. ವರ್ಷಕ್ಕೊಂದು ಪಾರಂಪರಿಕ ಕಟ್ಟಡ ಸಂರಕ್ಷಿಸಲು ಮುಂದಾಗಿದ್ದರೂ ಎಷ್ಟೋ ಅನುಕೂಲ ಆಗುತ್ತಿತ್ತು. ಆದರೆ ಇಡೀ ಬಜೆಟ್‌ನಲ್ಲಿ ಪಾರಂಪರಿಕ ಕಟ್ಟಡಗಳ ಬಗ್ಗೆ ಪ್ರಸ್ತಾಪವೇ ಇಲ್ಲದೆ ಇರುವುದು ನಿರಾಸೆ ಮೂಡಿಸಿದೆ.
ಕೃಷ್ಣರಾಜ, ನರಸಿಂಹರಾಜ, ಚಾಮರಾಜ ಕ್ಷೇತ್ರಗಳಲ್ಲಿ ಮೂರು ಮಾರುಕಟ್ಟೆ ನಿರ್ಮಿಸುವುದಾಗಿ ಹೇಳಲಾಗಿದೆ. ಆದರೆ ನಗರದ ವಾಣಿ ವಿಲಾಸ ಮಾರುಕಟ್ಟೆ, ಮಂಡಿ ಮಾರುಕಟ್ಟೆ, ದೇವರಾಜ ಮಾರುಕಟ್ಟೆಗಳು ಕುಸಿದು ಬಿದ್ದಿವೆ. ಹಳೇ ಮಾರುಕಟ್ಟೆಗಳನ್ನು ರಿಪೇರಿ ಮಾಡಿಸಲು ಸಾಧ್ಯವಾಗದ ಪಾಲಿಕೆಯಿಂದ ಹೊಸ ಮಾರುಕಟ್ಟೆಗಳ ನಿರ್ಮಾಣ ಸಾಧ್ಯವೇ ? ಈಗ ಇರುವ ಶೌಚಾಲಯಗಳನ್ನೇ ನಿರ್ವಹಣೆ ಮಾಡಲು ಸಾಧ್ಯವಾಗದ ಪಾಲಿಕೆಯು ಪಾರಂಪರಿಕ ಶೈಲಿಯ ಹೊಸ ಶೌಚಾಲಯ ನಿರ್ಮಿಸಿರುವುದಾಗಿ ಘೋಷಿಸಿರುವುದು ಹಾಸ್ಯಾಸ್ಪದ ಎಂದು ವ್ಯಂಗ್ಯವಾಡಿದ್ದಾರೆ.
ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಂದ ದಿವಾಳಿ ಆಗಿದ್ದು, ಮಹಾನಗರ ಪಾಲಿಕೆಯ ಸಿಬ್ಬಂದಿಯ ಸಂಬಳಕ್ಕೆ ತಗುಲುವ ಶೇ.20ರಷ್ಟು ಮೊತ್ತವನ್ನು ಸ್ಥಳೀಯ ಆದಾಯದಲ್ಲೇ ಭರಿಸುವಂತೆ ಸೂಚಿಸಿದೆ. ಹೀಗಿರುವಾಗ ರಾಜ್ಯ ಸರ್ಕಾರ ಎಸ್‌ಎಫ್‌ಸಿ ಅನುದಾನ ನೀಡಲಿದೆ ಎಂಬ ಆಶಾಗೋಪುರ ಕಟ್ಟಿಕೊಳ್ಳಲಾಗಿದೆ.
ಇನ್ನು 16ನೇ ಹಣಕಾಸು ಆಯೋಗದಿಂದ 103 ಕೋಟಿ ರೂ. ಅನುದಾನ ದೊರಕಲಿದೆ ಎಂದು ಬಜೆಟ್ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ. ಆರ್ಥಿಕ ಇಲಾಖೆಯ ಮಾರ್ಗಸೂಚಿಯ ಅನ್ವಯ, 16ನೇ ಹಣಕಾಸು ಆಯೋಗದಿಂದ ಹಣ ನೀಡಲು ಜನಪ್ರತಿನಿಧಿಗಳನ್ನು ಒಳಗೊಂಡ ಸ್ಥಳೀಯ ಸರ್ಕಾರ ಇರಬೇಕು. ಜತೆಗೆ 20 ವರ್ಷಗಳಿಂದಲೂ ಜಾರಿಯಲ್ಲಿರುವ ವಾಹನಗಳ ಜಿಪಿಎಸ್ ವ್ಯವಸ್ಥೆ, ಗುಣಮಟ್ಟ ಪರೀಕ್ಷಾ ಕೇಂದ್ರಗಳನ್ನು ಬಜೆಟ್‌ನಲ್ಲಿ ತೋರಿಸುವುದು ಇದೊಂದು ಕಾಟಾಚಾರದ ಬಜೆಟ್ ಎಂಬುದನ್ನು ನಿರೂಪಿಸುತ್ತಿದೆ ಎಂದು ದೂರಿದ್ದಾರೆ
