ಖಾಕಿ ಬಲೆಗೆ ದೇವಸ್ಥಾನಗಳ ಹುಂಡಿ ಕಳ್ಳರು; ಅಂತರ ಜಿಲ್ಲಾ ಜಾಲ ಪತ್ತೆ
ಜಿಲ್ಲೆಯ ಸುಪ್ರಸಿದ್ಧ ಧಾರ್ಮಿಕ ಕೇಂದ್ರವಾದ ದೇವಪುರ ಗ್ರಾಮದ ಶ್ರೀ ಹಾಲುರಾಮೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದಿದ್ದ ಹುಂಡಿ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಹೊಸದುರ್ಗ ಪೊಲೀಸರು ಯಶಸ್ವಿಯಾಗಿದ್ದಾರೆ. ಅಂತರ ಜಿಲ್ಲಾ ಮಟ್ಟದಲ್ಲಿ ದೇವಸ್ಥಾನಗಳನ್ನೇ ಗುರಿಯಾಗಿಸಿಕೊಂಡಿದ್ದ ಮೂವರು ಆರೋಪಿತರನ್ನು ಬಂಧಿಸಿ, ಅವರಿಂದ ನಗದು ಹಾಗೂ ಬೈಕ್ ವಶಪಡಿಸಿಕೊಳ್ಳಲಾಗಿದೆ.
ಕಳೆದ ಅಕ್ಟೋಬರ್ 27, 2025 ರಂದು ಹೊಸದುರ್ಗ ತಾಲೂಕಿನ ದೇವಪುರ ಗ್ರಾಮದ ಬಳಿಯ ಗಂಗಮ್ಮ ದೇವಸ್ಥಾನದ ಹುಂಡಿಯನ್ನು ಒಡೆದಿದ್ದ ಕಳ್ಳರು, ಅದರಲ್ಲಿದ್ದ ಸುಮಾರು 50,000/- ರೂ. ಹಣವನ್ನು ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಮೊ.ನಂ. 499/2025 ರಡಿ ಪ್ರಕರಣ ದಾಖಲಾಗಿತ್ತು.
ಸಿಸಿಟಿವಿ ದೃಶ್ಯಾವಳಿ ಹಾಗೂ ತಾಂತ್ರಿಕ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು ಮಾರ್ಚ್ 25, 2026 ರಂದು ತರೀಕೆರೆ ತಾಲ್ಲೂಕಿನ ಸಿದ್ದರಹಳ್ಳಿಯ ಪ್ರಭಾಕರ (40), ಅಜ್ಜಂಪುರದ ಚಿಕ್ಕನಾವಂಗಲ ಗ್ರಾಮದವ ಸದಾನಂದ (24) ಹಾಗೂ ಸ್ವಾಗತ್ (23)ನನ್ನು ಬಂಧಿಸಿದ್ದಾರೆ.
ಕಳ್ಳತನ ಮಾಡಿದ್ದ ಹಣದ ಪೈಕಿ 20,000/- ರೂ. ನಗದು.
ಕೃತ್ಯಕ್ಕೆ ಬಳಸಿದ್ದ ಸುಮಾರು 80,000/- ರೂ. ಮೌಲ್ಯದ ಬಜಾಜ್ ಡಿಸ್ಕವರಿ ಮೋಟಾರು ಸೈಕಲ್ ವಶಪಡಿಸಿಕೊಂಡಿದ್ದಾರೆ.
ಬಂಧಿತರು ಕೇವಲ ಹೊಸದುರ್ಗ ಮಾತ್ರವಲ್ಲದೆ, ತಿಪಟೂರು ಗ್ರಾಮಾಂತರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ದೇವಸ್ಥಾನಗಳಲ್ಲಿ ಹುಂಡಿ ಕಳ್ಳತನ ಮಾಡಿರುವುದಾಗಿ ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದಾರೆ. ಇವರಿಂದ ಇನ್ನೂ ಹಲವು ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆಯಿದೆ.
ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ರಂಜಿತ್ ಕುಮಾರ್ ಬಂಡಾರು (IPS) ಹಾಗೂ ಹೆಚ್ಚುವರಿ ಎಸ್ಪಿ ಡಾ. ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ, ಡಿವೈಎಸ್‌ಪಿ ಶಿವಕುಮಾರ್ ಟಿ.ಎಂ. ಉಸ್ತುವಾರಿಯಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆದಿದೆ.
ಹೊಸದುರ್ಗ ಸಿಪಿಐ ರಮೇಶ್ ಕೆ.ಟಿ. ನೇತೃತ್ವದಲ್ಲಿ ಪಿಎಸ್‌ಐಗಳಾದ ಶ್ರೀಶೈಲ, ಮಹೇಶ್ ಕುಮಾರ್ ಎನ್. ಹಾಗೂ ಸಿಬ್ಬಂದಿಗಳ ತಂಡ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.
