ಬೈ ಎಲೆಕ್ಷನ್ ಅಖಾಡಕ್ಕೆ ಜಮೀರ್ ಎಂಟ್ರಿ ; ಕ್ಷೇತ್ರದಲ್ಲೇ ಮೊಕ್ಕಂ
ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪಚುನಾವಣೆಯನ್ನು ಕಾಂಗ್ರೆಸ್ ತೀವ್ರ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಯಾವುದೇ ಕಾರಣಕ್ಕೂ ಎರಡು ಕ್ಷೇತ್ರಗಳನ್ನು ಬಿಟ್ಟು ಕೊಡಬಾರದು ಎಂಬ ಹಠಕ್ಕೆ ಬಿದ್ದಿದೆ. ಈ ಕಾರಣಕ್ಕೆ
ಗೆಲುವಿಗಾಗಿ ವಿಶೇಷ ರಣತಂತ್ರ ರೂಪಿಸಿದೆ.
ಬೆಂಗಳೂರಿನ ರಾಜಭವನ ರಸ್ತೆಯ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಸಂಜೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷ (ಸಿಎಲ್ ಪಿ) ಸಭೆಯಲ್ಲಿ ಸಚಿವರು ಮತ್ತು ಶಾಸಕರಿಗೆ ಕ್ಷೇತ್ರದಲ್ಲೇ ಮೊಕ್ಕಾಂ ಹೂಡಲು ಖುದ್ದು ಉಸ್ತುವಾರಿ ಸುರ್ಜೇವಾಲ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಮುಖ್ಯವಾಗಿ ಅಲ್ಪಸಂಖ್ಯಾತ ಮತಗಳ ಭೇಟೆಗೆ ಜಮೀರ್ ಅಹ್ಮದ್ ಖಾನ್ ಮತ್ತು ತನ್ವೀರ್ ಸೇಠ್ ಅವರಿಗೆ ಜವಾಬ್ದಾರಿ ವಹಿಸಲಾಗಿದೆ.
ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬಾರದು, ಗೆಲ್ಲಲೇಬೇಕು. ಎಲ್ಲಾ ಸಚಿವರು, ಶಾಸಕರು ಹಾಗೂ ಪಕ್ಷದ ಪದಾಧಿಕಾರಿಗಳು ಕಡ್ಡಾಯವಾಗಿ ಕನಿಷ್ಠ 10 ದಿನ ಕ್ಷೇತ್ರದಲ್ಲೇ ತಂಗಿ ಕೆಲಸ ಮಾಡಬೇಕು ಎಂದು ಸಂದೇಶ ರವಾನಿಸಿದ್ದಾರೆ.
ಸಮುದಾಯವಾರು ಮತಗಳನ್ನು ಸೆಳೆಯುವ ಉದ್ದೇಶದಿಂದ ಪ್ರತ್ಯೇಕ ನಾಯಕರಿಗೆ ಜವಾಬ್ದಾರಿಗಳನ್ನು ಹಂಚಲಾಗಿದೆ. ಮತ ಬ್ಯಾಂಕ್‌ಗಳನ್ನು ಗರಿಷ್ಠ ಮಟ್ಟದಲ್ಲಿ ಪರಿವರ್ತಿಸಲು ಕಾರ್ಯತಂತ್ರ ರೂಪಿಸಲಾಗಿದೆ. ಅಲ್ಪಸಂಖ್ಯಾತರ ಅಸಮಾಧಾನ ಶಮನಗೊಳಿಸುವ ಹೊಣೆಗಾರಿಕೆಯನ್ನು ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ತನ್ವೀರ್ ಸೇಠ್ ಅವರಿಗೆ ನೀಡಲಾಗಿದೆ.
