ಅಂತಿಮಘಟ್ಟಕ್ಕೆ ಹೈ-ಪ್ರೊಫೈಲ್ ಕೊಲೆ ಪ್ರಕರಣ ; ಜಡ್ಜ್ ಮೆಂಟ್ ನತ್ತ ಎಲ್ಲರ ಚಿತ್ತ ; ಶುರುವಾಯ್ತು ಟೆನ್ಷನ್
ಟಿಒಬಿ ನ್ಯೂಸ್ ಬೆಂಗಳೂರು .ಧಾರವಾಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದ ವಿಚಾರಣೆ ಪೂರ್ಣಗೊಂಡಿದ್ದು, ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಏಪ್ರಿಲ್ 2ರಂದು ತೀರ್ಪು ಪ್ರಕಟಿಸುವುದಾಗಿ ತಿಳಿಸಿದೆ.
ಕಳೆದ ಆರು ತಿಂಗಳಿನಿಂದ ನಿರಂತರವಾಗಿ ನಡೆದ ವಿಚಾರಣೆ ಬುಧವಾರ ಅಂತ್ಯಗೊಂಡಿದೆ. ಈ ಪ್ರಕರಣದಲ್ಲಿ ಸಿಬಿಐ ಒಟ್ಟು 21 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದು, ಶಾಸಕ ವಿನಯ್ ಕುಲಕರ್ಣಿ 15ನೇ ಆರೋಪಿಯಾಗಿ ಹೆಸರು ಸೇರಿದೆ.
2016ರ ಜೂನ್ 16ರಂದು ಧಾರವಾಡದಲ್ಲಿ ರಾಜಕೀಯ ವೈಷಮ್ಯದಿಂದ ಯೋಗೇಶ್ ಗೌಡ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಅಪರಾಧಿಕ ಒಳಸಂಚು ನಡೆಸಿದ ಆರೋಪ ಇದೆ.
2019ರಲ್ಲಿ ರಾಜ್ಯ ಸರ್ಕಾರ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿತ್ತು. ತನಿಖೆ ಮುಂದುವರೆಸಿದ ಸಿಬಿಐ 2020ರಲ್ಲಿ ವಿನಯ್ ಕುಲಕರ್ಣಿ ಅವರನ್ನು ಬಂಧಿಸಿತ್ತು. ಬಳಿಕ 2021ರಲ್ಲಿ ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತು.
ಆದರೆ ಸಾಕ್ಷಿಗಳಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ 2023ರಲ್ಲಿ ಸುಪ್ರೀಂ ಕೋರ್ಟ್ ಜಾಮೀನು ರದ್ದು ಮಾಡಿತ್ತು. ಇದರಿಂದ ಅವರು ಕಳೆದ ಆರು ತಿಂಗಳು ಜೈಲಿನಲ್ಲಿ ಇದ್ದರು. ನಂತರ ಫೆಬ್ರವರಿ 27ರಂದು ಮತ್ತೆ ಷರತ್ತುಬದ್ಧ ಜಾಮೀನು ಲಭಿಸಿದೆ.
ಈ ಹೈ-ಪ್ರೊಫೈಲ್ ಪ್ರಕರಣದ ತೀರ್ಪು ಇದೀಗ ರಾಜಕೀಯವಾಗಿ ಮಹತ್ವ ಪಡೆದುಕೊಂಡಿದ್ದು, ವಿಶೇಷವಾಗಿ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಹಲವರ ಭವಿಷ್ಯ ಏಪ್ರಿಲ್ 2ರಂದು ಸ್ಪಷ್ಟವಾಗಲಿದೆ.
